News Karnataka Kannada
Tuesday, April 23 2024
Cricket
ನುಡಿಚಿತ್ರ

ತಿಮಿರಮ್’…..ತೊರೆಯಬೇಕಾದ ಪೊರೆ

Thimiramjpg
Photo Credit :

ಸಂದಿಗ್ಧ ಪರಿಸ್ಥಿತಿಯಿಂದ ಚಿತ್ರಮಂದಿರಗಳಿಗೆ ಪುನಹಾ ಬೀಗ. ಯಾವುದೇ ತಡೆಯಿಲ್ಲದ ಓಟ , ಹೌಸ್ ಫುಲ್ ಬೋರ್ಡು ಇನ್ನು ಯಾವಾಗ ಕಾಣಸಿಗುತ್ತದೋ ಗೊತ್ತಿಲ್ಲ.

ಬಿಗ್ ಬಜೆಟ್ ಸಿನೆಮಾಗಳು ಉಭಯಸಂಕಟದಲ್ಲಿರುವಾಗ ಓ.ಟಿ.ಟಿ. ವೇದಿಕೆಗಳಲ್ಲಿ ನೈಜ ಚಿತ್ರಣಗಳು ಮನಮುಟ್ಟುತ್ತಿವೆ. ಹೊಸ ತಲೆಮಾರು ತಮ್ಮ ವಿಭಿನ್ನ ಪ್ರಯತ್ನಗಳಿಂದ ನವ ಮಾರ್ಪಾಡು ಸೃಷ್ಟಿಸುವುದು ನಿಜ. ಮಿಕ್ಕ ಚಿತ್ರರಂಗಗಳ

ವ್ಯಾಪಾರಿ ಚಿತ್ರಗಳ ಭರಾಟೆಯೆದುರು ಸಮಾಜಕ್ಕೆ ಕನ್ನಡಿ ಹಿಡಿಯುವ ಕಥೆ ಹಾಗೂ ಸಹಜತೆಗಳೊಂದಿಗೆ ಮಲಯಾಳಮ್ ನ ಕ್ರಿಯಾಶೀಲ ಕಥೆಗಾರರು ಪ್ರೇಕ್ಷಕರೆದುರು ಬರುತ್ತಿದ್ದಾರೆ, ಪ್ರತೀ ಬಾರಿಯೂ ಸಾಮರ್ಥ್ಯವನ್ನು ನಿರೂಪಿಸತ್ತಲೂ ಇದ್ದಾರೆ. ಅವುಗಳು ಸಿನೆಮಾ ದಾಹಿಗಳಿಗೆ ಪಾಠಶಾಲೆಯೇ ಸರಿ.

ಇಲ್ಲಿ ಈಬಗೆಯ ಪೀಟಿಕೆ ಯಾಕೆಂದರೆ , ಇತ್ತೀಚಿಗಷ್ಟೇ ನೀ – ಸ್ಟ್ರೀಮ್ ( Nee-Stream) ನಲ್ಲಿ ಬಿಡುಗಡೆಯಾದ ‘ತಿಮಿರಮ್’ ಎಂಬ ಮಲಯಾಳಮ್ ಚಲನಚಿತ್ರ. ‘ತಿಮಿರಮ್’ ಅರ್ಥಾತ್ ‘ಕಣ್ಣಿನ ಪೊರೆ ’. ಎಪ್ಪತ್ತರ ಆಸುಪಾಸಿನ ಸುಧಾಕರನ್ ಎಂಬ ವ್ಯಕ್ತಿ ,ಆತನ ಕುಟುಂಬ ಹಾಗೂ ಸ್ವಭಾವ ಕೇಂದ್ರ ಕಥಾವಿಶಯ.

ಆರ್ಥಿಕವಾಗಿ ಏರಿಳಿತಗಳುಳ್ಳ ಮಧ್ಯಮವರ್ಗದ ಕುಟುಂಬ , ಆರೋಗ್ಯ ಸಮಸ್ಯೆಗಳು , ಸಾಂಸಾರಿಕ ಮನಸ್ಥಾಪಗಳೊಂದಿಗೆ ಸುಧಾಕರನಿಗಿರುವ ದೃಷ್ಟಿ ದೋಷವೂ ಹಲವು ವ್ಯಾಖ್ಯಾನಗಳನ್ನು ನೀಡುತ್ತವೆ. ಇಂತಹಾ ರೂಪಕಗಳೊಂದಿಗೆ ಕಥೆ ನೋಡುಗನ ಒಳಹೊಕ್ಕು ಪ್ರೇಕ್ಷಕನನ್ನೇ ಪಾತ್ರವನ್ನಾಗಿಸುತ್ತದೆ.

ಸಾಂದರ್ಭಿಕ ಒಳನೋಟಗಳೊಂದಿಗೆ ಗಂಭೀರ ಚಿಂತನೆಯೆಡೆಗೆ ಕೊಂಡೊಯ್ಯುವುದರಲ್ಲಿ ನಿರ್ದೇಶಕ ಶಿವರಾಮ್ ಮಣಿ ಯಶಸ್ವಿ. ಮಹಿಳೆಯರನ್ನು ಕೇವಲ ನಿರ್ಜೀವ ವಸ್ತುವಿನಂತೆ ಕಾಣುವ ಹೀನ ಸ್ವಭಾವಿ, ಅವಕಾಶ ಸಿಕ್ಕಾಗೆಲ್ಲಾ ತನ್ನ ಚಟ ತೀರಿಸಿಕೊಳ್ಳುವಂತಹ ಮನಸ್ಥಿತಿ ಉಳ್ಳವನು ಸುಧಾಕರನ್ . ಸ್ತ್ರೀ ಎಂದೂ ಪುರುಷನಿಗಿಂತ ದುರ್ಬಲಳು, ಹೊರ ಪ್ರಪಂಚದ ವಹಿವಾಟು ಗಂಡಸರಿಗೆ ಮೀಸಲು, ಅಡುಗೆ ಕೋಣೆಯೇ ಆಕೆಗೆ ಸೂಕ್ತ ಎಂಬ ಮನೋದೃಷ್ಟಿ ಆತನದು. ನಾಯಕನಿಗೆ ದೃಷ್ಟಿಯ ಪೊರೆಯೊಂದಿಗೆ ಮನಸ್ಥಿತಿಗೂ ಅಂಧಕಾರ ಕವಿದಿದೆ ಎಂಬುವುದು ಕಾಣಸಿಗುವ ಸತ್ಯ.

ಚಿತ್ರದ ಆರಂಭದಲ್ಲಿ ಬರುವ ಬಾಲ್ಯದ ಸನ್ನಿವೇಶಗಳಲ್ಲಿ ಆತನ ತಾಯಿ ಒಳಗೊಂಡಂತೆ ಒಟ್ಟು ಸಮಾಜ ತಪ್ಪುಗಳನ್ನು ಹೇಗೆ ಪರಿಗಣಿಸಿತೆಂಬುದರೊಂದಿಗೆ ಬೆಳೆದ ವಾತಾವರಣವನ್ನೂ ಕಟ್ಟಿಕೊಡುತ್ತದೆ. ಈ ಚಿತ್ರಣಗಳ ಬಳಿಕ ಸುಧಾಕರನ ನೀಚ ಸ್ವಭಾವದಲ್ಲಿ ಯಾವುದೇ ಅಸ್ವಾಭಾವಿಕತೆ ಎನಿಸಲು ಸಾಧ್ಯವಿಲ್ಲ.

ಈ ಚಿತ್ರದ ನಿರ್ಮಾಪಕನೂ ಆಗಿರುವ ಕೆ.ಕೆ ಸುಧಾಕರನ್ ಮುಖ್ಯ ಭೂಮಿಕೆಯ ಸುಧಾಕರನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಭಾವೀ ತಾರಾಗಣ ಇಲ್ಲವಾದರೂ ಪ್ರತಿಯೊಂದು ಪಾತ್ರಗಳು ಹಾಗು ನೈಜ ನಟನೆ ಆಳವಾಗಿ ಮನದಲಿ ಬೇರೂರುವಂತದ್ದು. ಹಲವು ಪ್ರಾರಾಬ್ಧಗಳ ಜೊತೆಗೆ ತನ್ನ ಲಕ್ಷ್ಯಗಳನ್ನು ಬೆನ್ನಟ್ಟಿ ಸಾಗುವ ಮಗನ ಪಾತ್ರದಲ್ಲಿ ‘ಆನಂದಮ್’ ಖ್ಯಾತಿಯ ‘ವಿಶಾಕ್ ನಾಯರ್ ’ ಕಾಣಿಸಿಕೊಂಡಿದ್ದಾರೆ.

ತಂದೆ ಮಗನ ಸಂಬಂಧ ಸುಂದರವಾಗಿ ಚಿತ್ರಕತೆಯುದ್ದಕ್ಕೂ ಸಾಗುತ್ತಿದ್ದು ,ಕೊನೆಗೆ ತಂದೆಯ ದುರ್ಬಲ ಗುಣ ತಿಳಿದ ಮಗ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಸನ್ನಿವೇಶದ ಮೂಲಕ ನಿರ್ದೇಶಕ ಸಮಾಜಕ್ಕೆ ಮಾರ್ಮಿಕ ಸಂದೇಶವನ್ನು ನೀಡುತ್ತಾರೆ. “ಗಂಡು ಏನು ಬೇಕಾದರೂ ಮಾಡಬಲ್ಲ” ಎಂಬ ಸುಧಾಕರನ ಮಾತಿಗೆ ” ಸಾಧ್ಯವಾದರೆ ಒಂಬತ್ತು ತಿಂಗಳು ಹೊತ್ತು ಹೆತ್ತು ನೋಡು ” ಎಂಬ ನರ್ಸ್ ನ ಪ್ರತ್ಯುತ್ತರ ಪ್ರತಿಯೊಬ್ಬನೂ ತನ್ನನ್ನು ತಾನು.. ಸಾಧ್ಯವೇನು!? ಎಂದು

ಪ್ರಶ್ನಿಸಿಕೊಳ್ಳಲೇ ಬೇಕಾದ ವಿಚಾರ. ‘ರಚನಾ ನಾರಾಯಣನ್ ‘ ಅವರ ನರ್ಸ್ ಪಾತ್ರದ ದಿಟ್ಟತನಕ್ಕೊಂದು ಸಲಾಂ. ನಮ್ಮವರೇ ಎಂದೆನಿಸುವ ಪ್ರತಿಯೊಂದು ಹೆಣ್ಮನಗಳದು ಮಾಸದೆ ಉಳಿವ ಛಾಪು.

ತಪ್ಪುಗಳ ಅರಿವಾಗಿ ಸೊಸೆಯೆದುರು ಕೈ ಜೋಡಿಸುವಲ್ಲಿಗೆ ಸಿನಮಕ್ಕಿದೋ ಪೂರ್ಣ ವಿರಾಮ ,

ಹೊಸತನದ ಆಗಮನ. ಈ ಜಗವೇ ಕಲ್ಮಶ ಭರಿತವೋ..!? ಯಾನದ ಪ್ರತೀ ಹುರುಳುಗಳಲ್ಲೇ ಎಡವಿದ್ದೇವೋ..!? ಬದುಕ ಹೂರಣವಂತು ಸಿಹಿಯಾಗೇ ಇರಲಿ. ಸ್ತ್ರೀ ಸಬಲೀಕರಣ ಎಂಬ ನಗು ಸಮಾಜದಲ್ಲಿ ಎಷ್ಟೇ ಖುಷಿ ಹಂಚಿದರೂ ಇಂದಿಗೂ ಗಂಡು ಹೆಣ್ಣೆಂಬ ತಾರತಮ್ಯ ತೊಲಗದ ಕೊಳೆ. ‘ತಿಮಿರಮ್’ ಚಿತ್ರದಲ್ಲಿ ಪ್ರಾಯಸ್ತನ ಮನಸ್ಥಿತಿಯನ್ನು ಬಿಂಬಿಸಿದರೂ ಇಂದಿನ ಪೀಳಿಗೆಯೂ ಮೌಢ್ಯದ ಕುಣಿಕೆಗೆ ಸಿಲುಕಿದೆ ಎಂಬುದು ವಾಸ್ತವ.

ಚಲನಚಿತ್ರಗಳಿಂದ ಮನೋರಂಜನೆಯ ಜೊತೆಗೆ ಧನಾತ್ಮಕ ವಿಚಾರಗಳನ್ನೂ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಇಂತಹಾ ಸೃಜನಶೀಲ ಮಾದರಿಗಳಿಗೆ ಪ್ರೋತ್ಸಾಹಿಸೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು