News Karnataka Kannada
Friday, April 19 2024
Cricket
ನುಡಿಚಿತ್ರ

ಮಿಸ್ಟರ್ ನಿಂದ ಮಹಾತ್ಮ ಗಾಂಧಿಯಾದ ಭಾರತದ ವಿಶ್ವಾತ್ಮಕ ಸಾಕ್ಷಿಪ್ರಜ್ಞೆ

Photo Credit :

ಮಿಸ್ಟರ್ ನಿಂದ ಮಹಾತ್ಮ ಗಾಂಧಿಯಾದ ಭಾರತದ ವಿಶ್ವಾತ್ಮಕ ಸಾಕ್ಷಿಪ್ರಜ್ಞೆ

“ಕೇವಲ ಮತ್ತೊಬ್ಬ ವಿವೇಕಾನಂದ ಮಾತ್ರ ಈ ವಿವೇಕಾನಂದ ಏನು ಮಾಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ”, ಎಂದು ದೇಹತ್ಯಾಗ ಮಾಡುವ ಕೆಲವು ಕ್ಷಣಗಳ ಮುನ್ನ ಸ್ವಾಮಿ ವಿವೇಕಾನಂದರು ದುಃಖದಿಂದ ಹೇಳಿದ ಮಾತಿದು. ಈ ಮಾತು 150 ವರ್ಷಗಳ ಹಿಂದೆ ಹುಟ್ಟಿದ, ಮಹಾತ್ಮ ಗಾಂಧೀಜಿಯವರಿಗೂ ಅನ್ವಯವಾಗುತ್ತದೆ. ಗಾಂಧಿ ಮತ್ತು ವಿವೇಕಾನಂದರನ್ನು ಅವರ ಕಾಣ್ಕೆಯ ತಾತ್ವಿಕತೆಯಲ್ಲಿ ಅರ್ಥಮಾಡಿಕೊಳ್ಳುವ ಬದಲು ಪೂಜಿಸುವ ಅಥವಾ ದ್ವೇಷಿಸುವ ಏಕರೂಪಿ ವಿಧಾನ ನಮ್ಮ ನಡುವಿದೆ. ಗಾಂಧಿ ಎಷ್ಟು ಸರಳವೋ, ಅರ್ಥವಾಗದವರಿಗೆ ಸಂಕೀರ್ಣ ಕೂಡ. ಗಾಂಧಿ ಅರ್ಥವಾಗಲು ಗಾಂಧಿಯಂತೆ ಇರಬೇಕಾದ್ದು ಅನಿವಾರ್ಯ. ಕನಿಷ್ಟ ಅಂತಹ ಮನಸ್ಥಿತಿ ಗಾಂಧಿ ದರ್ಶನ ಮಾಡಿಸಲು ಸಹಾಯವಾದೀತು.

ಶ್ರೀರಾಮನಂತೆ ಗಾಂಧಿ ಕೂಡ ಭಾರತದ ಆದರ್ಶ ಮತ್ತು ಪ್ರೇರೇಪಿಸುವ ವ್ಯಕ್ತಿತ್ವ. ಗಾಂಧೀಜಿಯ ಪ್ರತೀ ಕ್ಷಣದ ಪ್ರಯೋಗ, ಸವಾಲು, ತೀರ್ಪು ಇತ್ಯಾದಿ ಒಪ್ಪಿದಷ್ಟು ಅವು ಟೀಕೆಗೂ ಗುರಿಯಾಗಿವೆ. ಅಷ್ಟರ ಮಟ್ಟಿಗೆ ಇಬ್ಬರೂ ಕೊನೆಯಿಲ್ಲದ ಮುಕ್ತ ದ್ವಾರಗಳು. ಮೇರುಕೃತಿಯ ನೈತಿಕ ತಳಹದಿಯ ಬುನಾದಿಯಲ್ಲಿ ಬದುಕುವುದು ಸವಾಲಿನ ಕೆಲಸ. ಅದನ್ನು ಬದುಕಲು ಇಬ್ಬರಿಗೂ ಸಾಧ್ಯವಾಯಿತು. ಅವರ ಸತ್ಯದ ಸಾಕ್ಷಾತ್ಕಾರಗಳು ಹೊಸ ದರ್ಶನ ನೀಡಿವೆ. ಸ್ವಾನುಭಾವದ ಹುಡುಕಾಟದ ಸತ್ಯಾನ್ವೇಷಣೆ, ವೈಜ್ಞಾನಿಕ ವಿವೇಚನೆಯ ಸ್ವಯಂ ಆವಿಷ್ಕಾರ ಮತ್ತು ಸಾಕ್ಷತ್ಕಾರಗಳಿಗೆ ಮುಖಾಮುಖಿಯಾಗುವ ಗಾಂಧಿಗೆ ಕಾಲದೇಶಗಳಾಚೆ ನಿತ್ಯನೂತನವಾಗುವ ಗುಣವಿದೆ.

ಆಧುನಿಕ ಕಾಲದಲ್ಲಿ ಗಾಂಧೀಜಿ ಭಾರತದ ಬಹುದೊಡ್ಡ ಜಾಗತಿಕ ಪ್ರತಿಮೆ. ಆದ್ದರಿಂದಲೇ ವಿಶ್ವಸಂಸ್ಥೆ ಗಾಂಧಿ ಜನ್ಮದಿನವನ್ನು ಸಮಗ್ರ ವಿಶ್ವದ ಅಹಿಂಸೆಯ ದಿನವನ್ನಾಗಿ ಮತ್ತು ಅದೊಂದು ಜಾಗತಿಕ ವ್ಯವಹಾರವಾಗಿ ಪರಿಗಣಿಸುತ್ತದೆ. ಪಾಕಿಸ್ತಾನ, ಬ್ರಿಟನ್ ಸೇರಿದಂತೆ 100ಕ್ಕೂ ಹೆಚ್ಚಿನ ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ. ಅಚ್ಚರಿ ಎಂದರೆ ಲಂಡನ್‍ನ ಪಾರ್ಲಿಮೆಂಟ್ ಚೌಕದಲ್ಲಿ, ಗಾಂಧಿಯನ್ನು “ನಗ್ನ ಫಕೀರ” ಅಂತ ಮೂದಲಿಸಿದ್ದ ಚರ್ಚಿಲ್ ಪ್ರತಿಮೆ ಪಕ್ಕದಲ್ಲಿಯೇ ಗಾಂಧೀ ಪ್ರತಿಮೆ ಇದೆ. 70 ದೇಶಗಳ 250 ನಗರಗಳಲ್ಲಿ ಮಹಾತ್ಮ ಗಾಂಧಿ ಹೆಸರಿನ ರಸ್ತೆಯಿದೆ. ಗಾಂಧಿ ಕುರಿತು ಸುಮಾರು 90,000 ಪುಸ್ತಕಗಳನ್ನು ಬರೆಯಲಾಗಿದೆ. 550ಕ್ಕೂ ಅಧಿಕ ಚಲನಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನು ಗಾಂಧಿ ಮೇಲೆ ರಚಿಸಲಾಗಿದೆ. ಇನ್ನು ಭಾರತದಲ್ಲಿ ಎಷ್ಟೇ ಪರ ವಿರೋಧಗಳಿದ್ದರೂ ಗಾಂಧಿ ಎಂಬ ಸಾಕ್ಷಿಪ್ರಜ್ಞೆ ತಲೆಮಾರುಗಳನ್ನು ದಾಟಿಯೂ ನಮ್ಮ ಸಮಾಜವನ್ನು ಆವರಿಸಿಕೊಂಡಿದೆ. ಭೌತಿಕವಾಗಿಯೂ ಗಾಂಧಿ ರಸ್ತೆ ಇಲ್ಲದ ಜಿಲ್ಲೆಯಿಲ್ಲ, ಅವರ ಪ್ರತಿಮೆಯಿಲ್ಲದ ಗ್ರಾಮವಿಲ್ಲ. ಗಾಂಧಿಯಿಲ್ಲದ ಯಾವುದೇ ಸರಕಾರಗಳ ಯೋಜನೆಯಿಲ್ಲ.

ನರೇಂದ್ರ ಮೋದಿ ಕಳೆದ ಅವಧಿಯಲ್ಲಿ ಭಾರತವನ್ನು ಬಹಿರ್ದಸೆಮುಕ್ತ ದೇಶವಾಗಿಸಲು ಮತ್ತು ಜನರಲ್ಲಿ ಸ್ವಚ್ಛತೆಯ ಪ್ರಜ್ಞೆಯ ಮನಸ್ಥಿತಿ ಮೂಡಿಸಲು 2014ರ ಅಕ್ಟೋಬರ್ 2 ರಂದು ಸ್ವಚ್ಛಭಾರತ ಯೋಜನೆ ಘೋಷಿಸಿದಾಗ ಸಾಕಷ್ಟು ಪರವಿರೋಧಗಳು ವ್ಯಕ್ತವಾದವು. ಗಾಂಧಿಯ ಸ್ವಚ್ಛ ಪ್ರಜ್ಞೆಯ ಆನ್ವಯಿಕತೆಗೆ ಶ್ಲಾಘನೆ, ಅಂತೆಯೇ ಗಾಂಧೀಜಿಯನ್ನು ಕೇವಲ ಸ್ವಚ್ಛತೆಗೆ ಸೀಮಿತಗೊಳಿಸುವ ಹುನ್ನಾರ ಎಂಬ ಟೀಕೆ ಎರಡೂ ವ್ಯಕ್ತವಾಗಿವೆ. ಇಂದು ಸ್ಚಚ್ಛಭಾರತ ಯೋಜನೆ ಮೋದಿ ಸರಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 99% ಭೌತಿಕ ಕಟ್ಟಡ ನಿರ್ಮಾಣ ಸೌಕರ್ಯ ಸಾಧ್ಯವಾಗಿದೆ. ಅವುಗಳಿಗೆ ಬೇಕಾದ ಪೂರೈಕೆ ಮತ್ತು ಸ್ವಭಾವಗಳಲ್ಲಿ ಆಕಬೇಕಾದ ಬದಲಾವಣೆ ಕ್ಷಿಪ್ರತೆಯನ್ನು ಪಡೆಯಬೇಕಿದೆ. ಅದೇನೇ ಇರಲಿ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡ ಗಾಂಧಿ, ಶೌಚಗೃಹದ ಅಸ್ವಚ್ಛ ದುರಾವಸ್ಥೆಯನ್ನು ನೋಡಿ ಹೆದರಿದ್ದರಂತೆ. ಅಧಿವೇಶನದ ಅಷ್ಟೂ ಸಮಯ ತಾವೇ ಹೋಗಿ ಶೌಚಾಲಯ ಶುಚಿಗೊಳಿಸುತ್ತಿದ್ದರಂತೆ. ಇದರ ಹಿಂದೆ ಗುರುತರ ಗಂಭೀರತೆ ಮತ್ತು ಬದಲಾಗಬೇಕಾದ ಸಮಾಜದ ಮನಸ್ಥಿತಿ ಮತ್ತು ಜವಾಬ್ದಾರಿಯನ್ನು ಎಚ್ಚರಿಸುವ ಪ್ರಯೋಗಾತ್ಮಕತೆ ಅಡಗಿತ್ತು. ಗಾಂಧೀಜಿಯ ಸ್ವಚ್ಛತೆಯ ಪರಿಕಲ್ಪನೆ ಪ್ರಾರಂಭವಾಗುವುದು ಹೃದಯ ಮತ್ತು ಮೆದುಳಿನಿಂದ.

ಐನ್‍ಸ್ಟೈನ್ ಮತ್ತು ಗಾಂಧಿ

2000ನೆ ಇಸವಿಯಲ್ಲಿ ಬಿಬಿಸಿ ಹಾಗೂ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ಜಂಟಿಯಾಗಿ, ಕಳೆದ 1000 ವರ್ಷಗಳಲ್ಲಿ ಮಾನವ ನಾಗರೀಕತೆಯ ಮೇಲೆ ಅತೀ ಹೆಚ್ಚು ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳನ್ನು ಜನರಿಂದ ಹುಡುಕುವ ಸಮೀಕ್ಷೆ ನಡೆಸಿದವು. ಅದರಲ್ಲಿ ಯಾವುದೇ ಅಚ್ಚರಿಯಿಲ್ಲದೆ ಆರಿಸಿಬಂದ ಮೊದಲ ಹೆಸರು ಭಾರತದ ಗಾಂಧೀಜಿ. ಎರಡನೆಯ ಹೆಸರು ಗಾಂಧೀಜಿಯ ಪ್ರಭಾವಕ್ಕೆ ಒಳಪಟ್ಟಿದ್ದ, ಸಾಪೇಕ್ಷತಾ ವಾದ ಕೊಟ್ಟ ಆಲ್ಬರ್ಟ್ ಐನ್‍ಸ್ಟೈನ್. ಗಾಂಧೀಜಿ ನೈತಿಕ ಸಬಲೀಕರಣದ ಅಡಿಪಾಯದಲ್ಲಿ ಒಡಮೂಡಿದ ಅಹಿಂಸೆ ಮತ್ತು ಸತ್ಯಾಗ್ರಹಗಳ ಮೂಲಕ ಯುದ್ಧಗಳ ನಡುವೆ ಕಂಗೆಟ್ಟಿದ್ದ ವಿಶ್ವಕ್ಕೆ ಹೊಸ ದಾರ್ಶನಿಕತೆಯ ತಂಗಾಳಿ ನೀಡಿದವರು. ಹಾಗೆಂದು ಸಂತನಾಗಿ ಬೋಧಿಸಲಿಲ್ಲ, ಅದಕ್ಕೆ ಅವರು ಧರ್ಮಗುರುವಾಗಲಿಲ್ಲ. ಬದಲಾಗಿ ಪ್ರತಿಯೊಂದನ್ನೂ ತಾವೇ ಎದುರಿಸಿ, ಅನ್ವೇಷಿಸಿ, ಪ್ರಯೋಗಿಸಿ, ಸೋತಾಗ ಸರಿಪಡಿಸಿಕೊಂಡು ಮತ್ತು ಗೆದ್ದಾಗ ಗೆಲುವಿನ ಅರಿವನ್ನು ವಿಸ್ತರಿಸುವ, ಅಧಿಕಾರದ ಹಿಂದೆ ಬೀಳದೆ ಆದರೆ ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ, ಎಲ್ಲರೂ ನಿಬ್ಬೆರಗಾಗುವಂತೆ, ನೆಲದೊಂದಿಗೆ ಬೆಸೆದುಕೊಂಡ ಹೋರಾಟದ ಪಯಣವೇ ಗಾಂಧಿಯನ್ನು ಜಾತಿ, ಮತ, ಪಂಗಡ, ದೇಶ, ನಂಬಿಕೆ, ಭಾಷೆ, ಇತ್ಯಾದಿ ಸಂಕುಚಿತ ಎಲ್ಲೆಗಳನ್ನು ಮೀರಿಯೂ ಸರ್ವರೂ ಅಪ್ಪಿಕೊಂಡು, ಒಪ್ಪಿಕೊಳ್ಳುವ ವಿಶ್ವನಾಯಕನನ್ನಾಗಿಸಿದ್ದು.

ಐನ್‍ಸ್ಟೈನ್ ಮತ್ತು ಗಾಂಧಿ ಪರಸ್ಪರ ಭೇಟಿಯಾಗದಿದ್ದರೂ ಪತ್ರ ವ್ಯವಹಾರವಿತ್ತು. ಹಾಗೆ ನೋಡಿದರೆ ಇಬ್ಬರಲ್ಲೂ ಒಂದು ವಿಶೇಷವಿದೆ. ಮತ್ತು ವಿಶ್ವದ ಮುಂದೆ ಯಾವುದೇ ಕಾಲದಲ್ಲಿಯೂ ಎರಡು ಆಯ್ಕೆಗಳಿವೆ. ಒಂದು ಐನ್‍ಸ್ಟೈನ್ ಮಾರ್ಗ ಮತ್ತೊಂದು ಗಾಂಧಿಮಾರ್ಗ. ಐನ್‍ಸ್ಟೈನ್ ನೀಡಿದ ಸಿದ್ಧಾಂತ ಆಟಮ್ ಬಾಂಬ್ ತಯಾರಿಕೆಗೆ ಕಾರಣವಾದರೆ, ಎಂತಹ ಪ್ರಬಲವಾದ ಶಕ್ತಿಯುತ ಸಾಮ್ರಾಜ್ಯಗಳ ಮುಂದೆಯೂ ಶಕ್ತಿಯುತವಾಗಿ ಸತ್ಯದ ಸಹಾಯದಿಂದ ಆದರೆ ಅಹಿಂಸಾತ್ಮಕವಾಗಿ ನಿಲ್ಲುವ ಗಾಂಧಿವಾದ. ಹಾಗೆಂದು ಗಾಂಧಿ ಯುದ್ಧ ಮಾಡಬಾರದು ಎಂದೋ, ಹೋರಾಡಬಾರದು ಎಂದೋ, ಅಥವಾ ಶಕ್ತಿಯ ಮುಂದೆ ಮಂಡಿಯೂರಿ ಎಂದು ಹೇಳಲಿಲ್ಲ. ಬರುವ ಸವಾಲುಗಳನ್ನು ಧೈರ್ಯವಾಗಿ ಆದರೆ ನೈತಿಕ ಮಾರ್ಗದಿಂದ ಗೆಲ್ಲಬೇಕು ಎಂಬುದೇ ಗಾಂಧೀಜಿಯ ಸತ್ಯಾಗ್ರಹ ಮತ್ತು ಅಹಿಂಸಾಮಾರ್ಗದ ಅಡಿಪಾಯ. ಜರ್ಮನಿ ವಿರುದ್ಧ ಹೋರಾಡಲು ಆಟಂ ಬಾಂಬ್ ತಯಾರಿಸಿ ಎಂದು ಅಮೆರಿಕದ ರಾಷ್ಟ್ರಪತಿ ರೂಸ್‍ವೆಲ್ಟ್‍ಗೆ ಪತ್ರ ಬರೆದಿದ್ದ ಐನ್‍ಸ್ಟೈನ್, ತನ್ನ ಇಳಿವಯಸ್ಸಿನಲ್ಲಿ ಗಾಂಧಿಯನ್ನು ನೆನೆದು, ತನ್ನ ಜೀವನದ ಬಹುದೊಡ್ಡ ತಪ್ಪಾದ ಆ ಪತ್ರಕ್ಕೆ ಪಶ್ಚಾತಾಪ ವ್ಯಕ್ತಪಡಿಸುತ್ತಾನೆ.

ಗಾಂಧಿಯೊಳಗಿನ ಚಾಣಾಕ್ಯ

ಗಾಂಧಿಯೊಳಗೊಬ್ಬ ಚಾಣಾಕ್ಯ ಇದ್ದಾನೆ. ಅವರಿಬ್ಬರಿಗೂ ಒಂದು ಸಾಮ್ಯತೆಯಿದೆ. ಇಬ್ಬರ ಆಶಯವೂ ದೇಶಕ್ಕೆ ಜನಕೇಂದ್ರಿತ ತಳಹದಿಯನ್ನು ನಿರ್ಮಿಸುವುದಾಗಿತ್ತು. ಇಬ್ಬರಿಗೂ ಪ್ರಜೆಗಳ ಸಂತೋಷವೇ ಆದ್ಯ. ಸದಾ ಚರ್ಚೆಗೆ ಒಳಪಡುವ ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಇಬ್ಬರೂ ಪ್ರಾರಂಭಿಕ ಪ್ರಯತ್ನಗಳಲ್ಲಿ ಸೋಲುತ್ತಾರೆ. ಆದರೆ ಅದರಿಂದ ಹತಾಶರಾಗದೆ, ಶಕ್ತಿ ದೌರ್ಬಲ್ಯಗಳನ್ನು ಅರಿತು ಮರಳಿ ಯತ್ನ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಗೆಲುವನ್ನೂ ಕಾಣುತ್ತಾರೆ. ಇಬ್ಬರಿಗೂ ಪ್ರಜಾನಾಯಕನಾಗುವ ಅರ್ಹತೆ ಇದ್ದರೂ ಅದನ್ನವರು ನಿರಾಕರಿಸಿ “ರಾಜತಯಾರಕ”ರಾಗಿ, ಅದನ್ನವರು ಅವರಿಗಿಂತ ಕಿರಿಯರಿಗೆ ಬಿಟ್ಟುಕೊಡುತ್ತಾರೆ. ಅಂದು ಚಂದ್ರಗುಪ್ತನಿಗೆ ಒದಗಿದ ಅವಕಾಶ ಸ್ವಾತಂತ್ರ್ಯ ನಂತರ ಮೊದಲ ಹಂತದ ಕಾಂಗ್ರೆಸ್ ನಾಯಕರಿಗೆ ಒದಗುತ್ತದೆ. ರಾಜಕೀಯ ದೂರದೃಷ್ಟಿ, ಆರ್ಥಿಕ-ಸಾಮಾಜಿಕ-ಪ್ರಜಾತ್ಮಕ ವೈಚಾರಿಕತೆ, ಸ್ವರಾಜ್ಯದ ತಾತ್ವಿಕತೆಯಿಂದ ಕೂಡಿದ ಚಾಣಾಕ್ಯನ ಅರ್ಥಶಾಸ್ತ್ರ ಮೌರ್ಯ ಸಾಮ್ರಾಜ್ಯಕ್ಕೆ ಸಂವಿಧಾನ ಮತ್ತು ಸಂವಿಧಾನ ರಚನೆಯ ನೇರ ಭಾಗವಾಗದಿದ್ದರೂ ಗಾಂಧಿ ತಾತ್ವಿಕತೆ ಭಾರತೀಯ ಸಂವಿಧಾನದ ಪ್ರತಿಯೊಂದು ಭಾಗದಲ್ಲೂ ಆಳವಾಗಿ ಬೇರೂರಿದೆ. ಗೆಲ್ಲುವುದು ಅಂದರೆ ಸಾಯಿಸುವುದಲ್ಲ ಎಂಬುದು ಇಬ್ಬರಿಗೂ ತಿಳಿದಿತ್ತು. ಹಾಗಾಗಿಯೇ ಚಾಣಾಕ್ಯ ಚಂದ್ರಗುಪ್ತನ ಮೂಲಕ ಧನನಂದ ಮತ್ತು ಅಲೆಕ್ಸಾಂಡರ್‍ ರನ್ನು ಸೋಲಿಸಿದರೂ ಕೊಲ್ಲಲಿಲ್ಲ. ಚಂದ್ರಗುಪ್ತನ ಜೊತೆ ಸೆಲ್ಯುಕಸ್ ಮಗಳನ್ನು ಮದುವೆ ಮಾಡಿಸಿದ. ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರಗಳಿಲ್ಲದ ಸತ್ಯಾಗ್ರಹೀ ಹೋರಾಟದ ನೇತೃತ್ವವಹಿಸಿ ಅವರು ಸೋಲುವಂತೆ ಮಾಡಿದರೂ ಮುಂದೆ ಬ್ರಿಟನ್ ಜೊತೆಗೆ ಉತ್ತಮ ವ್ಯೂಹಾತ್ಮಕ ಸಂಬಂಧ ಉಳಿಸಿಕೊಳ್ಳುವಂತೆ ಮಾಡಿದ್ದು ಗಾಂಧಿ ಹೆಚ್ಚುಗಾರಿಕೆ.

ಇಲ್ಲಿ ಗಮನಿಸಬೇಕಾದ್ದು ಅಹಿಂಸೆಯನ್ನು ಬೋಧಿಸಿದರೂ ಗಾಂಧಿಯೂ ಕೂಡ ಮಿಲಿಟರಿ ಸೇನೆಯನ್ನು ಮುಚ್ಚುವ ಪರವಾಗಿರಲಿಲ್ಲ. ಸಾಮಾಜಿಕ ಮೌಲ್ಯಗಳ ಸ್ಥಾಪನೆ ಹಾಗೂ ಭಾರತೀಯ ಸ್ವರಾಜ್ಯ ನಿರ್ಮಾಣದ ತಳಹದಿ ಅರ್ಥಶಾಸ್ತ್ರ ಮತ್ತು ಹಿಂದ್ ಸ್ವಾರಜ್ ಕೃತಿಗಳಲ್ಲಿ ಸ್ಪಷ್ಟವಾಗಿದೆ. ಇಬ್ಬರೂ ಭಾರತ ಮತ್ತು ಭಾರತೀಯರ ಅಭ್ಯುದಯಕ್ಕೆ ಗ್ರಾಮ ಸ್ವರಾಜ್ಯದ, ಗ್ರಾಮ ಭಾರತ ಕೇಂದ್ರಿತ ಸ್ವಾವಲಂಭಿ, ಸ್ವದೇಶಿ ಆರ್ಥಿಕ ಮಾದರಿಗಳನ್ನು ನೀಡಿದವರು.  ಓಶೋ, ಐನ್‍ಸ್ಟೈನ್ ಸೇರಿದಂತೆ ಅನೇಕರು ತಪ್ಪಾಗಿ ಭಾವಿಸಿದಂತೆ ಗಾಂಧಿಯ “ಚರಕ” ಕಾಲಚಕ್ರದಲ್ಲಿ ಹಿಂದಕ್ಕೆ ಹೋಗುವುದರ ಸಂಕೇತವಲ್ಲ, ಆದರೆ ಭಾರತೀಯ ಸ್ಥಳೀಯ, ಸ್ವಾವಲಂಭಿ ಆಲೋಚನೆ ಹಾಗೂ ಆರ್ಥಿಕ ಮಾದರಿಗಳಿಂದ ಮುಂದೆ ಸಾಗಬೇಕು ಎಂಬುದರ ಸಂಕೇತ. ಶಿಕ್ಷಣದ ಮೂಲಕ ಕ್ರಾಂತಿ ತರಬೇಕು ಅಂಬುದು ಇಬ್ಬರ ಆಶಯ ಕೂಡ. ಅರ್ಥಶಾಸ್ತ್ರದ ವಿದ್ಯಾಸಮುದ್ದೇಶ ದಲ್ಲಿ ಈ ಬಗ್ಗೆ ಆಳವಾದ ವಿಚಾರಗಳಿವೆ. ಗಾಂಧೀಜಿಯ ರಾಷ್ಟ್ರೀಯ ಶಿಕ್ಷಣ ಮಾದರಿ ಕೂಡ ಸ್ವದೇಶಿ ಶಿಕ್ಷಣದಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ತೊಲಗಿಸುವ ಕಾಯಕಲ್ಪ ಹೊಂದಿತ್ತು. ಮೇಲಾಗಿ ಇಬ್ಬರೂ ಆಳವಾದ ಆಧ್ಯಾತ್ಮಿಕ ಒಳನೋಟವುಳ್ಳ ರಾಷ್ಟ್ರ ನಿರ್ಮಾತೃರು. ಇಬ್ಬರ ಚಿಂತನೆಯಲ್ಲೂ ಆಳವಾದ ಮಾನವಿಕ ಮನೋವೈಜ್ಞಾನಿಕತೆಯಿದೆ. ಆ ಕಾರಣದಿಂದ ಇಬ್ಬರನ್ನೂ ಪ್ರಾಯೋಗಿಕ ಮತ್ತು ವಾಸ್ತವಿಕ ತತ್ವಜ್ಞಾನಿಗಳೆಂದು ವಿಶ್ವ ಗುರುತಿಸುತ್ತದೆ.

ಭಾರತದ ಆತ್ಮ:

ಸೂಟ್ ಬೂಟ್ ತೊಡುತ್ತಿದ್ದ ಎಂ. ಕೆ ಗಾಂಧಿ ಮತ್ತು ಭಾರತನ್ನು ಕಂಡು, ಬೆರೆತು, ಭಾರತಕ್ಕಾಗಿ ತಾನೇ ಹೆಣೆದ ಸರಳ ಬಿಳಿ ವಸ್ತ್ರವನ್ನು ಸುತ್ತಿಕೊಳ್ಳುತ್ತಿದ್ದ ಮಹಾತ್ಮ ಗಾಂಧಿಯ ಬದುಕನ್ನು ಆ ಎರಡು ಆಯಾಮಗಳಲ್ಲಿ ಅರ್ಥಮಾಡಿಕೊಳ್ಳಬೇಕು. 79 ವರ್ಷಗಳ ಸತ್ಯಾನ್ವೇಷಣೆಯ ಬದುಕಿನಲ್ಲಿ 17 ಬೃಹತ್ ಆಮರಣಾಂತ ಉಪವಾಸ ಸತ್ಯಾಗ್ರಹ, ಅವುಗಳಲ್ಲಿ ಒಂದೆರಡು ಉಪವಾಸ ಸತ್ಯಾಗ್ರಹಗಳು ಸುಮಾರು 21 ದಿನಗಳ ವರೆಗೂ ವಿಸ್ತರಿಸಿವೆ. 1921ರಿಂದ ಪ್ರತೀ ಸೋಮವಾರ ಉಪವಾಸ. ಎಲ್ಲಾ ಒಟ್ಟಾಗಿ ಸಾರ್ವಜನಿಕ ಬದುಕಿನ ಸುಮಾರು 1500 ದಿನಗಳನ್ನು ಉಪವಾಸದಲ್ಲಿಯೇ ಕಳೆದವರು. 13 ಬಾರಿ ಬಂಧನ ಮತ್ತು 6 ವರ್ಷ 5 ತಿಂಗಳು ಸೆರೆವಾಸ. 24 ವರ್ಷಗಳ ಕಾಲ ವಿದೇಶ ವಾಸ. ಅನೇಕ ಸಂದರ್ಭಗಳಲ್ಲಿ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ, ಅಹಿಂಸೆ, ಸತ್ಯಾನ್ವೇಷಣೆ, ಸರಳ ಬದುಕು, ಉಚ್ಛ ವಿಚಾರ, ಇವುಗಳೆಲ್ಲ ಕೇವಲ ಅನುಭವ, ಆರೋಗ್ಯ ಮಾತ್ರವಲ್ಲ “ಆಧ್ಯಾತ್ಮಿಕ ಶಕ್ತಿ”ಯನ್ನು ಒದಗಿಸುತ್ತವೆ ಎಂದು ಗಾಂಧಿ ನಂಬಿದ್ದರು. ಗಾಂಧಿಯ ಶಕ್ತಿ ಇದ್ದದ್ದು ಭಾರತದ ಜನಸಾಮಾನ್ಯರ ಜೊತೆ ಹೃದಯ ಸಂವಾದ ನಡೆಸುವ ಮತ್ತು ಆತ್ಮಸಾಕ್ಷಿಯ ಜೊತೆ ನೇರ ಸಂವಾದ ನಡೆಸುವ ಗುಣದಲ್ಲಿ. ಇಂದು ಜಗತ್ತು ಕೇಳುತ್ತಿರುವ “ಸಮಾನ ಕೆಲಸಕ್ಕೆ, ಸಮಾನ ವೇತನ” ಎಂಬುದನ್ನು, ಜಾನ್ ರಸ್ಕಿನ್ ಪ್ರೇರಣೆಯಿಂದ “ಸರ್ವೋದಯ” ಆರ್ಥಿಕ-ಸಾಮಾಜಿಕ ಪರಿಕಲ್ಪನೆ ಮೂಲಕ ಅಂದೇ ಜಾರಿಗೆ ತಂದಿದ್ದ ಗಾಂಧಿ, ಮಡದಿ ಕಸ್ತೂರ್‍ಬಾಗೆ ಸಾಮಾಜಿಕ ಜೀವನದಲ್ಲಿ ಸಮಾನ ಸ್ಥಾನವನ್ನೇ ನೀಡಿದ್ದರು.

30 ಜನವರಿ 1948ರ ಸಂಜೆ ದೆಹಲಿಯ ಬಿರ್ಲಾ ಮಂದಿರದ ಬಳಿ 79 ವರ್ಷದ ಗಾಂಧಿ ಹತ್ಯೆ ಆಗದೇ ಇದ್ದರೆ ಗಾಂಧೀಜಿ ಬಹುಶಃ 125 ವರ್ಷ ಬದುಕಿರುತ್ತಿದ್ದರು. ಅಂದರೆ ಅವರು 1994ರ ವರೆಗೂ ಬದುಕಿರುತ್ತಿದ್ದರು. 30 ದಾಟಿರದ ಇಂದಿನ ತಲೆಮಾರು ಅವರನ್ನು ನೋಡಲು ಸಾಧ್ಯವಿತ್ತು. ಅವರು ಹೇಳದೇ ಹೋಗಿದ್ದ ಅನೇಕ ಸತ್ಯಗಳನ್ನು ಕೇಳಲು ಸಾಧ್ಯವಿತ್ತು. ಇದು ಕಲ್ಪನೆಯೂ ಅಲ್ಲ, ಮೌಢ್ಯವೂ ಅಲ್ಲ. ಗಾಂಧೀಜಿ ಅನೇಕ ಸಂದರ್ಭಗಳಲ್ಲಿ ಇದನ್ನು ತಾವೇ ಹೇಳಿಕೊಂಡಿದ್ದಾರೆ. ಸಾಮಾಜಿಕ ಬದುಕಿನ ಅನಿವಾರ್ಯತೆಗೆ ಸಾಂಸಾರಿಕ ಬದುಕಿನಲ್ಲಿದ್ದೂ ಅದರ ಸೊಲ್ಲು ತಗುಲದಂತೆ ಸನ್ಯಾಸಿಯಂತೆ ಆಧ್ಯಾತ್ಮಿಕ, ಬ್ರಹ್ಮಚರ್ಯ ಜೀವನದ ಪಾಲನೆ, ಗಾಂಧೀಜಿಯ ಶುದ್ಧ ಭಾರತೀಯ ಜೀವನಕ್ರಮ ಮತ್ತು ಬದುಕಿನ ವಿಜ್ಞಾನವನ್ನು ಪಾಲಿಸುತ್ತಿದ್ದ ಕಾರಣದಿಂದ ನಾನು 125 ವರ್ಷ ಬದುಕುತ್ತೇನೆ ಎಂದೇ ಅವರು ನಂಬಿದ್ದರು. ಇಂದು ಅನೇಕ ವಿಜ್ಞಾನ, ಸಂಶೋಧನೆಗಳು ಮನುಷ್ಯನ ಜೀವಿತಾವಧಿ ಸರಾಸರಿ 125 ವರ್ಷ ಇರಲು ಸಾಧ್ಯವಿದೆ ಎನ್ನುವುದನ್ನು ದೃಢಪಡಿಸಿವೆ. ಗಾಂಧೀಜಿಯ ದೇಹ ಭಸ್ಮವಾಗಿದೆ ಆದರೆ ಗಾಂಧೀಜಿ ಚೇತನ 150 ವರ್ಷಗಳ ನಂತರವೂ ಚಿರಂಜೀವಿಯಾಗಿದೆ.

ಚಾರ್ಲಿ ಚಾಪ್ಲಿನ್, ಐನ್‍ಸ್ಟೈನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾ ಹೀಗೆ ಸಾಗುವ ಪಟ್ಟಿಯೂ ಸೇರಿದಂತೆ ಇಂದಿನ ಕಾಲದ ಅನೇಕ ಅಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರಿದ ಆದರ್ಶ ಗಾಂಧಿ. ಇತ್ತೀಚೆಗೆ ಪ್ರಖ್ಯಾತ ನರವಿಜ್ಞಾನಿ ವಿಎಸ್ ರಾಮಚಂದ್ರನ್, ಮಾನವ ಮೆದುಳಿನಲ್ಲಿ “ಸಹಾನುಭೂತಿ”ಯನ್ನು ಉದ್ದೀಪಿಸುವ ನರಗಳಿಗೆ “ಗಾಂಧಿ ನ್ಯೂರಾನ್” ಎಂದು ಹೆಸರಿಸಲಾಗಿದೆ. ಇದು ಸಹಾನುಭೂತಿ, ಪ್ರೀತಿ, ಕರುಣೆಯಿಂದ ಇಡೀ ಮನುಕುಲವನ್ನು ತಲುಪಬಹುದು ಎಂಬ ಗಾಂಧಿ ತಾತ್ವಿಕತೆಗೆ ನೀಡಿದ ಗೌರವ. ವಿಶ್ವಕ್ಕೆ ಗಾಂಧಿ ಭಾರತದ ಕೊಡುಗೆ ಎಂಬುದು ಭಾರತಕ್ಕೆ ಹೆಮ್ಮೆಯ ವಿಚಾರ. ಆದರೆ ಭಾರತದಲ್ಲಿಯೇ ಗಾಂಧೀಜಿ ಕುರಿತ ಪೂರ್ವಾಗ್ರಹ ಪೀಡಿತ ಭ್ರಮನಿರಸನ ಮತ್ತು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ನಿರಾಕರಿಸುವ ಆತುರದಿಂದ ನಷ್ಟ ಆಗುತ್ತಿರುವುದು ಗಾಂಧಿಗಲ್ಲ. ಭಾರತಕ್ಕೇ ಎನ್ನುವುದು ಮುಂಬರುವ ತಲೆಮಾರುಗಳು ನೆನಪಿಸಿಕೊಳ್ಳಬಹುದು.

1917ರಲ್ಲಿ ಭಾರತದಲ್ಲಿ ಕೈಗೊಂಡ ಚಂಪಾರಣ್, 1918 ಅಹಮದಾಬಾದ್ ಮಿಲ್, ಬರ್ದೋಲಿ ಸತ್ಯಾಗ್ರಹಗಳಿಂದ ಮೊದಲುಗೊಂಡು 1942ರಲ್ಲಿ ಆಂತರಿಕ ಹಾಗೂ ಬಾಹ್ಯ ಸಮಯ ಪಕ್ವಗೊಂಡಿರುವುದನ್ನು ಅರಿತು “ಭಾರತ ಬಿಟ್ಟು ತೊಲಗಿ” ಹೋರಾಟದ ಪಯಣ ಅದ್ಭುತ. ಅಲ್ಲಿ 1921ರ ಅಸಹಕಾರದ ಸೋಲು, 1930ರ ಕಾನೂನುಭಂಗದ ಗೆಲುವು, ರಾಜಕಾರಣದಲ್ಲಿ ಧಾರ್ಮಿಕತೆ ಎರವಲು ಪಡೆದ ಖಿಲಾಫತ್ ಚಳುವಳಿ, ಕ್ರಾಂತಿಯ ಮಾರ್ಗ ತುಳಿದ ಭಗತ್ ಸಿಂಗ್ ಗಲ್ಲು, ಕಾನೂನಾತ್ಮಕ ಮಾದರಿಗಿಂತ ನೇರ ಕ್ರಿಯೆಯ ಮೇಲೆ ಅವಲಂಭಿತರಾಗಿದ್ದ ಸುಭಾಷ್ ಚಂದ್ರ ಬೋಸ್ ಪರೋಕ್ಷವಾಗಿ ಕಾಂಗ್ರೆಸ್ ಬಿಡುವಂತೆ ಮಾಡಿದ್ದು ಇಂತಹ ಇತರ ಸಂಗತಿಗಳೂ ಸೇರಿಕೊಂಡಿವೆ, ಹಾಗೆಂದು ಭಗತ್ ಸಿಂಗ್, ಬೋಸ್ ಇವರೆಲ್ಲ ಗಾಂಧಿ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಕೊನೆಗೆ ಗಾಂಧಿ ಮಾರ್ಗವೇ ಸೂಕ್ತ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಆದ್ದರಿಂದಲೇ ಗಾಂಧಿಯನ್ನು ಬೋಸ್ “ರಾಷ್ಟ್ರಪಿತ” ಎಂದು ಸಂಬೋಧಿಸಿದ್ದು. ಅಷ್ಟೇ ಏಕೆ ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆ ಕೂಡ ತನ್ನ ಗಲ್ಲುಶಿಕ್ಷೆಯ ಅವಧಿಯಲ್ಲಿ ತಾನು ಮಾಡಿದ್ದು ಮಹಾಪ್ರಮಾದವೆಂದು ಪಶ್ಚಾತಾಪ ಪಡುತ್ತಾನೆ.

ಇಂದಿನ ಕಾಲದಂತೆ ಮಾಧ್ಯಮಗಳ ಹುಸಿ ಭರಾಟೆ, ಸಾಮಾಜಿಕ ಜಾಲತಾಣ ನಿರ್ಮಿತ ಪ್ರಚಾರ, ಇಮೇಜ್ ಮೇಕ್ಓವರ್‍ ಗಳಿಲ್ಲದ ಕಾಲದಲ್ಲಿಯೂ ಒಂದು ಕರೆಗೆ ಸಹಸ್ರ ಸಹಸ್ರ ಸಂಖ್ಯೆಯ ಭಾರತೀಯರು ಗಾಂಧಿ ಹೋರಾಟದಲ್ಲಿ ಪಾಲ್ಗೊಳುತ್ತಿದ್ದದ್ದು ಅದ್ಭುತವೇ ಸರಿ. ಸತ್ಯ ಮತ್ತು ಸತ್ವ ಇರದೆ ಅದು ಸಾಧ್ಯವಿರಲಿಲ್ಲ. ಒಂದು ಮಹಾನ್ ವ್ಯಕ್ತಿತ್ವದಲ್ಲಿ ನಮಗೆ ಕಾಣುವ ಸತ್ಯದ ಮೇಲೆ ನಮಗೆ ಬೇಕಾದಂತೆ ಚರ್ಚೆ ನಡೆಸುವುದು ಸುಲಭ. ಆದರೆ ಗಾಂಧೀಜಿಯೇ ಹೇಳಿದಂತೆ, “ನನ್ನಂತ ವ್ಯಕ್ತಿಗಳ ಜೀವನದಲ್ಲಿ ಎದುರಾಗುವ ಶ್ರೇಷ್ಟ ಕ್ಷಣಗಳಿಂದ ಅಳೆಯದೆ, ಒಟ್ಟಾರೆ ಜೀವನ ಪಯಣದಲ್ಲಿ ಕಾಲಿಗೆ ಅಂಟಿಕೊಂಡ ಧೂಳಿನ ಪ್ರಮಾಣದಿಂದ ನನ್ನಂತವರನ್ನು ಅಳೆಯಬೇಕು”.

ಗಾಂಧೀಜಿ 1930ರಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರಿದ್ದ ಉಪ್ಪಿನ ಮೇಲೆ ವಿಧಿಸಿದ್ದ ಕರನಿರಾಕರಣೆಗಾಗಿ ಕಾನೂನುಭಂಗ ಚಳುವಳಿಯನ್ನು ಪ್ರಾರಂಭಿಸುತ್ತಾರೆ. ಐತಿಹಾಸಿಕ ದಂಡಿಯಾತ್ರೆಯ ಮುನ್ನ, ಅಂದಿನ ವೈಸರಾಯ್ ಇರ್ವಿನ್‍ಗೆ ನೇರವಾಗಿ ಪತ್ರ ಬರೆದು ತಮ್ಮ ಹೋರಾಟದ ಆಶಯ, ಮಾರ್ಗ ಮತ್ತು 6 ಏಪ್ರಿಲ್ 1930ರಂದು ನಡೆಯುವ ವಿದ್ಯಮಾನಗಳನ್ನು ವಿವರಿಸಿ ಸಾಧ್ಯವಾದರೆ ತಡೆಯುವಂತೆ ಹೇಳುತ್ತಾರೆ. ಮಾತಿನಂತೆ ಸಾಬರಮತಿಯಿಂದ 24 ದಿನಗಳ 240 ಮೈಲುಗಳ ಹಾದಿಯನ್ನು ಸಾಗಿ  ದಂಡಿಯಲ್ಲಿ ಉಪ್ಪನ್ನು ತೆಗೆದು ಕಾನೂನನ್ನೂ ಮುರಿಯುತ್ತಾರೆ. ಕಾನೂನು ಮುರಿಯದ ಹೊರತು ಅವರನ್ನು ಬಂಧಿಸುವುದು ಅಸಾಧ್ಯ. ಹಾಗೊಂದು ವೇಳೆ ಸುಮ್ಮನೆ ಬಂಧಿಸಿದರೆ ಕಾಂಗ್ರೆಸ್ ಮತ್ತು ಭಾರತೀಯರ ಕೋಪಕ್ಕೆ ತುತ್ತಾಗಿ ಕಾನೂನು ಸುವ್ಯವಸ್ಥೆ ಕೆಡುತ್ತದೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಬ್ರಿಟಿಷರೇ ಏನೂ ಮಾಡಲಾಗಲಿಲ್ಲ ಎಂದು ಭಾರತೀಯರ ನೈತಿಕ ಸ್ಥೈರ್ಯ ಹೆಚ್ಚುತ್ತದೆ. ಈ ತೊಳಲಾಟದಲ್ಲಿ ಮುಳುಗಿರುವಾಗಲೇ ಉಪ್ಪಿನ ಕಾನೂನನ್ನು ಮುರಿಯಲಾಗುತ್ತದೆ. ಸ್ವಾತಂತ್ರ್ಯ ಚಳುವಳಿಯ ಅನೇಕ ಸಂದರ್ಭಗಳಲ್ಲಿ ಬ್ರಿಟಿಷ್ ಸಾಮಾಜ್ಯಕ್ಕೆ ನೇರವಾಗಿ ಸವಾಲೆಸೆದು ಅದನ್ನು ಹಾಗೆಯೇ ಸಾಧಿಸುವುದು ಕೇವಲ ಧೈರ್ಯವಂತರಿಗೆ ಸಾಧ್ಯವಾಗುವ ಮಾತು. ಇದು ಹೇಡಿಗಳಿಂದ ಆಗದು. ಅದಕ್ಕೆ ಗಾಂಧಿ ಹೇಳಿದ್ದು, ನ್ಯಾಯಕ್ಕಾಗಿ ನೈತಿಕತೆಯ ಉಪವಾಸ, ಸತ್ಯಾಗ್ರಹ, ಅಹಿಂಸೆ ಹೇಡಿಗಳಿಂದ ಆಗದ ಕೆಲಸ ಎಂದು. ಹಾಗಾಗಿಯೇ ಇಂದಿಗೂ ಗಾಂಧಿ ಎಂಬ ಚೇತನ ದುರ್ಬಲರಿಗೆ ಶಕ್ತಿಯನ್ನು ಕೊಡುತ್ತದೆ. ಎಲ್ಲಾ ದಾರಿಗಳೂ ಮುಚ್ಚಿದಾಗ ಗಾಂಧಿಮಾರ್ಗ ಸದಾ ತೆರೆದಿರುತ್ತದೆ. ಸೋತವರು ಗಾಂಧಿಯ ಆದರ್ಶವನ್ನು ಸುಳ್ಳು ಎಂದು ಪ್ರತಿಪಾದಿಸುತ್ತಾರೆ.

ಇಂತಹ ಮತ್ತೊಂದು ಉದಾಹರಣೆ ಸಿಗುವುದು 1909ರಲ್ಲಿ ಪ್ರಕಟವಾದ “ಹಿಂದ್ ಸ್ವರಾಜ್ ಅಥವಾ ಹೋಮ್ ರೂಲ್” ಪುಸ್ತಕದಲ್ಲಿ. ಇದರಲ್ಲಿ ಭಾರತದ ಆತ್ಮ ಹಾಗೂ ಚೇತನವನ್ನು ಅವಲೋಕಿಸುವ, ಜಾಗೃತಗೊಳಿಸುವ ಮತ್ತು ಪರಕೀಯ ದಾಸ್ಯದ ವಿವಿಧ ಚಹರೆ, ಮಜಲುಗಳನ್ನು ತೆರೆದಿಡಲಾಗಿದೆ. ಭಾರತದಿಂದ ಕೇವಲ ಪಡೆದುಕೊಳ್ಳುವ ಮತ್ತು ಭಾರತಕ್ಕೆ ಏನನ್ನೂ ನೀಡದ, ಪಾರ್ಲಿಮೆಂಟ್‍ಗಳ ತಾಯಿ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್ ಪಾರ್ಲಿಮೆಂಟ್ ಅನ್ನು “ಬಂಜೆ ಮತ್ತು ವ್ಯಭಿಚಾರಿ” ಎಂದು ಕರೆಯುತ್ತಾರೆ. ಆ ಕಾಲದಲ್ಲಿ ಇಂತಹ ತೀವ್ರತೆರನಾದ ವಿಚಾರಗಳಿದ್ದ ಕಾರಣದಿಂದಲೇ ಈ ಪುಸ್ತಕವನ್ನು ನಿಷೇಧ ಮಾಡಲಾಗಿತ್ತು. 1922ರಲ್ಲಿ ತಮ್ಮ ವಾರ ಪತ್ರಿಕೆ “ಯಂಗ್ ಇಂಡಿಯಾ”ದಲ್ಲಿ ಬರೆದ ಮೂರು ಲೇಖನಗಳನ್ನು ಗುರಿಯಾಗಿಸಿ, ಐಪಿಸಿ 124-ಎ ಅಡಿಯಲ್ಲಿ ಬರುವ ರಾಜದ್ರೋಹ (ಸೆಡಿಶನ್) ಆರೋಪದಲ್ಲಿ ಗಾಂಧೀಜಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲುವಾಸದ ಅವಧಿಯಲ್ಲೇ “ನನ್ನ ಸತ್ಯಾನ್ವೇಷಣೆ” ರೂಪುಗೊಂಡಿದ್ದು. ಸ್ವಾತಂತ್ರ್ಯ ಚಳುವಳಿಯ ನಡುವೆಯೂ ಉಪವಾಸ ಸತ್ಯಾಗ್ರಹದ ಮೂಲಕ ಜಾತಿಗಳ ನಡುವಿನ ಸಮಾನತೆ, ದಲಿತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ. ಭಾರತಕ್ಕೆ ಬಂದ ಮೇಲೆ ಅನುಕೂಲ ಇದ್ದರೂ ಸಾಮಾನ್ಯ ಭಾರತೀಯರಂತೆ ಮೂರನೇ ದರ್ಜೆಯ ರೈಲ್ವೆಯ ಭೋಗಿಯಲ್ಲೇ ಸಂಚಾರ. ಬಕಿಂಗ್ ಹ್ಯಾಮ್ ಅರಮನೆಗೆ ಅವರ ವಸ್ತ್ರ ಸಂಹಿತೆ ಪಾಲಿಸದೆ ತೊಟ್ಟಿದ್ದ ಬಟ್ಟೆಯಲ್ಲಿಯೇ ತೆರಳಿದ ವಿಶ್ವದ ಏಕೈಕ ವ್ಯಕ್ತಿ. ಗಾಂಧಿಯಲ್ಲಿಯೂ ಒಬ್ಬ ಕ್ರಾಂತಿಕಾರಿ ಇದ್ದ ಎನ್ನುವುದಕ್ಕೆ ಮೇಲಿನ ಕೆಲವು ಸಂಗತಿಗಳೇ ಸಾಕ್ಷಿ. ಹಾಗಿದ್ದೂ ಅನೇಕ ಬ್ರಿಟಿಷ್ ಇತಿಹಾಸಕಾರರೂ ಸೇರಿದಂತೆ, ಕೆಲವು ಭಾರತೀಯರೂ ಅವರನ್ನು ಬ್ರಿಟಿಷರ ದಲ್ಲಾಳಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದ್ದು ಸೋಜಿಗ.

ಗಾಂಧಿ ಚಿತ್ಪಾವನ ಸಂಬಂಧ

ಬಾಲಗಂಗಾಧರ ತಿಲಕರ ತರುವಾಯ ತೆರವಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲು ಗೋಪಾಲಕೃಷ್ಣ ಗೋಖಲೆ ಎಂಬ ಗಾಂಧೀಜಿಯ ರಾಜಕೀಯ ಗುರುವಿಗೆ ಕಂಡ ಮೊದಲ ಹೆಸರು ಗಾಂಧೀಜಿ. ಮಿಸ್ಟರ್ ಗಾಂಧಿಯನ್ನು ಮಹತ್ಮಾ ಗಾಂಧಿಯಾಗಿಸುವ ದೀರ್ಘ ಪಯಣದಲ್ಲಿ ಗೋಖಲೆ ಬಹುಪ್ರಮುಖ ಪಾತ್ರವಹಿಸಿದ್ದಾರೆ. ಮುಂದೆ ಗಾಂಧೀಜಿಯ ಪ್ರಿಯ ಶಿಷ್ಯರಾಗಿ, ಭೂದಾನ ಚಳುವಳಿಗೆ ಮುಂದಡಿಯಿಟ್ಟವರು ಕರ್ನಾಟಕದವರಾದ ವಿನೋಬಾ ಭಾವೆ. ಗಾಂಧಿಯ ರಾಜಕೀಯ ವಿಮರ್ಶಕ ಹಾಗೂ ಪ್ರಬಲ ವೈಚಾರಿಕ ಪ್ರತಿಸ್ಪರ್ಧಿ ವಿನಾಯಕ ದಾಮೋದರ ಸಾವರಕರ್. ಕೊನೆಗೆ ನೇರವಾಗಿ ಗಾಂಧೀಜಿ ಹತ್ಯೆ ಮಾಡಿದ್ದು ನಾಥೂರಾಮ ಗೋಡ್ಸೆ ಮತ್ತು ಆಪ್ಟೆ. ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದ 155 ಸಾಕ್ಷಿಗಳಲ್ಲಿ ಅನೇಕರು ಮತ್ತು ಮೇಲೆ ಉಲ್ಲೇಖಹಿಸಿದ ಎಲ್ಲರೂ ಕೊಂಕಣಸ್ಥ ಚಿತ್ಪಾವನ ಬ್ರಾಹ್ಮಣರು. ಅಷ್ಟೇ ಏಕೆ ನರೇಂದ್ರ ಮೋದಿಯ ಮೊದಲ ರಾಜಕೀಯ ಗುರು ಏಕನಾಥ ರಾನಡೆ ಕೂಡ ಚಿತ್ಪಾವನ. ಪೇಶ್ವೆ ಬಾಲಾಜಿ ವಿಶ್ವನಾಥ ಮೊದಲಾಗಿ ಸಾಗಿಬಂದ ಸದಾ ಸ್ವಾತಂತ್ರ್ಯ ಹೋರಾಟ, ಭಾರತದ ಸಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದ, ಐತಿಹಾಸಿಕವಾಗಿಯೂ ದೇಶಭಕ್ತರಾಗಿದ್ದ ಸಮುದಾಯವನ್ನು ತಪ್ಪಿತಸ್ಥರಂತೆ ನೋಡಿದ್ದು ಸಮಾಜದ ತಪ್ಪು.

ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ ಗಾಂಧಿ ಹತ್ಯೆಯ 72 ಘಂಟೆಗಳಲ್ಲಿ ಗೋಡ್ಸೆ ಚಿತ್ಪಾವನ ಎಂಬ ಕಾರಣದಿಂದ ಮಹಾರಾಷ್ಟ್ರ, ದೆಹಲಿ ಮೊದಲಾದ ಕಡೆಗಳಲ್ಲಿ ನೂರಾರು ಸಂಖ್ಯೆಯ ಚಿತ್ಪಾವನಿ ಕೊಂಕಣಸ್ಥ ಬ್ರಾಹ್ಮಣರ ನರಮೇಧ ನಡೆಸಲಾಯಿತು. ಮನೆಗಳನ್ನು ಹೊತ್ತಿ ಉರಿಸಲಾಯಿತು. ಸಾವಿರಾರು ಜನರು ರಾತ್ರೋ ರಾತ್ರಿ ಮನೆ, ಮಠ, ಮಂದಿರ, ತಮ್ಮ ಕೃಷಿ ಭೂಮಿ ಮೊದಲಾದ ಜೀವನಕ್ಕೆ ಆಧಾರವಾಗಿದ್ದ ವ್ಯವಹಾರ, ಎಲ್ಲವನ್ನೂ ತ್ಯಜಿಸಿ ಹೋಗುವ ಪರಿಸ್ಥಿತಿ ಎದುರಾಯಿತು. ಅಂತಹ ಕಠಿಣ, ಕರಾಳ ಪ್ರತಿಹಿಂಸೆಯನ್ನು ಪ್ರತ್ಯಕ್ಷವಾಗಿ ಎದುರಿಸಿದವರು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳುವ ಪ್ರಯತ್ನ ಮಾಡಲಿಲ್ಲ. ಗಾಂಧಿ ಎಂಬ ಬೃಹತ್ ವೃಕ್ಷ ನೆಲಕ್ಕುರುಳಿದ ಸುದ್ದಿಯ ಮುಂದೆ ಈ ಸುದ್ದಿ ಮುನ್ನೆಲೆಗೆ ಬರಲೇ ಇಲ್ಲ. ಇಂದಿಗೂ ಅದು ಮರೆತಿರುವ ಇತಿಹಾಸದ ಕರಾಳ ಅಧ್ಯಾಯ. ಗಾಂಧಿ ಹತ್ಯೆ ಆಯಿತು ಎಂಬ ಮಾತ್ರಕ್ಕೆ ಇಡೀ ಸಮುದಾಯವನ್ನು ಗುರಿಯಾಗಿಸಿದ್ದು ಗಾಂಧೀವಾದದ ನರಬಲಿ ಎಂದೇ ಭಾವಿಸಬೇಕು. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ತೀರಾ ಇತ್ತೀಚಿನವರೆಗೂ ಚಿತ್ಪಾವನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ನೋಡುವ ಪರಿಸ್ಥಿತಿ ಇತ್ತು. ಗಾಂಧಿ ಹತ್ಯೆ ಮತ್ತು ಆ ತರುವಾಯ ನಡೆದ ಸಮುದಾಯದ ಮೇಲಿನ ಹಲ್ಲೆ ಎರಡೂ ಕಡೆ ಇದ್ದದ್ದು ಸಂಕಲ್ಪ ಹಿಂಸೆ ಎಂಬುದು ಹೇ ರಾಮ್ ಎಂದು ಧರೆಗುರುಳಿದ ಗಾಂಧಿಗೂ ಅರ್ಥವಾಗಿತ್ತೇನೋ.

ಗಾಂಧಿತತ್ವವನ್ನು ಅಪ್ಯಾಯಮಾನಗೊಳಿಸುವ ಬಗೆ

ಅಲ್ಲೊಂದು ಇಲ್ಲೊಂದು ಪ್ರಾಯೋಗಿಕ ಅವಸ್ಥಾಂತರ ಬಿಟ್ಟರೆ ಗಾಂಧಿ ತತ್ವ ಮತ್ತು ಪ್ರಾಯೋಗಿಕ ಸಾಕ್ಷಾತ್ಕಾರ ಕೇವಲ ರಾಜಕಾರಣ, ಪುಸ್ತಕ, ಭಾಷಣಗಳ ಓರಣಗಳಿಗೆ ಸೀಮಿತವಾಗಿವೆ. ಹೊಸ ಭಾರತ ಮತ್ತು ಗ್ರಾಮ ಸ್ವರಾಜ್ಯದ ಸ್ವಾವಲಂಭಿ ಆರ್ಥಿಕ ತಳಹದಿಗೆ ಗಾಂಧಿ ಪರಿಕಲ್ಪನೆಗಳ ಆನ್ವಯಿಕತೆಯಿಂದ ಸಹಾಯವಾದೀತು. ಆದರೆ ಗಾಂಧೀ ತಾತ್ವಿಕತೆಯ ತಿರಸ್ಕಾರ, ಅಪಾರ್ಥ, ಗಾಂಧಿ ಕುರಿತಾದ ದ್ವೇಷ ಮತ್ತು ಗಾಂಧಿವಾದದ ಸವೆತ ಇವೆಲ್ಲ “ಗಾಂಧಿ ನಡೆದಂತೆ ಗಾಂಧಿಯ ಮೆಟ್ಟುಗಳೂ ಸವೆದವು” ಎಂಬ ಯು. ಆರ್. ಅನಂತಮೂರ್ತಿ ಕಾವ್ಯದ ಸಾಲಿನಂತೆ ಗೋಚರವಾಗುತ್ತವೆ. ಗಾಂಧೀವಾದವನ್ನು ಅರ್ಥಮಾಡಿಕೊಳ್ಳದೆ ಟೀಕಿಸುವವರು ಮತ್ತು ಗಾಂಧೀವಾದಿಗಳು ಎಂದು ಕರೆದುಕೊಳ್ಳುವವರು ಇಬ್ಬರೂ ಇದಕ್ಕೆ ಸಮಾನ ಹೊಣೆಗಾರರು.

ಗಾಂಧಿವಾದ ಎಂದರೆ ಮೂಗುಮುರಿಯುವ ಹೊಸ ತಲೆಮಾರಿಗೆ ಆಸ್ಕರ್ ಗೆದ್ದ ರಿಚರ್ಡ್ ಆಟನ್‍ಬರೋನ ಗಾಂಧಿ ಚಲನಚಿತ್ರವನ್ನು ಮತ್ತು ಬೆನ್ ಕಿಂಗ್‍ಸ್ಲೆ ಪಾತ್ರ ನೋಡಿದಾಗ, ಹಾಗೂ ಮುನ್ನಾಭಾಯಿ ಚಲನಚಿತ್ರದ ಮಾದರಿಯಲ್ಲಿ ಗಾಂಧಿಯನ್ನು “ಕೂಲ್ ಕ್ಯಾರೆಕ್ಟರ್” ಆಗಿ ಪ್ರಸ್ತುತಪಡಿಸಿದಾಗ, “ಭಾರತೀಯ ಆತ್ಮವಿರುವ ಗ್ಲೋಬಲ್ ಬ್ರಾಂಡ್” ಅನ್ನು ಸ್ವೀಕರಿಸುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲಾ ಚಳುವಳಿ, ಕ್ರಾಂತಿ, ಹೋರಾಟಗಳು ಒಬ್ಬ ವ್ಯಕ್ತಿಯಿಂದಲೇ ಪ್ರಾರಂಭವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಗಾಂಧಿಯನ್ನು ಅಪ್ಪುವ, ಒಪ್ಪುವ ಮನಸ್ಸುಗಳು ನಿರ್ಮಾಣವಾಗುತ್ತವೆ. ಅದು ಗಾಂಧಿಯ ಕುರಿತ ಹೆಚ್ಚಿನ ಗಂಭೀರ ಅಧ್ಯಯನ, ವಸ್ತುನಿಷ್ಟ ಪ್ರಸ್ತುತಿ, ಕಾಲದ ಅನಿವಾರ್ಯತೆಗೆ ತಕ್ಕಂತಹ ಆನ್ವಯಿಕತೆ, ಕಾಲಾತೀತ ಬೆಳವಣಿಗೆಗೆ ಕಾರಣವಾಗುತ್ತದೆ. ಯಾರ ಬಗೆಗೂ ಅತಿಯಾದ ಭಕ್ತಿ ಮತ್ತು ಅತಿಯಾದ ದ್ವೇಷ ಎರಡೂ ಒಳಿತಲ್ಲ. ಶಕ್ತಿಯ ಸಂಕೇತ ನವರಾತ್ರಿಯ ಹೊತ್ತಿನಲ್ಲಿ ದುಷ್ಟ ಸಂಹಾರ, ಅನ್ಯಾಯದ ವಿನಾಶದ ನಂತರ ಸರ್ವರೂ ಬಯಸುವುದು ಶಾಂತಿಯನ್ನೇ. ಶಾಂತಿ ರೂಪೇಣ ಸಂಸ್ಥಿತಾ. ಶಾಂತಿಯನ್ನು ಜಗತ್ತಿನ ಮಂತ್ರವಾಗಿಸಿದ ಗಾಂಧಿ ಜಯಂತಿಯ ಶುಭಾಶಯಗಳು.

ಶ್ರೇಯಾಂಕ ಎಸ್. ರಾನಡೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು