Categories: ಲೇಖನ

ಮತ-ಮತದಾರ-ಮತದಾನದ ಹಕ್ಕು ಮತ್ತು ಮತದ ಮೌಲ್ಯ

ಸಂವಿಧಾನ ರಚನಾ ಮಂಡಳಿಯ ಸಭೆಯಲ್ಲಿ ತಮ್ಮ ಅಂತಿಮ ಭಾಷಣ ಮಾಡುವ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರಾಜಕಾರಣದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕು ಹೊಂದಿರುತ್ತಾನೆ, ರಾಜಕೀಯ ಪಕ್ಷವನ್ನು ಕಟ್ಟುವ, ಪಕ್ಷಕ್ಕೆ ಸೇರುವ ಸ್ವಾತಂತ್ರ ಹೊಂದಿರುತ್ತಾನೆ. ರಾಜಕಾರಣದಲ್ಲಿ ನಾವು ಒಬ್ಬ ವ್ಯಕ್ತಿಗೆ ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ಅನುಸರಿಸುತ್ತೇವೆ. ಆದರೆ ನಮ್ಮ ಸಾಮಾಜಿಕ- ಆರ್ಥಿಕ ಸಂರಚನೆಯ ಕಾರಣ ಒಬ್ಬ ವ್ಯಕ್ತಿಗೆ ಒಂದು ಮೌಲ್ಯವನ್ನು ಕಲ್ಪಿಸಲು ನಿರಾಕರಿಸುತ್ತೇವೆ ಎಂದು ಹೇಳಿರುವುದನ್ನು ಭಾರತದ ರಾಜಕೀಯ ಪಕ್ಷಗಳು, ನಾಯಕರು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು ಮತ್ತು ವಿವಿಧ ಸಿದ್ಧಾಂತಗಳ ಅನುಯಾಯಿಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ನೆನಪಿಸಿಕೊಳ್ಳುವುದು ವಾಡಿಕೆ ಯಾಗಿದೆ. ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಸಾರ್ವಭೌಮ ಪ್ರಜೆಗಳು ಆಳುವ ಸರ್ಕಾರಗಳನ್ನು ಆಯ್ಕೆ ಮಾಡಲು ಚಲಾಯಿಸುವ ಅಮೂಲ್ಯ ಮತದ ಮೌಲ್ಯ, ಪ್ರಾಮುಖ್ಯತೆ ಮತ್ತು ಪಾವಿತ್ರ್ಯತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ.

ಮತದಾರ ಜಾಗೃತಿ ಅಭಿಯಾನಗಳು ವಿಭಿನ್ನ ಸ್ತರಗಳಲ್ಲಿ ನಡೆಯುತ್ತವೆ. ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ವಿಶಿಷ್ಟ-ವಿನೂತನ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಸಾಮಾನ್ಯವಾಗಿ ಗಮನಿಸ ಬಹುದು. ಪ್ರಜಾಪ್ರಭುತ್ವದ ಅಳಿವು-ಉಳಿವು ಮತದಾರರ ಜಾಗೃತ ಪ್ರಜ್ಞೆಯನ್ನೇ ಅವಲಂಬಿಸಿರುತ್ತದೆ ಎನ್ನುವುದನ್ನು ಇತಿಹಾಸ ಹಲವು ಸಂದರ್ಭಗಳಲ್ಲಿ ನಿರೂಪಿಸಿದೆ.

ಆಡಳಿತ ವ್ಯವಸ್ಥೆಯಲ್ಲಿ ಸದ್ದಿಲ್ಲದೆ ನುಸುಳುವ ಸರ್ವಾಧಿಕಾರಿ ಧೋರಣೆ ಮತ್ತು ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ವ್ಯಾಪಿಸುವ ನಿರಂಕುಶಾಧಿಕಾರದ ಕುಡಿಗಳು ಇಡೀ ವ್ಯವಸ್ಥೆಯನ್ನೇ ಕ್ಯಾನ್ಸರ್ ಪೀಡಿತ ಜೀವಕೋಶದಂತೆ ಶಿಥಿಲವಾಗಿಸುತ್ತಲೇ ಇರುತ್ತವೆ. ಮೂಲತಃ ಸಾಮಾನ್ಯ ಜನತೆಯಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ನಡುವೆ ಇರುವ ಸೂಕ್ಷ್ಮ ಸಂಬಂಧದ ಬಗ್ಗೆ ಅರಿವು ಮೂಡಿಸುವುದು ನಮ್ಮ ಇಂದಿನ ಆದ್ಯತೆಯಾಗಬೇಕಿದೆ.

18 ವರ್ಷಗಳನ್ನು ಪೂರೈಸುತ್ತಲೇ ಮತದಾರ ಎನಿಸಿಕೊಳ್ಳುವ ಪ್ರತಿಯೊಬ್ಬ ಪ್ರಜೆಗೂ ಪ್ರಥಮ ಮತದಾನ ಮಾಡುವ ಕ್ಷಣದಲ್ಲಿ ತನ್ನ ಸುತ್ತಲಿನ ಸಮಾಜವನ್ನು ಕಣ್ಣೆತ್ತಿ ನೋಡುವ ವ್ಯವಧಾನ ಇರಬೇಕಾಗುತ್ತದೆ. ಮೊದಲ ಸಲ ಮತ ಚಲಾಯಿಸುವ ಮತದಾರ ಟಿವಿ ತಾನು ನಿಂತ ನೆಲ, ತಾನು ರೂಪಿಸಿಕೊಂಡ ಬದುಕು ಮತ್ತು ತನ್ನ ಸುತ್ತ ಢಾಳಾಗಿ ಕಾಣುವ ಸಾಮಾನ್ಯ ಜನತೆಯ ವಾಸ್ತವ ಬದುಕು ಇವುಗಳನ್ನು ಗಮನಿಸದೆ ಹೋದರೆ, ಆ ವ್ಯಕ್ತಿಗೆ ಮತ ಮತ್ತು ಮತದಾನದ ಮೌಲ್ಯ ಅರ್ಥವಾಗಿಲ್ಲ ಎಂದೇ ಅರ್ಥ. ಸಂವಿಧಾನ ನೀಡಿರುವ ಎಲ್ಲ ಪ್ರಜಾಸತ್ತಾತ್ಮಕ ಹಕ್ಕುಗಳನ್ನೂ, ಸೌಲಭ್ಯಗಳನ್ನೂ ಬಳಸಿಕೊಂಡೇ ತಮ್ಮದೇ ಆದ ಹಿತಕರ ಗೂಡು ಕಟ್ಟಿಕೊಂಡಿರುವ ಸುಶಿಕ್ಷಿತರೂ ಸಹ ತಮ್ಮ ಪೂರ್ವ ಸೂರಿಗಳ ಸಾಮಾಜಿಕ ಕಾಳಜಿ-ಕಳಕಳಿ ಮತ್ತು ಆಶಯಗಳನ್ನು ಮರೆತು, ಸರ್ವಾಧಿಕಾರ ಮತ್ತು ನಿರಂಕುಶಾಧಿಕಾರದ ಆಲೋಚನಾ ವಿಧಾನಗಳಿಗೆ ಬಲಿಯಾಗುತ್ತಿರುವುದನ್ನು ವರ್ತ ಮಾನದ ಸಂದರ್ಭದಲ್ಲಿ ವಿಷಾದದಿಂದಲೇ ಗಮನಿಸಬೇಕಿದೆ ಹಿರಿಯ ಪೀಳಿಗೆಯು ಜಾತಿ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳಿಗೆ ಬಲಿಯಾಗಿ ತಮ್ಮ ಮತದ ಮೌಲ್ಯವನ್ನು ಮರೆಯುತ್ತಿದ್ದರೆ ಮತ್ತೊಂದೆಡೆ ಯುವ ಸಮೂಹ ಭ್ರಮಾಧೀನತೆಗೆ ಬಲಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಮತದ ಮೌಲ್ಯ ಮತ್ತು ಅಪಮೌಲ್ಯ : ಮತದ ಮೌಲ್ಯ ಎಂದರೇನು, ಈ ಪ್ರಶ್ನೆ ಇಂದು ಪ್ರತಿಯೊಬ್ಬ ಶ್ರೀ ಸಾಮಾನ್ಯನನ್ನೂ ಕಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಅಂತಿಮ ಎಂದಾದಲ್ಲಿ ಈ ಜನಾಭಿ ಪ್ರಾಯಕ್ಕೆ ತನ್ನದೇ ಆದ ಸ್ವಾಯತ್ತತೆಯೂ ಇರಬೇಕಲ್ಲವೇ?.

ಈ ಸ್ವಾಯತ್ತತೆ ಮೂಡುವುದಾದರೂ ಹೇಗೆ? ಜನತೆಯಲ್ಲಿ ಸಂತ ಆಲೋಚನೆ, ಚಿಂತನೆ ಮತ್ತು ಅಭಿವ್ಯಕ್ತಿಯ ನೆಲೆಗಳು ಸ್ಪಷ್ಟವಾದಾಗ ಮಾತ್ರ ಇದು ಸಾಧ್ಯ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜಾತಿ, ಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನೇ ಮಾರುಕಟ್ಟೆಯ ತಂತ್ರಗಳಂತೆ ಬಳಸಿಕೊಂಡು ಈ ಸ್ವಾಯತ್ತತೆಯ ನೆಲೆಗಳನ್ನು ಭ್ರಷ್ಟಗೊಳಿಸುತ್ತಿರುತ್ತವೆ. ಈ ತಂತ್ರಗಾರಿಕೆಯನ್ನೇ ಪ್ರಜೆಗಳು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಎಸೆಯಲಾಗುವ ತುಣುಕುಗಳ, ಪೊಳ್ಳು ಆಶ್ವಾಸನೆಗಳ, ಮಾಯಾ ನಗರಿಗಳ ಮತ್ತು ಭವಿಷ್ಯದ ಭ್ರಮೆಗಳ ನಡುವೆ ಕಾಣುತ್ತಿರುತ್ತಾರೆ. 75 ವರ್ಷಗಳಿಂದಲೂ ಇದೇ ಪರಂಪರೆಯನ್ನು ಮತದಾರರಾದ ನಾವು ಪೋಷಿಸುತ್ತಲೂ ಬಂದಿದ್ದೇವೆ ಅಲ್ಲವೇ ?

ಈ ಸನ್ನಿವೇಶದಲ್ಲಿ ನಮಗೆ ಮತದ ಮೌಲ್ಯ ಮುಖ್ಯವಾಗುತ್ತದೆ. ನಾವು ಚಲಾಯಿಸುವ ಮತ ಯಾರನ್ನು ಆಯ್ಕೆ ಮಾಡಲು ನೆರವಾ ಗುತ್ತದೆ ಎನ್ನುವುದಕ್ಕಿಂತಲೂ, ಆಯ್ಕೆಯಾಗುವ ವ್ಯಕ್ತಿ ಅಥವಾ ಪಕ್ಷ ನಮ್ಮ ಹಾಗೂ ಸುತ್ತಲಿನ ಸಮಾಜದ ದೈನಂದಿನ ಬದುಕಿಗೆ ಯಾವ ರೀತಿಯಲ್ಲಿ ಸ್ಪಂದಿಸಬಹುದು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

ಸರ್ವರಿಗೂ ಶಿಕ್ಷಣ ಎಂಬ ಉದಾತ್ತ ಘೋಷಣೆಯೊಂದಿಗೆ ವಾಜಪೇಯಿ ಸರ್ಕಾರ ಜಾರಿಗೊಳಿಸಿದ ಸರ್ವಶಿಕ್ಷಣ ಅಭಿಯಾನ ಎಷ್ಟರ ಮಟ್ಟಿಗೆ ಸಮಸ್ತ ಪ್ರಜೆಗಳಿಗೂ ಪ್ರಾಥಮಿಕ ಶಿಕ್ಷಣವನ್ನು ಒದಗಿಸಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ, ನಮಗೆ ಮತದ ಮೌಲ್ಯ ಅರಿವಾಗಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ. ಹಸಿವು, ಬಡತನ, ಅನಕ್ಷರತೆ, ಅನೈರ್ಮಲ್ಯ, ಅನಾರೋಗ್ಯ ಮತ್ತು ನಿರುದ್ಯೋಗ ಈ ಸಮಸ್ಯೆಗಳು ನಮ್ಮ ಸುತ್ತಲಿನ ಬೀದಿಗಳಲ್ಲೇ ತಾಂಡವಾಡುತ್ತಿರುವುದಕ್ಕೆ ಕಾರಣಗಳಾದರೂ ಏನು ಎಂಬ ಯೋಚಿಸುವ ವ್ಯವಧಾನವನ್ನು ಬೆಳೆಸಿಕೊಂಡರೆ ಮಾತ್ರವೇ ತಾನು ಚಲಾಯಿ ಸುವ ಪ್ರತಿಯೊಂದು ಮತದ ಮೌಲ್ಯವೂ ಮತದಾರನಿಗೆ ಅರ್ಥವಾಗುತ್ತದೆ.

ಇದನ್ನು ಅರ್ಥಮಾಡಿಸುವ ಜವಾಬ್ದಾರಿ ಯಾರದು: ಮತದಾರ ಜಾಗೃತಿ ಎನ್ನುವ ಪರಿಕಲ್ಪನೆಯಲ್ಲಿ ಮೊಳೆಯುವ ಚಿಂತನೆಗಳಿಗೆ ಈ ಪ್ರಶ್ನೆಯೇ ಬುನಾದಿಯಾಗಬೇಕು. ಮತ-ಮತದಾರ ಮತ್ತು ಮತದಾನ ಈ ಮೂರೂ ವಿದ್ಯಮಾನಗಳ ಮೌಲ್ಯ ಅರ್ಥವಾಗಬೇಕಾದರೆ ಮೊದಲು ನಮಗೆ ಸಂವಿಧಾನದ ಆಶಯಗಳ ಅರಿವು ಅಗತ್ಯವಾಗಿ ಇರಬೇಕು. ಸಂವಿಧಾನವನ್ನು ಅರಿಯುವುದಕ್ಕೂ, ಸಾಂವಿಧಾನಿಕ ಆಶಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನೂ ನಾವು ಅರಿತಿರಬೇಕು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ನಾವೇ ನೋಡುತ್ತಿರುವಂತೆ, ಸಂವಿಧಾನದ ಚೌಕಟ್ಟಿನ ಒಳಗೇ ಈ ಆಶಯಗಳನ್ನು ಉಲ್ಲಂಘಿ ಸುವ ಕಾಯ್ದೆ ಕಾನೂನುಗಳು ಜಾರಿಯಾಗುತ್ತಿವೆ.

ಹಾಗಾಗಿ ಮತದ ಮೌಲ್ಯವನ್ನು ಅಳೆಯಲು ಮಾಪನವಾಗಿ ಬಳಕೆಯಾಗಬೇಕಿರುವುದು ಸಂವಿಧಾನದ ಆಶಯಗಳು. ಇದನ್ನು ಉಲ್ಲಂಘಿಸಲು ನೆರವಾಗುವ ಪ್ರತಿಯೊಂದು ಮತವೂ ತನ್ನ ವಾಸ್ತವಿಕ ಮೌಲ್ಯವನ್ನು ಕಳೆದುಕೊಳ್ಳುತ್ತದೆ.

ಹಾಗಾಗಿ ಮತದ ಮೌಲ್ಯ ಎಂದಾಗ ನಮಗೆ ಅಪಮ ಲೀಕರಣಕ್ಕೊಳಗಾಗುತ್ತಿರುವ ಶ್ರೀಸಾಮಾನ್ಯರ, ಸುಶಿಕ್ಷಿತರ ಮತಗಳು ಕಂಡುಬರುತ್ತವೆ. ತಮ್ಮ ಬದುಕು ರೂಪಿಸಿಕೊಳ್ಳಲು ಹಕ್ಕೊತ್ತಾಯಗಳಿಗಾಗಿ ಆಶ್ರಯಿಸುವ ಸೈದ್ದಾಂತಿಕ ನೆಲೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಧಿಕ್ಕರಿಸಿ, ಅದೇ ಹಕ್ಕುಗಳನ್ನು ಕಸಿದುಕೊಳ್ಳುವ ಪಕ್ಷಗಳಿಗೆ ಮತ ನೀಡುವ ಈ ಪ್ರಜ್ಞಾವಂತ ಮತದಾರರಲ್ಲಿ ಜಾಗೃತಿ ಮೂಡಿಸುವುದು ಆದ್ಯತೆಯೂ ಆಗಬೇಕಿದೆ. ಸಂವಿಧಾನದ ಆಶಯದಂತೆ ಸ್ವಾತಂತ್ರ ಸಮಾನತೆ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ 75 ವರ್ಷಗಳ ಕಾಲ ಕೋಟ್ಯಂತರ ಜನರ ಪರಿಶ್ರಮದೊಂದಿಗೆ ನಿರ್ಮಿತವಾಗಿರುವ ಪ್ರಜಾಸತ್ತಾತ್ಮಕ ಭಾರತವನ್ನು ರಕ್ಷಿಸುವುದೆಂದರೆ ಸಾಂವಿಧಾನಿಕ ಆಶಯಗಳಾದ ಭ್ರಾತೃತ್ವ, ಸೌಹಾರ್ದತೆ ಮತ್ತು ಬಹುತ್ವವನ್ನು ಕಾಪಾಡುವುದೇ ಆಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವುದೆಂದರೆ ಈ ಆಶಯಗಳನ್ನು ಸಾಕಾರಗೊಳಿಸುವ ವೇದಿಕೆ ನಿರ್ಮಿಸುವುದೇ ಆಗಿರುತ್ತದೆ. ಜನರು ಚಲಾಯಿಸುವ ಮತದ ಸ್ವಾಯತ್ತತೆ, ಮತದಾರನ ಸ್ವಂತಿಕೆ ಮತ್ತು ಮತದಾನದ ಪಾವಿತ್ರತೆ ಈ ಮೂರೂ ವಿದ್ಯಮಾನಗಳನ್ನು ಆರಂಭದಲ್ಲಿ ಉಲ್ಲೇಖಿಸಿರುವ ಅಂಬೇಡ್ಕರ್ ಅವರ ಮಾತುಗಳ ಚೌಕಟ್ಟಿನೊಳಗಿಟ್ಟು ನೋಡಿ ದಾಗ ನಮಗೆ ಪ್ರತಿಯೊಂದು ಮತದ ಮೌಲ್ಯವನ್ನು ಅಳೆಯುವ ಮಾನದಂಡಗಳೂ ಸ್ಪಷ್ಟವಾಗುತ್ತವೆ. ಮತದಾರ ಜಾಗೃತಿಯ ಕಾರ್ಯಸೂಚಿಯಾಗಿ ನಾವು ಈ ಮಾನದಂಡಗಳನ್ನೇ ಅನುಸರಿಸಬೇಕಿದೆ. ಆಗಲೇ ಪ್ರಜಾಪ್ರಭುತ್ವದ ನೆಲೆಗಳನ್ನು ಸಂರಕ್ಷಿಸಲು ಸಾಧ್ಯ.

Sneha Gowda

Recent Posts

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

29 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

1 hour ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

1 hour ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

2 hours ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

2 hours ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago