News Karnataka Kannada
Thursday, April 18 2024
Cricket
ನುಡಿಚಿತ್ರ

ಅಪರೂಪದ ಸಾಧಕ ಪ್ರಾಕ್ತನ ಶಾಸ್ತ್ರಜ್ಞ ಡಾ.ಉಮಾನಾಥ ಶೆಣೈ

Photo Credit :

ಅಪರೂಪದ ಸಾಧಕ ಪ್ರಾಕ್ತನ ಶಾಸ್ತ್ರಜ್ಞ ಡಾ.ಉಮಾನಾಥ ಶೆಣೈ

ಇವರು ವೃತ್ತಿಯಲ್ಲಿ ಉಪನ್ಯಾಸಕ, ಆದರೆ ಪ್ರವೃತ್ತಿಯಲ್ಲಿ ಪ್ರಾಕ್ತನ ಶಾಸ್ತ್ರಜ್ಞ, ಶಾಸನ ತಜ್ಞ ಜತೆಗೆ ಪ್ರತಿಮಾ ತಜ್ಞ. ಮೂಲತಃ ಪುತ್ತೂರಿನವರಾದ ಇವರು ಇತಿಹಾಸ ಪ್ರಿಯರು. ಕಬ್ಬಿಣದ ಕಡಲೆಯಂತಿರುವ ಹಳೆಗನ್ನಡವನ್ನು ಮೈಮನದೊಳಗೆ ಇಳಿಸಿಕೊಂಡವರು. ಆಸಕ್ತಿಯಿಂದ ಮೊಗೆದರೆ ಮತ್ತಷ್ಟು, ಮಗದಷ್ಟು ನಮ್ಮ ಐತಿಹಾಸಿಕ ಪರಂಪರೆಯ ದರುಶನವಾಗುತ್ತದೆ ಎನ್ನುವವರು ಡಾ. ವೈ.ಉಮಾನಾಥ ಶೆಣೈ.

ಇತಿಹಾಸವೆಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ಅದನ್ನೇ ನಂಬಿಕೊಂಡು ಬದುಕುತ್ತಿರುವವರು ಉಮಾನಾಥ್ ಶೆಣೈ ಅವರು 1947ರಲ್ಲಿ ವೇದಭೂಷಣ ವೆಂಕಟೇಶ್ ದೇವರಾವ್ ಮಾಳ್‍ಗಾಂವ್‍ಕರ್ ಮತ್ತು ಸುಶೀಲಾ ಬಾಯಿಯ ಸುಪುತ್ರನಾಗಿ ಜನಿಸಿದರು.

ಅಂದಹಾಗೇ ಇತಿಹಾಸದ ಮೇಲೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿದ್ದು ಅವರ ಮನೆಯ ವಾತಾವರಣವೇ ಹೊರತು ಬೇರಾವುದಲ್ಲ. ಪುರೋಹಿತರಾಗಿದ್ದ ಅಪ್ಪನಿಂದ ವೇದ, ಪುರಾಣ, ಜ್ಯೋತಿಷ್ಯ, ಐತಿಹಾಸಿಕತೆಯ ಪ್ರಭಾವಗಳು ಇವರ ಮೇಲೆ ಬೀಳಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಮುಂದೆ ಓದಿದ್ದು ಇತಿಹಾಸವೇ ಆಗಿರುವುದರಿಂದ ಹುದುಗಿ ಹೋಗಿರುವ ಐತಿಹಾಸಿಕ ಪರಂಪರೆಯ ಮೇಲಿನ ಮೋಹ ಇಮ್ಮಡಿಗೊಂಡಿತ್ತು. ಮೈಸೂರು ವಿಶ್ಯವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲೇ ಸ್ನಾತಕೋತ್ತರ ಪದವಿಯನ್ನು ಮಾಡಿದ್ದು ಇವರ ಇತಿಹಾಸ ಪ್ರೀತಿಗೆ ಮುನ್ನುಡಿಯಂತಿದೆ.

ಅಲ್ಲಿಂದ ಶುರುವಾದ ಹಿಸ್ಟರಿ ಪ್ರೀತಿ ಇಂದು ಇವರನ್ನು ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಇತಿಹಾಸದ ಉಪನ್ಯಾಸಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿದ್ದಾರೆ. ಆದರೆ ಅದರ ಜೊತೆಜೊತೆಗೆ ಸ್ವಂತ ಆಸಕ್ತಿ, ಅಧ್ಯಯನ, ಪರಿಶ್ರಮದಿಂದಾಗಿ ಮೂರ್ತಿಗಳನ್ನು ಗುರುತಿಸುವ, ಶಾಸನಗಳನ್ನು ಉತ್ಖನನ ಮಾಡುವ ಜೊತೆಗೆ ಅಂತಹ ಕಠಿಣ ಪ್ರಾಚೀನ ಲಿಪಿಯ ಶಾಸನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಅಪರೂಪದ ಕೌಶಲ್ಯವನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಶಾಸನ ಸಿಗಲಿ ಅದನ್ನು ಸುಲಭವಾಗಿ ಓದುತ್ತಾರೆ, ಇನ್ಯಾವುದೇ ಮೂರ್ತಿ ಸಿಗಲಿ ಅದು ಯಾವ ಸಾಮ್ರಾಜ್ಯಕ್ಕೆ ಯಾರ ಕಾಲಘಟ್ಟಕ್ಕೆ, ಯಾವ ದೇವರಿಗೆ ಸೇರಿದ್ದು ಎಂಬುದನ್ನು ತಕ್ಷಣವೇ ಹೇಳಿಬಿಡುವಂತಹ ತಜ್ಞರಿವರು.

ಉಪನ್ಯಾಸಕರೆಂದರೆ ಕೇವಲ ಪಾಠ-ಪ್ರವಚನಕ್ಕಷ್ಟೇ ಸೀಮಿತ ಎನ್ನುವವರಿಗೆ ಇವರು ಮಾದರಿಯಾಗಿ ನಿಲ್ಲುತ್ತಾರೆ. ಇವರನ್ನರಸಿ ಬಂದಿರುವ ಹಲವಾರು ಪ್ರಾಕ್ತನ ಶಾಸ್ತ್ರಜ್ಞ, ಪ್ರತಿಮಾ ತಜ್ಞ ಹಾಗೂ ಶಾಸನ ತಜ್ಞರಿಗೆ ತರಬೇತಿಯನ್ನು ನೀಡಿ ಜ್ಞಾನ ಪಸರಿಸುವತ್ತವೂ ಚಿಂತನೆ ನಡೆಸುವ ಮೇಷ್ಟ್ರು ಇವರು. ಮಾತ್ರವಲ್ಲ ಇವರ ಸುಮಾರು 200ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‍ಗಳಲ್ಲಿ ಪ್ರಕಟಣೆಗೊಂಡಿವೆ. ರಾಜ್ಯದ ಪ್ರಮುಖ ದಿನಪತ್ರಿಕೆಗಳು ಹಾಗೂ ಪುರವಣಿಗಳಿಗೆ ಅತ್ಯಂತ ಮಹತ್ವಪೂರ್ಣ ಬರವಣಿಗೆಗಳನ್ನೂ ನೀಡಿದ್ದಾರೆ. 1981ರಲ್ಲಿ ತಮ್ಮ ಪ್ರೊಫೆಸರ್ ಡಾ.ಬಿ.ಶೇಕ್ ಅಲಿ ಅವರ ಮಾರ್ಗದರ್ಶನದಡಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಿದ ಕೀರ್ತಿ ಇವರದಾಗಿದೆ. ಇನ್ನು ತಮ್ಮ ಉಪನ್ಯಾಸಕ ವೃತ್ತಿಯನ್ನು ಹೆಚ್ಚಾಗಿ ಕಳೆದಿರುವ ಉಜಿರೆಯ ಎಸ್‍ಡಿಎಮ್ ಕಾಲೇಜನ್ನು ಸದಾ ಸ್ಮರಿಸುತ್ತಾರೆ ಶೆಣೈ ಅವರು. ಅಲ್ಲಿ ಪಾಕೃತ ಅಧ್ಯಯನ ಕೇಂದ್ರದ ಸಂಯೋಜಕ, ತುಳು ಸಂಘದ ಅಧ್ಯಕ್ಷರಾಗಿ,`ದೊಂಪ’ ಮತ್ತು `ಕುರ್ವೆ’ ಎಂಬ ಎರಡು ತುಳು ಕವನಸಂಕಲನಗಳನ್ನು ಪ್ರಕಟಿಸಿದರು.

ತೀರ್ಥಹಳ್ಳಿ ಸಮೀಪ ದೊರೆತಿರುವ ವಿಜಯನಗರದ ಚಕ್ರವರ್ತಿ ಅಚ್ಯುತರಾಯನ ಶಿಲಾಶಾಸನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯನಗರದ ಸಾರ್ವಭೌಮ ಇಮ್ಮಡಿ ದೇವರಾಯ ಮತ್ತು ಹೊಯ್ಸಳ ರಾಜ ವಿಷ್ಣುವರ್ಧನನಿಗೆ ಸೇರಿದ ಮೂರು ಶಾಸನಗಳ ಉತ್ಖನನ ನಡೆಸಿರುವುದು ಕರ್ನಾಟಕದ ಐತಿಹಾಸಿಕ ಪರಂಪರೆಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಮೂಡುಬಿದ್ರೆ ಜೈನಮಠದಲ್ಲಿರುವ 57 ತಾಮ್ರಶಾಸನಗಳ ಅಧ್ಯಯನಕ್ಕಾಗಿ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ವತಿಯಿಂದ ಆರ್ಥಿಕ ಅನುದಾನವನ್ನೂ ಪಡೆದಿರುವುದು ಹೆಗ್ಗಳಿಕೆಯೇ ಸರಿ. ಇನ್ನೂ ಬಂಗಾಡಿ, ಅಳದಂಗಡಿ, ವೇಣೂರು, ಮೂಡುಬಿದ್ರೆ, ನಾರಾವಿ, ಬೆಳ್ತಂಗಡಿ, ಮರ್ಕಾರಾ, ಬೈಲಂಗಡಿ, ಶಶಾಕಪುರಗಳಲ್ಲಿ ದೊರೆತ ಐತಿಹಾಸಿಕ ಸ್ಮಾರಕಗಳ ಕುರಿತು ಅಧ್ಯಯನ ನಡೆಸಿ, ಅವುಗಳಿಗೆ ಸಂಬಂಧಿಸಿದ ಮಾಹಿತಿ ಕೈಪಿಡಿಗಳನ್ನು ರಚಿಸಿದ್ದಾರೆ. 1998ರಲ್ಲಿ ಕರ್ನಾಟಕದ ಹಿರಿಯ ಕೆ.ಎ.ಎಸ್. ಅಧಿಕಾರಿ ಶ್ರೀಮತಿ ವಿಜಯ ಕುಮಾರಿಯವರನ್ನು ವಿವಾಹವಾಗಿ ನಮ್ಮ ದೇಶದ ಎಲ್ಲಾ ರಾಜ್ಯಗಳಿಗೂ, ದೇಶದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕ್ಷೇತ್ರಗಳಿಗೂ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ.

ವರ್ಜೇನಿಯಾದ `ನರೇಂದ್ರ ಹಾಗೂ ಸುಶೀಲ ಜೈನ್ ಫೌಂಡೇಶನ್ ವತಿಯಿಂದ ದೊರೆತಿರುವ 9ನೇ ಶತಮಾನದಲ್ಲಿ ಆಚಾರ್ಯ ಕುಮುದೇಂದು ಬರೆದಿರುವ ಜೈನ ಧರ್ಮದ ಪವಿತ್ರ ಗ್ರಂಥವಾಗಿರುವ `ಸಿರಿಭೂವಲಯ’ವು ಹಳೆಗನ್ನಡದಲ್ಲಿದ್ದು, ಅಮೆರಿಕಾ, ಜಪಾನ್ ಮೊದಲಾದ ದೇಶಗಳ ಭಾಷಾಂತರಕಾರಿಗೂ ಅಸಾಧ್ಯವಾಗಿರುವ ಈ ಗ್ರಂಥವನ್ನು ಇವರು ಓದಿ ಅರ್ಥೈಸಿಕೊಂಡು ಇಂಗ್ಲಿಷ್‍ಗೆ ತರ್ಜುಮೆ ಮಾಡಿ ಕೊಡುತ್ತಿರುವುದು ಇವರ ಹಳೆಗನ್ನಡದ ಮೇಲಿರುವ ಹಿಡಿತ ಎಂತಹುದೆಂಬುದು ಅರಿವಾಗುತ್ತದೆ.

`ಇತಿಹಾಸದಲ್ಲಿ ಮರೆತುಹೋದ ಕನ್ನಡಪುಟಗಳು’ ಹಾಗೂ `ಕನ್ನಡ ಸಾಹಿತ್ಯಕ್ಕೆ ಮೂಡುಬಿದಿರೆ ಲೇಖಕರ ಕೊಡುಗೆ’ ಎಂಬ ಕೃತಿಗಳನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆ ಮಾಡಿದೆ. ಮಾತ್ರವಲ್ಲ ಇವರ `ಕಾರ್ಕಳ ಗೋಮಟೇಶ್ವರ ಚರಿತ್ರೆ’ ಕೃತಿಯನ್ನು ಕರ್ನಾಟಕದ ಪ್ರತಿ ಪ್ರೌಢಶಾಲಾ ಗ್ರಂಥಾಲಯಗಳು ಖರೀದಿಸಬೇಕೆಂದು ಸ್ವತಃ ಕರ್ನಾಟಕ ಸರ್ಕಾರವೇ ಆದೇಶ ನೀಡಿದೆ. ಇನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸುಮಾರು 1ಲಕ್ಷ ರೂಪಾಯಿ ಮೌಲ್ಯದ `ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ’ ಎಂಬ ಕೃತಿಯನ್ನು ಖರೀದಿಸಿರುವುದು ಇವರ ಭಾಷಾ ಹಿಡಿತ, ಇತಿಹಾಸದ ಕುರಿತು ಇರುವ ಫ್ರೌಡಿಮೆಗೆ ಅದಕ್ಕನುಗುಣವಾಗಿ ನಡೆಸುವ ಕ್ಷೇತ್ರಕಾರ್ಯಕ್ಕೆ ದೊರೆತ ಪ್ರತಿಫಲ ಎಂದರೆ ತಪ್ಪಾಗಲಾರದು. ಇವರು ರಚಿಸಿರುವ `ಮೂಡುಬಿದಿರೆಯ ಸಾವಿರ ಕಂಬದ ಬಸದಿ’, `ಶ್ರೀಕಾರಿಂಜ ಕ್ಷೇತ’್ರ, `ಉಜಿರೆ ಪರಿಸರದ ಶ್ರದ್ಧಾ ಕೇಂದ್ರಗಳು’, `ಹೊಯ್ಸಳ ರಾಜವಂಶದ ಉಗಮಸ್ಥಾನ ಶಶಕಪುರ’, `ವೇಣೂರು ಅಜಿಲ ರಾಜವಂಶ’, `ಬೈಂದೂರು ಶ್ರೀ ಸೇನೇಶ್ವರ ದೇವಾಲಯ’, `ಪುತ್ತೂರು ಕ್ಷೇತ್ರದ ಇತಿಹಾಸ’, `ಕರಾವಳಿ ಕರ್ನಾಟಕದ ಜೈನ ಮಂದಿರಗಳ ದರ್ಶನ’ ಮುಂತಾದ ಸುಮಾರು 21 ಪುಸ್ತಕಗಳು ಜನಪ್ರಿಯವಾಗಿವೆ.

ಸದಾ ಒಂದಿಲ್ಲೊಂದು ಕಾರ್ಯದಲ್ಲಿ ಉತ್ಸಾಹದ ಚಿಲುಮೆಯಂತೆ ಕಂಗೊಳಿಸುವ ಇವರು ಬೆಂಗಳೂರಿನ `ಕರ್ನಾಟಕ ಇತಿಹಾಸ ಅಕಾಡೆಮಿ’ ಮೈಸೂರಿನ `ಪ್ಲೇಸ್‍ನೇಮ್ ಸೊಸೈಟಿ ಆಫ್ ಇಂಡಿಯಾ’, `ಎಪಿಗ್ರಾಫಿಕಲ್ ಸೊಸೈಟಿ ಆಫ್ ಇಂಡಿಯಾ’, ತಮಿಳುನಾಡಿನ `ದಿ ವಲ್ರ್ಡ್ ಯೂನಿವರ್ಸಿಟಿ ಸರ್ವೀಸ್’ ಅಸ್ಸಾಂನ `ಇಂಡಿಯನ್ ಆರ್ಟ್ ಹಿಸ್ಟರಿ ಕಾಂಗ್ರೆಸ್’ನಂತಹ ಹಲವಾರು ಪ್ರಮುಖ ಸಂಸ್ಥೆಗಳಲ್ಲಿ ಸಕ್ರಿಯ ವ್ಯಕ್ತಿ. ಇನ್ನೂ ರಾಜ್ಯ- ದೇಶದ ನಾನಾ ಭಾಗಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ತೆರಳಿ ನಮ್ಮ ನಾಡಿನ ಗೌರವವನ್ನು ಹೆಚ್ಚಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಇವರಿಗೆ 2009ರಲ್ಲಿ ಶ್ರವಣಬೆಳಗೋಳದ ಬಾಹುಬಲಿ ಪ್ರಾಕೃತ್ ವಿದ್ಯಾಪೀಠದ ವತಿಯಿಂದ `ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಮಾತ್ರವಲ್ಲ ಮೂಡುಬಿದ್ರೆಯ ಜೈನ ಮಠವು ಇವರಿಗೆ `ಜಿನವಾಣಿ ಪುರಸ್ಕಾರ’ವನ್ನು ಹಾಗೂ 2008ರಲ್ಲಿ `ಸಂಶೋಧನಾ ಪ್ರವೀಣ’ ಎಂಬ ಬಿರುದು ನೀಡಿ ಗೌರವಿಸಿರುವುದು ಶ್ಲಾಘನೀಯ ಸಂಗತಿ. ತಮ್ಮ ನಿವೃತ್ತಿಯ ನಂತರ ಸದ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರೆ ಹೆಗ್ಗಡೆಯವರ ಮಾರ್ಗದರ್ಶನಡಿಯಲ್ಲಿ ಧರ್ಮಸ್ಥಳದ ಅಮೂಲ್ಯ ಪ್ರಾಚೀನ ದಾಖಲೆಗಳ ಅಧ್ಯಯನ ನಡೆಸುತ್ತಿದ್ದಾರೆ. ತಮ್ಮ ಜ್ಞಾನವನ್ನು ಇಂದಿನ ಮುಂದಿನ ಜನಾಂಗಕ್ಕೂ ಲಭಿಸಲಿ ಎಂಬ ಸದುದ್ದೇಶದಿಂದ ತಮ್ಮೆಲ್ಲಾ ಸಂಶೋಧನಾ ಲೇಖನಗಳನ್ನು, ಪ್ರಕಟಣೆಗೊಂಡ ಪುಸ್ತಕಗಳ ಮುಖಪುಟದೊಂದಿಗೆ ಆ ಪುಸ್ತಕದ ಸಾರಾಂಶಗಳು, ಅವರು ಉತ್ಖನನ ನಡೆಸಿದ ಶಾಸನಗಳ ಚಿತ್ರಗಳು, ಹಾಗೂ ಅವರ ಸಂಪೂರ್ಣ ಮಾಹಿತಿಗಳಿಗೆ ಡಿಜಿಟಲ್ ಸ್ವರೂಪ ನೀಡಿ, ಜುಲೈ 24ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರಿಂದ ಲೋಕಾರ್ಪಣೆಗೊಳ್ಳಲು ಸಿದ್ದಗೊಳಿಸಿದ್ದಾರೆ.
ಇತಿಹಾಸವನ್ನು ಓದಿ ತಿಳಿದುಕೊಂಡರೆ ಸಾಲದು. ಅದಕ್ಕೆ ಕ್ಷೇತ್ರಕಾರ್ಯ ಬಹಳ ಮುಖ್ಯ ಆಗ ಇದು ಬಹಳ ಆಸಕ್ತಿದಾಯಕ ವಿಚಾರವಾಗುತ್ತದೆ.

ನಮ್ಮಲ್ಲಿರುವ ಸಾಕಷ್ಟು ಐತಿಹಾಸಿಕ ಪುರಾವೆಗಳನ್ನು, ಹಿನ್ನಲೆಯನ್ನು ನಾವು ಅರಿತು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ನೀಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಇದರ ಮಾಹಿತಿಯೇ ಇಲ್ಲದಂತಾಗುತ್ತದೆ.- ಡಾ.ವೈ ಉಮಾನಾಥ್ ಶೆಣೈ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು