News Karnataka Kannada
Sunday, April 14 2024
Cricket
ಲೇಖನ

ಮೈಸೂರು ಹೊರವಲಯದ ಹೆದ್ದಾರಿಯಲ್ಲಿ ಮಾವಿನಹಣ್ಣು ಭರ್ಜರಿ ಮಾರಾಟ

Mango
Photo Credit :

ಮೈಸೂರು ನಗರದ ಹೊರವಲಯದ ಇಲವಾಲದ ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣಿನ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಹಾಗೆಂದು ಇಲ್ಲಿ ನಡೆಯುವುದು ಮಾವಿನ ಸಂತೆಯಲ್ಲ.. ಮಾವಿನ ಮೇಳವೂ ಅಲ್ಲ ಮತ್ತೇನು?

ಸಾಮಾನ್ಯವಾಗಿ ಮೈಸೂರಿನಿಂದ ಹುಣಸೂರು ಕಡೆಗೆ ಪ್ರಯಾಣ ಬೆಳೆಸಿದರೆ ಕಿ.ಮೀ.ಗಟ್ಟಲೆ ಗಾಡಿಗಳಲ್ಲಿ ಗೋಪುರಾಕೃತಿಯಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ನೋಡಲು ಸಿಗುತ್ತವೆ. ಇದನ್ನು ನೋಡಿದವರು ಅಚ್ಚರಿಯೂ ಪಡುತ್ತಾರೆ. ಹಾಗೆಂದು ಇಲ್ಲಿ ಯಾವುದೇ ಸಂತೆ, ಮೇಳ ನಡೆಯುವುದಿಲ್ಲ. ಬದಲಾಗಿ ಸ್ಥಳೀಯರು ಮಾವಿನ ಹಣ್ಣು ಮಾರಾಟಕ್ಕಾಗಿ ಕಂಡುಕೊಂಡ ಮಾರ್ಗವಷ್ಟೆ.

ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88 ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಕಡ್ನಳ್ಳಿಯಲ್ಲಿ ಮಾವಿನ ಮಾರಾಟ ನಡೆಯುತ್ತದೆ. ದಾರಿಯುದ್ದಕ್ಕೂ ಬೆಳೆದು ನಿಂತ ಮರಗಿಡಗಳ ನೆರಳಿನಲ್ಲಿ ಮಾವಿನ ಹಣ್ಣುಗಳನ್ನಿಟ್ಟು ಮಾರಾಟ ಮಾಡಲಾಗುತ್ತದೆ. ಹೆದ್ದಾರಿಯಲ್ಲಿ ಸಾಗುವವರು ತಮ್ಮ ವಾಹನಗಳನ್ನು ನಿಲ್ಲಿಸಿ ತಮಗೆ ಬೇಕಾದ ಹಣ್ಣುಗಳನ್ನು ಕೊಂಡೊಯ್ಯುತ್ತಾರೆ.

ಹಾಗೆನೋಡಿದರೆ ಚಿಕ್ಕಕಡ್ನಳ್ಳಿಯಲ್ಲಿ ನಡೆಯುತ್ತಿಯವ ಮಾವಿನಹಣ್ಣಿನ ಮಾರಾಟ ಇಂದು ನಿನ್ನೆಯದಲ್ಲ. ಹಲವು ದಶಕಗಳ ಇತಿಹಾಸವಿದೆ. ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ. ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೆನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹೀಗೆ ಹಲವು ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು. ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿಕಂಡು ಕೊಂಡರು.

ದಿನಕಳೆದಂತೆ ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡಲು ಶುರುಮಾಡಿದರು. ಈಗಂತೂ ಮೈಸೂರಿನ ಮಾರುಕಟ್ಟೆಯಿಂದ ತಂದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಮಂದಿ ಪಕ್ಕದಲ್ಲಿರುವ ಮಾವಿನ ತೋಪುಗಳನ್ನು ನೋಡಿ ಅಲ್ಲಿಂದಲೇ ತಂದು ಮಾರಾಟ ಮಾಡಲಾಗುತ್ತಿದೆ ಎಂದುಕೊಂಡರೆ ತಪ್ಪಾಗುತ್ತದೆ.

ಏಕೆಂದರೆ ಈ ಹಳ್ಳಿಯ ವ್ಯಾಪ್ತಿಯಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದರೂ ಅವರು. ಇಲ್ಲಿ ಮಾರಾಟ ಮಾಡುವುದಿಲ್ಲ. ಹೆಚ್ಚಿನ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಚಿಕ್ಕಕಡ್ನಳ್ಳಿಯಲ್ಲಿ ದೊರೆಯುವ ಮಾವಿನಹಣ್ಣನ್ನು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಮಾರ್ಚ್ ನಿಂದ ಆರಂಭವಾಗುವ ಮಾವಿನಹಣ್ಣಿನ ಮಾರಾಟ ಆಗಸ್ಟ್‌ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಬೇರೆ ಹಾದಿ ಹಿಡಿಯುತ್ತಾರೆ.

ಈ ಮಾವಿನಹಣ್ಣಿನ ಮಾರಾಟದ ದೃಶ್ಯವನ್ನು ಹತ್ತಿರದಿಂದ ನೋಡಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣವನ್ನು ಕೂಡ ಮಾಡಿದ್ದಾರೆ. ಹಳ್ಳಿಯಿಂದ ಮಾವಿನಹಣ್ಣನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ ಪಟ್ಟಣದಿಂದ ಖರೀದಿಸಿ ಅದನ್ನು ಹಳ್ಳಿಯಲ್ಲಿ ಮಾರಾಟ ಮಾಡಿ ಜೀವನ ನಡೆಸಬಹುದು ಎಂಬುದನ್ನು  ಚಿಕ್ಕಕಡ್ನಳ್ಳಿಯ ಜನ ತೋರಿಸಿಕೊಟ್ಟಿದ್ದಾರೆ.

ಇತ್ತೀಚೆಗೆ ಪ್ರವಾಸೋದ್ಯಮ ಅಭಿವೃದ್ಧಿಯಾದ ಹಿನ್ನಲೆಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸಿಗರನ್ನು ನಂಬಿಕೊಂಡೇ ದಾರಿಯುದ್ದಕ್ಕೂ ಹಣ್ಣು ಇತರೆ ಪದಾರ್ಥಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುವವರು ಕಂಡು ಬರುತ್ತಿದ್ದಾರೆ. ಅದು ಏನೇ ಇರಲಿ ಚಿಕ್ಕಕಡ್ನಳ್ಳಿಯಲ್ಲಿ ಒಂದೇ ಕಡೆ ತಮಗೆ ಬೇಕಾದ ಮಾವಿನ ಹಣ್ಣನ್ನು ಖರೀದಿಸಲು ಅವಕಾಶ ವಿರುವುದರಿಂದಾಗಿ ಮಾರಾಟ ಭರ್ಜರಿಯಾಗಿ ನಡೆಯುವುದು ಕಂಡು ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು