News Karnataka Kannada
Saturday, April 13 2024
Cricket
ನುಡಿಚಿತ್ರ

ಪೊಸಡಿ ಗುಂಪೆಯ ಅಂದ….ಕಾಣಲು ಬಲುಚಂದ..!!

Photo Credit :

ಪೊಸಡಿ ಗುಂಪೆಯ ಅಂದ....ಕಾಣಲು ಬಲುಚಂದ..!!

‘ಪೊಸಡಿಗುಂಪೆ ಬೆಟ್ಟ ನೋಡು ಹೊಸತು ಕಣ್ಗೆ ಹಬ್ಬ ಮಾಡು’ ಎಂಬ ಕವಿ ಕಯ್ಯಾರ ಕಿಞಣ್ಣ ರೈಗಳು ಬರೆದ ಸಾಲುಗಳಲ್ಲಿ ಗುಂಪೆ ಗುಡ್ಡದ ಅಂದ ಚಂದಗಳನ್ನು ಚಿತ್ರಿಸಬಹುದು. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಗುಡ್ಡ ಧಾರ್ಮಿಕ ನಂಬಿಕೆಗಳನ್ನು ಹೊತ್ತು ನಿಂತಿದೆ. ಈ ಗುಡ್ಡವನ್ನೇರಲು ಅದೆಷ್ಟೋ ಚಾರಣಿಗರ ದಂಡೇ ಬರುತ್ತದೆ. ಮನೋಲ್ಲಾಸಕ್ಕೆಂದು ಬೆಟ್ಟಕ್ಕೆ ಬರುವ ಕೆಲವೊಂದು ಗುಂಪುಗಳೂ ಕಾಣಸಿಗುತ್ತವೆ.

ಇಷ್ಟಕ್ಕೂ ಈ ಗುಂಪೆ ಗುಡ್ಡ ಅಲಿಯಾಸ್ ಪೊಸಡಿ ಗುಂಪೆ ಇರುವುದು ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಸಮೀಪದಲ್ಲಿ. ಪೈವಳಿಕೆ ಹಾಗೂ ಪುತ್ತಿಗೆ ಪಂಚಾಯತ್ ನ ಚೌಕಟ್ಟಿನಲ್ಲಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಮಂಜೇಶ್ವರ ತಾಲೂಕಿಗೂ ಅಷ್ಟೇನು ಅಂತರವಿಲ್ಲದ ಕಾರಣ ಕರ್ನಾಟಕದ ಕರಾವಳಿಯ ಜನರಿಗೂ ಕೂಡ ಚಿರಪರಿಚಿತ ಈ ಗುಡ್ಡ.

ತುಳು ಭಾಷಿಗರೇ ಹೆಚ್ಚಾಗಿ ವಾಸಿಸುತ್ತಿದ್ದ ಈ ಪ್ರದೇಶವನ್ನು ಪೊಸಡಿಗುಂಪೆ ಎಂದು ಕರೆಯುತ್ತಾರೆ.ಪೊಸಡಿ ಎಂಬುದು ಕನ್ನಡದ ತದ್ಭವ ರೂಪವಾಗಿದ್ದು ಹೊಸ ಜೇಡಿ ಎಂಬುದನ್ನು ಸೂಚಿಸುತ್ತದೆ. ಗುಪ್ಪೆ ಎಂದರೆ ಮಣ್ಣಿನ ದಿಬ್ಬ ಅಥವಾ ರಾಶಿ.ಪೊಸ ಜೇಡಿ ಗುಪ್ಪೆ ಕ್ರಮೇಣ ಪೊಸಡಿಗುಂಪೆಯಾಯಿತೆಂದು ಹೇಳುತ್ತಾರೆ.

ಪೌರಾಣಿಕ ಮಹತ್ವವಿರುವ ಪೊಸದಿಗುಂಪೆಯ ಪ್ರದೇಶದಲ್ಲಿ ಬಾಂಜಾರ ಗುಹೆಗಳೆಂದು ಕರೆಯಲಾಗುವ ಗುಹೆಗಳಿವೆ ಇಲ್ಲಿ ಪಾಂಡವರು ವನವಾಸದ ಸಮಯದಲ್ಲಿ ತಂಗಿದ್ದರೆಂಬ ಐತಿಹ್ಯವಿದೆ. ಕೆಲವು ಗುಹೆಗಳ ಒಳಗೆ ಸ್ಥಳ ವಿಸ್ತಾರವಾಗಿದ್ದು 50 ಜನರು ನಿಲ್ಲುವಷ್ಟು ಸ್ಥಳವಿದೆ. ಗುಂಪೆಯ ಇನ್ನೊಂದು ಭಾಗದಲ್ಲಿ ‘ ‘ವಿಭೂತಿ ಗುಹೆ’ ಎಂದು ಕರೆಯಲ್ಪಡುವ ವಿಶೇಷ ಗುಹೆಯೊಂದಿದೆ. ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆಯಂದು ಮಾತ್ರ ಈ ಗುಹೆಯೊಳಗೆ ಯಾವುದೇ ಬೆಳಕಿನ ಸಹಾಯವಿಲ್ಲದೆ ಊರು ಪರವೂರಗಳಿಂದ ಭಕ್ತರು ಆಗಮಿಸಿ ಗುಹೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುತ್ತಾರೆ. ಇದೊಂದು ರೀತಿಯ ರೋಚಕ ಅನುಭವವೂ ಹೌದು. ಪುರಾತನ ಕಾಲದಿಂದ ನಡೆದು ಬರುತ್ತಿರುವ ಪರಂಪರೆಯಂತೆ ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆಯಂದು ಪೊಸಡಿಗುಂಪೆಯ ಗುಹೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ವಾಡಿಕೆಯಾಗಿದೆ. ಶಾಕ್ತ ಮತ್ತು ಶೈವ ಸಂಪ್ರದಾಯದಂತೆ ವಿಭೂತಿ ಧಾರಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪೊಸಡಿಗುಂಪೆ ಗುಹಾ ಪ್ರವೇಶ ವಿಶೇಷವಾಗಿದೆ.

ಉಪ್ಪಳ ಅಥವಾ ಬಂದ್ಯೋಡಿನಿಂದ ಸುಮಾರು 15 ಕಿಮೀ ನಷ್ಟು ಕ್ರಮಿಸಿದರೆ ಈ ಬೆಟ್ಟದ ಸಾಲುಗಳ ಬುಡಕ್ಕೆ ತಲುಪಬಹುದು. ಪೊಸಡಿಗುಂಪೆಯ ಬುಡ ಭಾಗ ಧರ್ಮತಡ್ಕ. ಮಳೆಗಾಲದಲ್ಲಿ ಹಚ್ಚ ಹಸುರಿನ ಹೊದಕೆ ಹೊದ್ದಂತೆ ಕಾಣುವ ಗುಂಪೆಯಲ್ಲಿ ಸಂಜೆಯ ಸೂರ್ಯಾಸ್ತವನ್ನು ನೋಡುವುದು ಅತ್ಯಂತ ಆಹ್ಲಾದಕರ. ಗುಡ್ಡದ ಶಿಖರಕ್ಕೆ ಏರಿದರೆ ಕಾಸರಗೋಡು, ಬೇಕಲ ಕೋಟೆ, ಮಂಗಳೂರು ಪೇಟೆಯನ್ನು ಎತ್ತರದಿಂದ ನೋಡಬಹುದು. ಇನ್ನೊಂದು ದಿಕ್ಕಿನಲ್ಲಿ ಪೂರ್ವದ ಕುದುರೆಮುಖ ಪರ್ವತ ಶ್ರೇಣಿಗಳು ಕಣ್ಣಿಗೆ ಹಬ್ಬ. ಗುಡ್ಡದ ಮೇಲ್ಭಾಗದಲ್ಲಿ ಕುರುಚಲು ಗಿಡ ಗಂಟಿಗಳು, ಔಷಧೀಯ ಸಸ್ಯ ಪ್ರಭೇದಗಳು ಕಾಣಸಿಗುತ್ತವೆ. ಗುಡ್ಡದ ಕೆಲವು ಕಡೆ ಅರಣ್ಯ ಸಂಪತ್ತು ಹೇರಳವಾಗಿದೆ. ಅನೇಕ ಪ್ರಾಣಿ ಪಕ್ಷಿಗಳು ಜತೆಗೆ ಕಾಡು ಕೋಣಗಳು ಕೂಡ ಪೊಸಡಿ ಗುಂಪೆಯನ್ನು ಆಶ್ರಯಿಸಿವೆ. ಧರ್ಮತಡ್ಕದ ಮಧ್ಯಭಾಗದ ಕಂಪ ಎನ್ನುವಲ್ಲಿ ಜಲಪಾತವೊಂದಿದ್ದು ಜನರು ತಂಡೋಪತಂಡವಾಗಿ ಅಲ್ಲಿಗೂ ಭೇಟಿ ನೀಡುತ್ತಾರೆ.

ಇತರ ಚಾರಣದ ಬೆಟ್ಟಗಳಿಗೆ ಹೋಲಿಸಿದರೆ ಗುಂಪೆ ಗುಡ್ಡೆಯನ್ನು ಸುಲಭವಾಗಿ ಏರಿಳಿಯಬಹುದು. ಬೆಟ್ಟದ ಮೇಲೆ ಬಯಲಿನಂತಹ ಜಾಗವಿದ್ದು ಸುತ್ತಲೂ ಬೆಟ್ಟಗಳಿಂದ ಆವರಿಸಿದ ದೃಶ್ಯ ಕಣ್ತುಂಬುತ್ತದೆ. ಮಂಜು ಮುಸುಕಿದ ವಾತಾವರಣದಲ್ಲಿ ಸೂರ್ಯನ ಉದಯಾಸ್ತಗಳನ್ನು ನೋಡುವುದೇ ಒಂದು ರೀತಿಯ ಖುಷಿ ಇಲ್ಲಿ. ಇಲ್ಲಿ ಬರುವ ಪ್ರವಾಸಿಗರಿಗೆ ಯಾವುದೇ ಸೂಚನಾ ಫಲಕಗಳಿಲ್ಲ. ತಮ್ಮದೇ ರೀತಿಯಲ್ಲಿ ಪರಿಸರವನ್ನು ಆಹ್ಲಾದಿಸಲು ಗುಂಪೆ ಗುಡ್ಡ ಸುಂದರ ವಾತಾವರಣವನ್ನು ನಿರ್ಮಿಸಿದೆ. ಆದರೆ ಪರಿಸರ ಹಾಳು ಮಾಡಲೆಂದೇ ಹೊರಟಿರುವ ಕೆಲವು ಕಿಡಿಗೇಡಿಗಳಿಂದ ಗುಂಪೆಯ ಪರಿಸರ ಹಾಳಾಗುತ್ತಿದೆ. ಪ್ರಕೃತಿದತ್ತವಾದ ಈ ರಮಣೀಯತೆಯನ್ನು ಸವಿಯುವ ಅರಿವು ಬೇಕೇ ಹೊರತು ಅದನ್ನು ಕೆಡಿಸುವ ಪರಿವು ನಮ್ಮದಾಗದೇ ಇರಲಿ. ವಾರಾಂತ್ಯದ ಖುಷಿಗೆ ಪರಿಸರದ ಮಡಿಲು ಅರಸಿ ಬರುವುದಾದರೆ ಪೊಸಡಿ ಗುಂಪೆ ಸದಾ ನಿಮ್ಮ ಸ್ವಾಗತ ಬಯಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು