News Karnataka Kannada
Tuesday, April 23 2024
Cricket
ಅಂಕಣ

ಸಮಾಜದ ಉನ್ನತಿಗೆ, ಸಮಾಜ ಕಾರ್ಯ ಪದವಿ…

Photo Credit :

ಸಮಾಜದ ಉನ್ನತಿಗೆ, ಸಮಾಜ ಕಾರ್ಯ ಪದವಿ…

ಮಾನವ ಸಂಘಜೀವಿ. ತಾನು ಮತ್ತು ತನ್ನ ಸಂಸಾರ ಎಂದುಕೊಂಡು ಒಂದು ಸಮಾಜವನ್ನೇ ಕಟ್ಟಿಬಿಡುತ್ತಾನೆ. ತನ್ನ ಬದುಕಿನಲ್ಲಿ ಹೇಗೆ ಏಳು ಬೀಳುಗಳಿವೆಯೋ ಹಾಗೆಯೇ ಸಮಾಜದ ಉನ್ನತಿಯಲ್ಲೂ ಏರುಪೇರಾಗುತ್ತವೆ. ಒಂದು ಸಮಾಜ ಎಂದಾಗ ಕೆಳವರ್ಗ, ಮಧ್ಯಮ ಮತ್ತು ಶ್ರೀಮಂತ ವರ್ಗವೂ ಬೇಕು. ಎಲ್ಲಾ ಜನರ ಬದುಕನ್ನು ಸರಿಪ್ರಮಾಣದಲ್ಲಿ ಸರಿದೂಗಿಸಲು ಕಷ್ಟ ಸಾಧ್ಯ. ಈ ಸಮಾಜದ ಕಲ್ಯಾಣಕ್ಕಾಗಿ ಮತ್ತು ಮಾನವ ಅಭಿವ್ರದ್ಧಿಗಾಗಿ ಅನೇಕ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ದುಡಿಯುತ್ತವೆ. ಅಂತಹ ಸಂಸ್ಥೆಗಳನ್ನು ಹುಟ್ಟುಹಾಕುವಲ್ಲಿ, ಅದರಲ್ಲೇ ಕೆಲಸ ಮಾಡುವಲ್ಲಿ ಮತ್ತು ಸಾಮಾಜಿಕ ಕಳಕಳಿ ಹೊಂದುವಲ್ಲಿ ಸಹಾಯಹಸ್ತ ನೀಡುವ ಪದವಿಯೇ, ‘ಸಮಾಜ ಕಾರ್ಯ ಪದವಿ’. ಹಾಗಂತ ಸಮಾಜಸೇವೆ ಮಾಡೋಕೆ ಈ ಡಿಗ್ರಿಯಲ್ಲ ಅಥವಾ ಸಮಾಜ ಕಾರ್ಯ ಪದವಿ ಪಡೆದವರೆಲ್ಲಾ ಸಮಾಜಕ್ಕೆ ಕೊಡುಗೆ ಕೊಡಬೇಕೆಂದಿಲ್ಲ.

ಯಾಕೆ ಈ ಡಿಗ್ರಿ..?

ಸಾಮಾನ್ಯವಾಗಿ ಡಿಗ್ರಿ ಆಯ್ಕೆ ಮಾಡುವಾಗ ಮುಂದೇನು ಎಂದು ಆಲೋಚನೆ ಮಾಡುವುದು ಸಹಜ. ಸಾಮಾಜಿಕ ಕಾರ್ಯಕರ್ತನಾಗುವ ಹೆಬ್ಬಯಕೆವುಳ್ಳ ಪ್ರತಿಭಾನ್ವಿತರಿಗೆ ಈ ಡಿಗ್ರಿ ಒಳ್ಳೆಯದು. ಆರೋಗ್ಯ ಕಾರ್ಯಕರ್ತರಾಗಿ, ಕ್ಲಿನಿಕಲ್ ಸಾಮಾಜಿಕ ಕಾರ್ಯಕರ್ತ, ವೈದ್ಯಕೀಯ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸಾಮಾಜಿಕ ಕಾರ್ಯಕರ್ತರಾಗಿಯೂ ಕಾರ್ಯ ನಿರ್ವಹಿಸಬಹುದು. ಶಿಕ್ಷಣ ಕ್ಷೇತ್ರದಲ್ಲೂ ಈ ಪದವಿಗೆ ಬೇಡಿಕೆಯಿದ್ದು ಅನೇಕ ಹುದ್ದೆಗಳಲ್ಲಿ ಕೆಲಸ ಗಿಟ್ಟಿಸಬಹುದು. ಪಿಯುಸಿ ಬಳಿಕ ಬಿ.ಎಸ್.ಡಬ್ಲ್ಯೂ. ಮಾಡಿ ಬಳಿಕ ಎಂ.ಎಸ್.ಡಬ್ಲ್ಯೂ. ಪದವಿ ಪಡೆದರೆ ಅತೀ ಉತ್ತಮ. ಸಮಾಲೋಚನಕಾರರಾಗಿ ಸಮಾಜಸೇವೆ ಮಾಡುವವರು ಈ ಡಿಗ್ರಿ ಆಯ್ಕೆ ಮಾಡಿಕೊಳ್ಳುವವರೂ ಇದ್ದಾರೆ. ಸಮಾಜ ಕಾರ್ಯ, ಸಮಾಜಶಾಸ್ತ್ರ ಮತ್ತು ಮನಃಶಾಸ್ತ್ರ ಅಧ್ಯಯನ ಮಾಡುವ ಇವರಿಗೆ ಈ ಮೂರೂ ವಿಭಾಗಗಳಲ್ಲೂ ಸದಾ ಅವಕಾಶಗಳಿರುತ್ತವೆ.

ಯಾವ ಕೌಶಲಗಳಿರಬೇಕು..?

ಸಮಾಜ ಕಾರ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಯು, ಮೊತ್ತ ಮೊದಲು ಒಳ್ಳೆಯ ಸಂವಹನಶೀಲ ವ್ಯಕ್ತಿತ್ವ ಹೊಂದಿರಬೇಕು. ವಾಕ್ ಸಾಮರ್ಥ್ಯ, ಅನುಭೂತಿ, ಭಾವನಾತ್ಮಕ ಬುದ್ದಿವಂತಿಕೆ, ಸಹನೆ, ವಿಮರ್ಶಾತ್ಮಕ ಚಿಂತನೆ, ತನ್ನದೇ ಗುರಿಯನ್ನು ಹೊಂದಿರುವ ಮನೋಭಾವ, ನಾಯಕತ್ವ ಗುಣ, ಸ್ವನಿಯಂತ್ರಣ, ಭಾವೈಕ್ಯತೆ ಹೀಗೆ ಹತ್ತು ಹಲವು ಉತ್ತಮ ಗುಣಗಳನ್ನು ವಿದ್ಯಾರ್ಥಿಯು ಹೊಂದಿಕೊಂಡಿರಬೇಕು. ಈ ಡಿಗ್ರಿಯ ವಿಶೇಷತೆಯೆಂದರೆ, ಹ್ಯೂಮಾನಿಟಿಸ್, ಕಾಮರ್ಸ್ ಮತ್ತು ಸೈನ್ಸ್ ತಗೊಂಡವರು ಕೂಡ ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಬಹುದು. ಇನ್ನೂ ಕೆಲವರು ದೂರ ಶಿಕ್ಷಣದಡಿಯಲ್ಲಿ ಈ ಡಿಗ್ರಿಯನ್ನು ಪಡೆದಿರುತ್ತಾರೆ. ಹಲವಾರು ಕ್ಷೇತ್ರಗಳಲ್ಲಿ ದೂರ ಶಿಕ್ಷಣದಡಿ ವಿದ್ಯಾಭ್ಯಾಸ ಮಾಡಿದರೂ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

 

ಯಾವ ವಿಷಯಗಳ ಕಲಿಕೆ..?

ಸಾಮಾನ್ಯವಾಗಿ ಸಮಾಜ ಕಾರ್ಯ ಪದವಿಯೆಂದರೆ ಬರೇ ಕಲಾವಿಭಾಗದ ವಿದ್ಯಾರ್ಥಿಗಳು ಕಲಿಯುವ ವಿಷಯವೆಂಬ ತಪ್ಪು ಕಲ್ಪನೆಯಿದೆ. ಯಾವುದೇ ಡಿಗ್ರಿಯ ಬಳಿಕ ಈ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಿದಲ್ಲಿ ಸಾಮಾಜಿಕ ಗುಂಪು ಕಾರ್ಯ, ಸಾಮಾಜಿಕ ಪ್ರಕರಣ ಕಾರ್ಯ, ವ್ರತ್ತಿಪರತೆ, ಸಮುದಾಯ ಸಂಘಟನೆ, ಸಮಾಜ ಕಾರ್ಯದಲ್ಲಿ ಫೀಲ್ಡ್ ವರ್ಕ್ ಮತ್ತು ಕ್ಯಾಂಪ್, ಭಾರತದ ಸಮಾಜದ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ, ಸಾಮಾಜಿಕ ನೀತಿ, ಯೋಜನೆ ಮತ್ತು ಅಭಿವ್ರದ್ದಿಯ ಕುರಿತು ಆಳವಾದ ಅಧ್ಯಯನ, ಗ್ರಾಮೀಣ, ನಗರ ಮತ್ತು ಬುಡಕಟ್ಟು ಜನಾಂಗದ ಸಾಮಾಜಿಕ ಕಾರ್ಯ, ಸಾಮಾಜಿಕ ನ್ಯಾಯ ಹೀಗೆ ಹಲವು ರೀತಿಯಲ್ಲಿ ಅಧ್ಯಯನ ಮಾಡಬಹುದು. ಈ ಡಿಗ್ರಿ ಇನ್ನು ಬೇರೆ ಬೇರೆ ವಿಷಯಗಳಿಗೆ ಸಂಬಂಧವನ್ನೂ ಕಲ್ಪಿಸುತ್ತದೆ; ಮುಖ್ಯವಾಗಿ, ಸಂಖ್ಯಾಶಾಸ್ತ್ರ ಮತ್ತು ಸಂಶೋಧನೆ, ಅರ್ಥಶಾಸ್ತ್ರ, ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ, ಕಾರ್ಮಿಕ ಕಲ್ಯಾಣ ಮತ್ತು ನ್ಯಾಯ, ಅಪರಾಧಶಾಸ್ತ್ರ, ಮಾನವ ಸಂಪನ್ಮೂಲ ಅಭಿವ್ರದ್ದಿ, ದುರಂತ ಮತ್ತು ಆಪತ್ತಿನ ಅಭಿವ್ರದ್ದಿ, ಸಂವಹನ ಮತ್ತು ಸಮಾಲೋಚನೆ, ಮನಃಶಾಸ್ತ್ರ ವಿಷಯಗಳು ಪ್ರಮುಖವಾದುವುಗಳು.

ಉದ್ಯೋಗಾವಕಾಶಗಳು:

ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಎಂ.ಫಿಲ್, ಪಿ.ಹೆಚ್.ಡಿ ಕೂಡ ಮಾಡಬಹುದು. ಉಪನ್ಯಾಸಕರಾಗಿ ಅಥವಾ ಸಂಶೋಧನಾ ಕ್ಷೇತ್ರದಲ್ಲಿಯೇ ಮುಂದುವರಿದವರಿಗೆ ಅನೇಕ ಸರಕಾರಿ ಹುದ್ದೆಗಳಿಗೆ ಅವಕಾಶಗಳಿವೆ. ಉನ್ನತ ಶಿಕ್ಷಣದ ಹೊರತು ಇತರೆ ಉದ್ಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

* ಸಾಮಾಜಿಕ ಕಾರ್ಯಕರ್ತರಾಗಿ ವೈಯಕ್ತಿಕ ಮತ್ತು ವ್ರತ್ತಿಪರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೆಲಸ ಮಾಡಬಹುದು.

* ಸಮಾಲೋಚನಾಕಾರರಾಗಿ ಕೂಡ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಗಳ ಬದುಕನ್ನು ಮತ್ತೆ ಸರಿದೂಗಿಸುವಲ್ಲಿ ಕೌನ್ಸೆಲರ್ ಪಾತ್ರ ಬಹುಮುಖ್ಯವಾದದ್ದು. ಸರಕಾರಿ ನೌಕರಿಯೊಂದಿಗೆ ಕೆಲಸ ಮಾಡಬಹುದು.

* ಯೋಜನಾ ಸಂಯೋಜಕರಾಗಿ ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಕೆಲಸಗಿಟ್ಟಿಸಿಕೊಳ್ಳಬಹುದು. ಒಳ್ಳೆಯ ಸಂಭಾವನೆ ಕೂಡ ಅಪೇಕ್ಷೆ ಮಾಡಬಹುದು.

* ಮಾನವ ಸಂಪನ್ಮೂಲ ಅಭಿವ್ರದ್ದಿ ವಿಭಾಗದಲ್ಲಿ, ಮಾನವ ಸಂಪನ್ಮೂಲ ಅಧಿಕಾರಿಯಾಗಿ, ವ್ಯವಸ್ಥಾಪಕರಾಗಿ, ಸಿಬ್ಬಂಧಿ ಅಧಿಕಾರಿಯಾಗಿ, ಎಚ್.ಆರ್. ಎಕ್ಸಿಕ್ಯೂಟಿವ್ ಆಗಿ, ಸಲಹೆಗಾರರಾಗಿ, ತರಬೇತುದಾರರಾಗಿ ಹೀಗೆ ಹಲವು ಹುದ್ದೆಗಳಲ್ಲಿ ಅವಕಾಶಗಳಿವೆ.

* ಶಾಲಾ ಕಾಲೇಜುಗಳಲ್ಲಿ ಕ್ಷೇಮಪಾಲನಾ ಅಧಿಕಾರಿಗಳಾಗಿ ಕೆಲಸ ಮಾಡಬಹುದು.

* ಖಾಸಗಿ ಮತ್ತು ಸರಕಾರಿ ಕಂಪನಿಗಳಲ್ಲಿ ಎಂಪ್ಲಾಯಿ ರಿಲೇಶನ್ ಆಫೀಸರ್, ಪಬ್ಲಿಕ್ ರಿಲೇಶನ್ ಆಫೀಸರ್, ಆಗಿಯೂ ಉದ್ಯೋಗಗಳಿವೆ.

* ಆಪ್ತ ಸಮಾಲೋಚನಾಕಾರರಾಗಿ ಶಾಲಾ-ಕಾಲೇಜುಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ, ಆಸ್ಪತ್ರೆಗಳಲ್ಲಿ ಬಹಳ ಬೇಡಿಕೆಯ ಉದ್ಯೋಗಗಳಿವೆ. ಹಲವಾರು ಮಂದಿ ಸ್ವ-ಉದ್ಯೋಗವಾಗಿ ಕೂಡ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.

* ಗ್ರಾಮೀಣ/ಪಂಚಾಯತ್/ನಗರಾಭಿವ್ರದ್ದಿ ಅಧಿಕಾರಿಗಳಾಗಿ ಸರಕಾರಿ ಕೆಲಸ ಮಾಡಲು ಇಂತಹ ಪದವೀಧರರಿಗೆ ಅವಕಾಶಗಳಿವೆ.

* ಸಮುದಾಯ ಅಭಿವ್ರದ್ದಿ ಅಧಿಕಾರಿಗಳಾಗಿಯೂ ಕೆಲಸ ಮಾಡಬಹುದು.

* ಸರ್ಕಾರ ಮತ್ತು ಸರಕಾರೇತರ ವಿಭಾಗಗಳಲ್ಲಿ ಪ್ರಾಜೆಕ್ಟ್ ನಿರ್ದೇಶಕರಾಗಿ, ಎಕ್ಸ್ಟೆನ್ಶನ್ ಅಧಿಕಾರಿಯಾಗಿ, ಯೋಜನಾ ಸಂಯೋಜಕರಾಗಿ ಕೂಡಾ ಅವಕಾಶಗಳಿವೆ.

* ಸ್ವಂತ ನೆಲೆಯಲ್ಲಿ ಸರಕಾರೇತರ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಈ ಡಿಗ್ರಿ ಬಹಳ ಉಪಯುಕ್ತವಾದಿದೆ.

ಕೊನೆಗೊಂದು ಕಿವಿಮಾತು: ಈ ಲೇಖನದ ಪ್ರಾರಂಭದಲ್ಲೇ ಹೇಳಿದ್ದೆ ಈ ಡಿಗ್ರಿ ಬರೇ ಸಮಾಜ ಸೇವೆಗಲ್ಲ; ಉದ್ಯೋಗದ ಮಿತಿಗಳನ್ನು ನೋಡಿದಲ್ಲಿ ಸರ್ಕಾರಿ ಉದ್ಯೋಗಗಳಿಗೆ ವಿಫುಲ ಅವಕಾಶಗಳಿದ್ದು ಅಷ್ಟೇ ಅವಕಾಶಗಳು ಖಾಸಗಿ ವಲಯದಲ್ಲೂ ಇದೆ. ಸ್ವ-ಉದ್ಯೋಗಕ್ಕೂ ಹೇಳಿ ಮಾಡಿಸಿದ ಡಿಗ್ರಿಯಿದು, ಆದರೆ ತಾನು ಏನಾಗಬೇಕು ಎಂದು ನಿಶ್ಚಯಿಸಿ ಮುಂದುವರಿದಲ್ಲಿ ಪದವಿಯೂ ಖಂಡಿತ; ಗೆಲುವು ಕೂಡಾ ಕಟ್ಟಿಟ್ಟ ಬುತ್ತಿ. ಸಮಾಜಮುಖಿ ಕೆಲಸ ಮಾಡುವ ಎಲ್ಲರಿಗೂ ಶುಭವಾಗಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
197
Ashok K. G.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು