News Karnataka Kannada
Thursday, April 25 2024
Cricket
ನುಡಿಚಿತ್ರ

ನೋಡ ಬನ್ನಿ ಪೆರಾಡಿಯ ಸೊಬಗನ್ನು…

Photo Credit :

ನೋಡ ಬನ್ನಿ ಪೆರಾಡಿಯ ಸೊಬಗನ್ನು...

ತುಳುನಾಡು ಒಂದು ಸುಂದರ ನಾಡು, ಪರಶುರಾಮನ ಸೃಷ್ಟಿಯ ಈ ನಾಡು ಭೂತಕೋಲ, ನಾಗಾರಾಧನೆಯಂಥಹ ಹಲವಾರು ಆಚರಣೆಗಳನ್ನೂ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ, ಆಟಗಳನ್ನೂ ಒಳಗೊಂಡಿದೆ. ನಮ್ಮೀ ತುಳುನಾಡಿನಲ್ಲಿ ಬಹುಸಂಖ್ಯೆಯ ಊರುಗಳಿದ್ದು, ಪ್ರತಿ ಒಂದು ಊರಿಗೂ ತನ್ನದೇ ಆದ ಇತಿಹಾಸವಿದೆ. ಆದರೆ ವಿಪರ್ಯಾಸವೆಂದರೆ, ಹಲವಾರು ಊರಿನ ಇತಿಹಾಸವು ಹೊರಪ್ರಪಂಚಕ್ಕೆ ಬಿಡಿ ಆ ಊರಿನ ಜನರಿಗೂ ತಿಳಿದಿಲ್ಲ.. ಹಲವಾರು ಇತಿಹಾಸವನ್ನು ಹೊಂದಿರುವ ಊರು ‘ಪೆರಾಡಿ’.

ಏನಿದು ಪೆರಾಡಿ? ಇತಿಹಾಸವೇನೆಂಬುದರ ಬಗೆಗೆ ಕುತೂಹಲವೇ..? ಬನ್ನಿ.. ಈ ಊರಿನ ಇತಿಹಾಸವ ನಿಮಗೆ ಉಣಬಡಿಸುವೆ..

ಜೈನ ಕಾಶಿ ಮೂಡುಬಿದಿರೆಯಿಂದ ಸುಮಾರು 17ಕಿ.ಮೀ ಹಾಗೂ ಬೆಳ್ತಂಗಡಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪೆರಾಡಿ ಒಂದು ಸಣ್ಣ ಹಳ್ಳಿ, ಆದರೆ ಈ ಹಳ್ಳಿ ವಿಸ್ತೀರ್ಣದಲ್ಲಿ ಸಣ್ಣದಾಗಿದ್ದರೂ ತನ್ನ ಇತಿಹಾಸದಲ್ಲಿ ಬಹುದೊಡ್ಡದಾಗಿದೆ. ಈ ಊರಿನ ಇತಿಹಾಸವನ್ನು ತಿಳಿಯುತ್ತಾ ಮುಂದೆ ನಡೆದರೆ ಒಂದಲ್ಲ ಎರಡಲ್ಲ ಹಲವಾರು ವಿಷಯಗಳು ದೊರೆಯುತ್ತದೆ, ಈ ಊರಿಗೆ “ಪೆರಾಡಿ” ಎಂಬ ಹೆಸರು ಪೆರಾಡಿಬೀಡು ಜೈನಮನೆತನದ ಮೂಲಕ ಬಂದಿದೆ ಎಂಬ ಪ್ರತೀತಿ ಇದೆ, ಈ ಪೆರಾಡಿ ಬೀಡು 500 ವರ್ಷಗಳಷ್ಟು ಪುರಾತನವಾದದ್ದು..

ಪೆರಾಡಿ ಎಂಬ ಗ್ರಾಮವು ಬೆಳ್ತಂಗಡಿ ತಾಲೂಕಿಗೆ ಸಂಬಂಧ ಪಟ್ಟಿದ್ದು , ತನ್ನ ಸುತ್ತ ಮುತ್ತ ಮರೋಡಿ, ಕಾಶಿಪಟ್ಣ, ಶಿರ್ತಾಡಿ, ಸಾವ್ಯ, ಕೊಕ್ರಾಡಿಯಂಥ ಹಳ್ಳಿಯನ್ನು ಹೊಂದಿದೆ. ನನ್ನ ಊರಿನ ಪ್ರಮುಖ ವಿಶೇಷತೆಯೇನೆಂದರೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ತವರೂರು ಈ ಊರು, ಪೆರಾಡಿ ಬೀಡು ಅವರ ತವರು ಮನೆ.

ಪೆರಾಡಿಗೆ ಮಾವಿನಕಟ್ಟೆ ಎಂಬ ಹೆಸರೂ ಇದೆ.ಸುಮಾರು 1965ರ ಸಮಯದಲ್ಲಿ ಇಲ್ಲಿ ಒಂದು ದೊಡ್ಡ ಮಾವಿನಮರ ಇತ್ತು.ಅದರಲ್ಲಿ ಹಲವು ಬಗೆಯ ಮಾವಿನ ಹಣ್ಣು ಆಗುತ್ತಿತ್ತಂತೆ. ಆ ಮರದ ಬುಡದಲ್ಲಿ ಒಂದು ಕಟ್ಟೆ ಕಟ್ಟಿ ಅದರಲ್ಲಿ ಗೋಂದುಲು ಪೂಜೆ(ರಾಶಿ ಪೂಜೆ ಎನ್ನುವ ಹೆಸರು ಇದೆ) ಮತ್ತು ಅಯ್ಯಪ್ಪನ ಪೂಜೆಯು ನಡೆಯುತ್ತಿತ್ತು.ನಂತರ 1974ರಲ್ಲಿ ಅಲ್ಲಿಯೇ ಹಿಂದೆ ಗುಡಿಕಟ್ಟಿ ಈಗಲೂ ಪೂಜಿಸಲ್ಪಡುತ್ತಿದೆ,

ಆ ಮಾವಿನ ಮರದ ಬುಡದಲ್ಲಿಯೇ ಅಳದಂಗಡಿಯ ತಿಮ್ಮಣ್ಣ ಅಜೀಲರ ಪುತ್ರ ಡಾ. ಪದ್ಮ ಪ್ರಸಾದ್ ಅಜೀಲರ ಒಂದು ಸಣ್ಣದಾದ ಕ್ಲಿನಿಕ್ ಅನ್ನು ನಡೆಸುತ್ತಿದ್ದರು.

ಇಲ್ಲಿನ ಬಂಡಸಾಲೆ ಎಂಬಲ್ಲಿ ಸುಮಾರು 1956ರಲ್ಲಿ ಒಂದು ಸಣ್ಣದಾದ ಕೃಷಿಪತ್ತಿನ ಸಹಕಾರಿ ಸಂಘವು ಆರಂಭವಾಗಿ ಮುಂದೆ ಅದು ಜಾರಪ್ಪ ಶೆಟ್ಟಿಯವರ ಕಟ್ಟಡಕ್ಕೆ 1964ರ ಸುಮಾರಿಗೆ ಸ್ಥಳಾಂತರವಾಯಿತು,ಅಲ್ಲಿ ಕೆಲವೇ ದಿನ ಇದು ಮುಂದುವರೆದು ನಂತರ ಮಾವಿನಮರದ ಸಮೀಪ ಒಂದು ಸಣ್ಣದಾದ ಕಟ್ಟಡದ ನಿರ್ಮಾಣವಾಗಿ ಮುಂದುವರೆಯಿತು. ನಂತರ 2005ರಲ್ಲಿ ಪಾಂಚಜನ್ಯ ಎಂಬ ಹೆಸರಿನಲ್ಲಿ ಎರಡು ಮಾಳಿಗೆಯ ಕಟ್ಟಡವು ನಿರ್ಮಾಣವಾಗಿ ಇಂದು ಹಲವಾರು ಕಾರ್ಯಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಹಿಂದೆ ಒಂದು ಗೋದಾಮು ಇತ್ತು. ಅದರಲ್ಲಿ ದವಸ ಧಾನ್ಯ ಸಂಗ್ರಹ ಮಾಡುತ್ತಿದ್ದರು. ಈಗ ಅದರಲ್ಲಿ ಹಾಲು ಉತ್ಪಾದಕರ ಸಂಘವು ನಡೆಯುತ್ತಿದೆ. ಈಗ ನಡೆಯುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಒಂದು ಆರೋಗ್ಯ ಕೇಂದ್ರವು ಇದೆ. ಈ ಊರಿನ ಇನ್ನೊಂದು ಮುಖ್ಯ ವಿಶೇಷತೆಯೇನೆಂದರೆ, 1972ರಲ್ಲಿ ರೈತರ ಏಳಿಗೆಗಾಗಿ ಶ್ರಮಿಸಿದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಚುನಾವಣಾ ಭಾಷಣ ಮಾಡಲೆಂದು ಇಲ್ಲಿಗೆ ಬಂದಿದ್ದರು. ಇಲ್ಲಿಗೆ ಮೊದಲು ಬಳ್ಳಾಲ್ ಟ್ರಾವೆಲ್ಸ್ ನವರ ಇಂದಿರಾ ಬಸ್ ಮತ್ತು ವಿನಯ ಬಸ್ ಎಂಬ ಎರಡು ಬಸ್ಸು ಬರುತ್ತಿತ್ತು. ಈಗ ಹಲವಾರು ಬಸ್ಸುಗಳು ಬರುತ್ತದೆ.

ಮುಖ್ಯವಾಗಿ ಕಂಗು,ತೆಂಗು,ಭತ್ತ,ಬಾಳೆ ಬೆಳೆಯುವ ಇಲ್ಲಿನ ಜನರಿಗೆ ಇಲ್ಲಿ ಹರಿಯುತ್ತಿರುವ ತೊರೆಗಳು ಹಲವಾರು ರೈತರ ಜೀವನಕ್ಕೆ ಉಪಯುಕ್ತವಾಗಿದ್ದು,ಇದು ಶಿರ್ತಾಡಿಯ ಮುರಂತಾಡಿ ಸಂಕವನ್ನು ತಲುಪಿ,ಈ ಸಂಕವು ಗುರುಪುರ ಸಂಕವನ್ನು ಸೇರುತ್ತದೆ.

ಮರೋಡಿ, ಪೆರಾಡಿ ಗ್ರಾಮದ ಮಧ್ಯದಲ್ಲಿ ಒಂದು ಶಾಲೆಯಿದೆ. ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ,ಮಾವಿನಕಟ್ಟೆ ಎಂಬ ನಾಮಾಂಕಿತವನ್ನು ಒಳಗೊಂಡಿರುವ ಈ ಶಾಲೆಯು 1997ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರಿನೊಂದಿಗೆ 25 ಮಕ್ಕಳನ್ನು ಒಳಗೊಂಡು, ಸ್ವಂತ ಕಟ್ಟಡವಿಲ್ಲದೆ ವೆಂಕಪ್ಪ ಮೂಲ್ಯ ಎಂಬವರ ಕಟ್ಟಡದಲ್ಲಿ ಆರಂಭವಾಯಿತು.ಮುಂದಿನ ದಿನಗಳಲ್ಲಿ ಊರವರ ಸಹಕಾರದಿಂದ ಸ್ವಂತ ಕಟ್ಟಡ ನಿರ್ಮಾಣವಾಯಿತು. 2002-03 ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡು,ಈಗ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮಾವಿನಕಟ್ಟೆ ಎಂಬ ನಾಮಾಂಕಿತದಿಂದ ಮುಂದುವರೆದು ಮಕ್ಕಳ ಭವಿಷ್ಯ ದ ಪ್ರಗತಿಯಲ್ಲಿದೆ. ಅದರ ಬದಿಯಲ್ಲಿಯೇ ಅಂಗನವಾಡಿ ಕೇಂದ್ರವಿದೆ.

ನಮ್ಮ ತುಳುನಾಡಿನ ಪ್ರಸಿದ್ಧ ಕಲೆಯಾದ ಕಂಬಳವನ್ನು ಸಾರ್ವಜನಿಕವಾಗಿ 40 ವರ್ಷಗಳ ಹಿಂದೆ ಇದೇ ಗ್ರಾಮದ ಹಲೆಕ್ಕಿ ಎಂಬ ಗದ್ದೆಯಲ್ಲಿ ನಡೆಸುತ್ತಿದ್ದರೆಂಬ ಇತಿಹಾಸವಿದೆ. ಪೆರಾಡಿಯಲ್ಲಿ ಮುಖ್ಯವಾಗಿ ಕುರುಡಾಯಿ ಪಾದೆ,ಉರ್ದರಕಲ್ಲು ಮತ್ತು ನಿಟ್ಟೇಡಿ ಪಾದೆ ಎಂಬ ದೈತ್ಯ ಕಲ್ಲಿನ ಪಾದೆಗಳಿವೆ.ನಿಟ್ಟೇಡಿ ಪಾದೆಯು ಸುಮಾರು ಮೂರು ಕಿ.ಮೀ ಸುತ್ತಳತೆಯಲ್ಲಿ ತನ್ನನ್ನು ವಿಸ್ತರಿಸಿದೆ. ಹಾಗೂ ಉರ್ಧರ ಕಲ್ಲಿಗೆ ತನ್ನದೇ ಆದ ಇತಿಹಾಸವಿದೆ ಅದೇನೆಂದರೆ, ಈಗ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಆಚರಿಸಲ್ಪಡುತ್ತಿರುವ ಸೂರ್ಯನಾರಾಯಣ ದೇವಸ್ಥಾನವವು ಮೊದಲು ಈ ಉರ್ದರಕಲ್ಲಿನಲ್ಲಿ ನೆಲೆಗೊಂಡಿತ್ತು. ನಂತರ ಕೆಲವು ಕಾರಣಗಳಿಂದ ನಾರಾವಿಯಲ್ಲಿ ಸ್ಥಾಪಿಸಲ್ಪಟ್ಟಿತು.

ತುಳುನಾಡಿನ ವೀರರೆಂದೇ ಖ್ಯಾತರಾಗಿರುವ ಕೋಟಿ-ಚೆನ್ನಯರ ಗರಡಿಯು ಇಲ್ಲಿ ನೆಲೆಗೊಂಡಿದ್ದು,ಪಂಡಿಂಜೆಬೆಟ್ಟು ಎಂಬ ನಾಮಾಂಕಿತದಿಂದ ಪ್ರಚಲಿತದಲ್ಲಿದೆ. ಇಲ್ಲಿ ಕೋಟಿ-ಚೆನ್ನಯರ ಜೊತೆಗೆ ದೈವ ಕೊಡಮಣಿತ್ತಾಯದ ಗರಡಿಯು ಇದ್ದು ಪ್ರತಿ ವರ್ಷ ಎರಡು ದಿನದ ಜಾತ್ರೆಯು ನಡೆಯುತ್ತದೆ.

ಕರೆಂಕಿದೋಡಿ ಎಂಬ ಜೈನಮನೆತನದಿಂದ ಸ್ವಲ್ಪದೂರದಲ್ಲಿ ಕೇಳದಪೇಟೆ ಮತ್ತು ಪೆರಾಡಿಯ ಗಡಿ ಭಾಗದಲ್ಲಿ ಪೂಪಾಡಿ ಕಲ್ಲು ಎಂಬ ದೈವದ ಸಾನಿಧ್ಯವು ಇದ್ದು, ಅಲ್ಲಿಯ ಮುಖ್ಯ ವಿಶೇಷ ಎಂದರೆ,ಆ ಸ್ಥಳದಲ್ಲಿ ಯಾರೇ ಸಂಚರಿಸಿದರೂ ಅಲ್ಲಿ ಕೆಂಪುಲ ಹೂವು ಎನ್ನುವ ಹೂವನ್ನು ಹಾಗೂ ಬಿಳಿಯ ಕಲ್ಲನ್ನು(ಬೊಲ್ಕಲ್ಲು) ಹಾಕಿ ಹೋಗಬೇಕು ಎಂದು ಹಿರಿಯರು ಹೇಳುತ್ತಾರೆ. ಮತ್ತೊಂದು ವಿಶೇಷವೆಂದರೆ, ಪೆರಾಡಿ ಬೀಡಿನ ಮನೆತನಕ್ಕೆ ಸಂಬಂಧಿಸಿದ ದಿಂಡುಬಳ್ಳಾಲ್ತಿಯ ವಿಗ್ರಹ, ಒಂದು ಜೈನ ಮನೆತನದ ಹೆಣ್ಣು ಯಾವುದೋ ಕಾರಣದಿಂದ ಮಾಯವಾದ ಇತಿಹಾಸವಿದೆ,ಯಾವುದೇ ಕೆಲಸವು ಸಫಲವಾದರೆ ಇಲ್ಲಿಗೆ ಬೆಳ್ಳಿಯ ವೀಳ್ಯದೆಲೆಯನ್ನು ನೀಡುವೆನೆಂದು ಹರಕೆ ಹೊತ್ತು ಕೊಂಡರೆ ಆ ಕೆಲಸವು ನೆರವೇರುತ್ತದೆ.

1939 ಸುಮಾರಿಗೆ ಇಲ್ಲಿನ ಬಂಡಸಾಲೆಯಲ್ಲಿ ಊರಿನ ಜನರೆಲ್ಲಾ ಒಟ್ಟಿಗೆ ಸೇರಿ ಶಾರದಾಂಬೆಯ ಗುಡಿ ಕಟ್ಟಿ ತಾಳಮದ್ದಳೆ,ಯಕ್ಷಗಾನವನ್ನು ಆಡಿಸುತ್ತಾ ಬಂದರು. ಈಗಲೂ ಪ್ರತಿವರ್ಷ ಶಾರದಾಂಬೆಯ ಭಕ್ತರು ಪ್ರತಿ ಮನೆಗೆ ನಗರ ಭಜನೆಗೆ ತೆರಳಿ ಕೊನೆಗೆ ಶಾರದಾಂಬೆಯ ಮಂದಿರದಲ್ಲಿ ಮಂಗಳೋತ್ಸವವನ್ನು ನಡೆಸುತ್ತಾರೆ.

ನನ್ನೂರು ಪ್ರತಿ ಧರ್ಮಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ನೀಡಿದೆ. ಹಿಂದಿನಿಂದಲೂ ಇಲ್ಲಿ ಎರಡು ಚಂದ್ರನಾಥ ಬಸದಿಗಳು ಇದ್ದೂ,ಅದರಲ್ಲಿ ಒಂದು ಬಸದಿಯನ್ನು ಕರೆಂಕಿದೋಡಿ ಮನೆತನದವರು ಹಾಗೂ ಇನ್ನೊಂದನ್ನು ಪೆರಾಡಿ ಬೀಡಿನವರು ನಡೆಸಿಕೊಂಡು ಬರುತ್ತಿದ್ದಾರೆ,ಪ್ರತಿ ವರ್ಷವೂ ಇಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವ ಕ್ರಮವು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕ್ರೈಸ್ತರ ಇಂಗ್ರೇಜ್ನಲ್ಲಿ ಊರ ಎಲ್ಲಾ ಕ್ರೈಸ್ತ ಬಾಂಧವರು ಸೇರಿ ಪ್ರಾರ್ಥನೆ ಮಾಡುತ್ತಿದ್ದರು. ಇಂಗ್ರೇಜಿನ ಪ್ರಮುಖರು ಅದರ ಸಮೀಪದಲ್ಲಿ ಒಂದು ಶಾಲೆಯನ್ನು ತೆರೆದು ಅಲ್ಲಿಯ ಎಲ್ಲಾ ಖರ್ಚು ವೆಚ್ಚವನ್ನು ನೋಡುತ್ತಿದ್ದರು.ಮುಸ್ಲಿಮರ ಮಸೀದಿಯು ಇಲ್ಲಿ ನೆಲೆಗೊಂಡಿದ್ದು, ಪೆರಾಡಿಯ ಸಮೀಪದ ಗುಜ್ಜೋಟ್ಟಿನಿಂದಲೂ ಮುಸ್ಲಿಮರು ಆಗಮಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ನನ್ನ ಊರು ಎಣಿಸಲು ಅಸಾಧ್ಯವಾದಷ್ಟು ಇತಿಹಾಸವನ್ನು ಹೊಂದಿದ್ದು, ಹಚ್ಚ ಹಸಿರಾಗಿ ಕಂಗೊಳಿಸುವ ಹಲವಾರು ಸುಂದರ ಸ್ಥಳಗಳನ್ನು ಹೊಂದಿದೆ.. ಎಂದಾದರೂ ಈ ಊರಿಗೆ ಆಗಮಿಸಿ ಇಲ್ಲಿಯ ಸುಂದರ ಸ್ಥಳವನ್ನು ವೀಕ್ಷಿಸಿ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು