News Karnataka Kannada
Tuesday, April 23 2024
Cricket
ಅಂಕಣ

ದೃಶ್ಯ ಕಲೆಯ ಅದೃಷ್ಟದ ನೋಟ…

Photo Credit :

ದೃಶ್ಯ ಕಲೆಯ ಅದೃಷ್ಟದ ನೋಟ…

ನಮ್ಮ ಭಾವಕ್ಕನುಗುಣವಾಗಿ ನಾವು ಈ ಸಮಾಜದ ಅಂಗವಾಗಿ ಹೋಗಿಬಿಡುತ್ತೇವೆ. ಹಲವಾರು ಬಾರಿ ನಮ್ಮ ವಿದ್ಯೆ-ಉದ್ಯೋಗ-ಸ್ಥಾನಮಾನವನ್ನು ಕೂಡಾ ಈ ಆಸಕ್ತಿ ಮತ್ತು ಭಾವನೆಗಳು ರೂಪಿಸುತ್ತವೆ.  ಆಲೋಚನೆಗಳನ್ನು, ಕ್ರಿಯಾತ್ಮಕತೆಯನ್ನು ಒಂದೇ ದಿಕ್ಕಿನಲ್ಲಿ ಹರಿಸಿ ಒಬ್ಬ ತಾನು, ಕವಿಯಾಗಲೂಬಹುದು, ಚಿತ್ರಕಾರನಾಗಬಹುದು, ವ್ಯಾಪಾರಸ್ಥ, ಕಂಪನಿ ಉದ್ಯೋಗಿ ಹೀಗೆ ಹಲವಾರು ರೀತಿಯಲ್ಲಿ ಸ್ವ-ಉದ್ಯೋಗಿಯೂ ಆಗಬಹುದು. ನಾನು ಇವತ್ತು ಮಾತನಾಡಲು ಹೊರಟಿರುವ ಡಿಗ್ರಿ “ದೃಶ್ಯ ಕಲೆ” (ವಿಷುವಲ್ ಆರ್ಟ್) ಕೂಡ ತಮ್ಮನ್ನು ತಾವು ಸುಭದ್ರವಾಗಿ ನೆಲೆ ಊರಲು ಅನುವುಮಾಡಿಕೊಡುವ ಡಿಗ್ರಿ. ಮೊದಲು ಈ ಕೋರ್ಸಿನ ಬಗ್ಗೆ ತಿಳಿದುಕೊಳ್ಳೋಣ; ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ (ಬಿ.ವಿ.ಎ.), ನಾಲ್ಕು ವರ್ಷದ ಪ್ರೊಫೆಶನಲ್ ಕೋರ್ಸ್. ಕೆಲವು ವಿಶ್ವವಿದ್ಯಾಲಯಗಳಲ್ಲಿ ಬಹು ಬೇಡಿಕೆಯಲ್ಲಿರುವ ಡಿಗ್ರಿ ಕೋರ್ಸ್ ಕೂಡ ಹೌದು.  ಲಲಿತ ಕಲೆ (ಫೈನ್ ಆರ್ಟ್) ವ್ಯಾಪ್ತಿಯಲ್ಲಿ ಬರುವ ಈ ಕೋರ್ಸ್, ನಾಟ್ಯ, ಸಂಗೀತ, ನಾಟಕ, ಇವೆಲ್ಲವುಗಳಿಗಿಂತ ಭಿನ್ನ.

ದೃಶ್ಯ ಕಲೆಯ ಬಗ್ಗೆ ಒಂದು ಸಣ್ಣ ತಪ್ಪು ತಿಳುವಳಿಕೆಯಿದೆ. ಅದು ಬರೇ ಚಿತ್ರಕಲೆಗೆ ಸಂಬಂಧಪಟ್ಟಿದ್ದು ಮಾತ್ರ ಅಂತ. ಆದರೆ ಅದು ಹಾಗಿಲ್ಲ; ಚಿತ್ರಕಲೆ, ವಿಷುವಲ್ ಆರ್ಟ್ ನಲ್ಲಿ ಬರುವ ಒಂದು ವಿಷಯವಷ್ಟೇ. ಇದರ ಹೊರತು, ಕ್ರಿಯಾತ್ಮಕ ಬರವಣಿಗೆ, ಛಾಯಾಗ್ರಹಣ, ಫಿಲ್ಮ್ ಮೇಕಿಂಗ್, ತಾಂತ್ರಿಕ ಕಲೆ (ಟೆಕ್ನಿಕಲ್ ಆರ್ಟ್), ಅಪ್ಲೈಡ್ ಆರ್ಟ್, ಶಿಲ್ಪಕಲೆ, ಟೆಲಿವಿಷನ್ ಪ್ರೊಡಕ್ಷನ್, ಫಿಲ್ಮ್ ಪ್ರೊಡಕ್ಷನ್, ಸ್ಟೇಜ್ ಮ್ಯಾನೇಜ್ ಮೆಂಟ್, ಮತ್ತು ಅನಿಮೇಶನ್ ನಂತಹ ವಿವಿಧ ಆಯ್ಕೆಗಳನ್ನು ಹೊಂದಿರುವ ಕೋರ್ಸ್ ಇದು.

ಯಾರಿಗೆ ಕೋರ್ಸ್ ಸೂಕ್ತ?

ಯಾವ ವಿದ್ಯಾರ್ಥಿಯು ತನ್ನ ಕಲಿಕೆಯಲ್ಲಿ ಸೃಜನಶೀಲತೆ, ಆವಿಷ್ಕಾರ ಮಾಡುವ ಆಸಕ್ತಿ, ಸಾಂಸ್ಥಿಕ ಕೌಶಲ್ಯ, ವಿಮರ್ಶಾತ್ಮಕ ಚಿಂತನೆಯ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾನೋ ಅವನು ಖಂಡಿತಾ ಈ ಕೋರ್ಸ್ ತೆಗೆದುಕೊಳ್ಳಲು ಹಿಂಜರಿಯಬೇಕಂತಿಲ್ಲ. ನಾಲ್ಕು ವರ್ಷದ ಈ ಡಿಗ್ರಿಯಲ್ಲಿ ವಿದ್ಯಾರ್ಥಿಯಾಗಬಯಸುವವನು, ಹಲವು ವಿಷಯಗಳ ಕಡೆ ಗಮನ ಹರಿಸಬೇಕು; ತಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲಿನ ಕಲಾತ್ಮಕ ಸಾಮರ್ಥ್ಯ, ಸುತ್ತಲಿನ ವಾತಾವರಣವನ್ನು ಗಮನಿಸುವ ರೀತಿ, ಸೂಕ್ಷ್ಮ ವಿವರಗಳನ್ನು ಗ್ರಹಿಸುವ ಶಕ್ತಿ, ಏಕಾಗ್ರತೆ, ತಾನು ಕಲಿತದ್ದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಹೀಗೆ ಹತ್ತು ಹಲವು ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಯಾವ ಕಲೆಗಾರನಾದರೂ ಸರಿ; ಅವನು ತನ್ನ ಕಲೆಗಾಗಿ ಭಾವೋದ್ರಿಕ್ತನಾಗಿದ್ದರೆ ಖಂಡಿತಾ ಆ ಕಲೆ ಅವನಿಗೆ ಜೀವನಪೂರ್ತಿ ಅನ್ನ ನೀಡುತ್ತದೆ. ಕಾಲ್ಪನಿಕ ಕೌಶಲ್ಯ, ದೃಷ್ಯೀಕರಣಗೊಳಿಸುವ ಕೌಶಲ್ಯಗಳು ಈ ಕೋರ್ಸ್ ನ ಕಲಿಕೆಗೆ ಪುಷ್ಟಿ ನೀಡುತ್ತವೆ.

ಅರ್ಜಿ ಹಾಕಲು ಅರ್ಹತೆ: ಈ ಕೋರ್ಸ್ ಸೇರುವವರಿಗೆ ಸಾಮಾನ್ಯ ಅರ್ಹತೆಯೆಂದರೆ ಪದವಿಪೂರ್ವ ತರಗತಿಯಲ್ಲಿ ಯಾವುದೇ ವಿಷಯದಲ್ಲಿ ಶೇಕಡಾ 45 ರಿಂದ 55 ಅಂಕಗಳಿದ್ದರೆ ಸಾಕು. (ವಿಶ್ವವಿದ್ಯಾಲಯಗಳಿಗೆ ಅನುಗುಣವಾಗಿ ಬದಲಾಗುತ್ತದೆ). ಚಿತ್ರಕಲೆಯಂತಹ ವಿಷಯಗಳ ಅರಿವಿದ್ದರೆ ತುಂಬಾ ಉತ್ತಮ.

ಕೋರ್ಸ್ ಅವಧಿ:

ಈ ಬಿ.ವಿ.ಎ. ಡಿಗ್ರಿ ನಾಲ್ಕು ವರ್ಷದ್ದಾಗಿದ್ದು, ಮುಂದಕ್ಕೆ ಸ್ನಾತಕೋತ್ತರ ಅಧ್ಯಯನ ಮಾಡುವುದಾದಲ್ಲಿ ಎಂ. ವಿ. ಎ. (ಮಾಸ್ಟರ್ ಆಫ್ ವಿಷುವಲ್ ಆರ್ಟ್ಸ್) ಎರಡು ವರ್ಷದ್ದಾಗಿರುತ್ತದೆ. ಒಂದು ಅಥವಾ ಎರಡು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸ್ ಗಳು ಕೂಡ ಲಭ್ಯವಿದೆ. ಸ್ನಾತಕೋತ್ತರ ಪದವಿಯ ಬಳಿಕ ಪಿ.ಎಚ್.ಡಿ. ಮಾಡುವುದಾದರೂ ಈ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ. ಇಷ್ಟು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್., ಮತ್ತು ಐ.ಎ.ಎಸ್. ಗೂ ಈ ಡಿಗ್ರಿ ಅರ್ಹತೆಯನ್ನು ಪಡೆದುಕೊಂಡಿದೆ.

ಒಂದು ಡಿಗ್ರಿ – ಆಯ್ಕೆ ಹಲವು:

ಬಿ.ವಿ.ಎ. (ಬ್ಯಾಚುಲರ್ ಆಫ್ ವಿಷುವಲ್ ಆರ್ಟ್) ಡಿಗ್ರಿಯನ್ನು ಈವಾಗಲೂ ಕೆಲವು ರಾಜ್ಯಗಳಲ್ಲಿ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್) ಡಿಗ್ರಿಯೆಂದೇ ಪರಿಗಣಿಸುತ್ತಾರೆ. ಹಳೆಯ ಕೋರ್ಸ್ ಗಳೆಲ್ಲವೂ ಫೈನ್ ಆರ್ಟ್ ನ ಅಧೀನದಲ್ಲಿ ಬಂದಿರುವುದೇ ಇದಕ್ಕೆ ಕಾರಣ. ಇದು ಕಾಣುವುದಕ್ಕೆ ಒಂದು ಡಿಗ್ರಿಯಾದರೂ ಇದರ ವ್ಯಾಪ್ತಿ ಬಹಳ ವಿಶಾಲ. ಪರಿಸರ ಅಧ್ಯಯನ, ದೃಶ್ಯ ಕಲೆಯ  ಅಧ್ಯಯನ, ಚಿತ್ರಕಲೆ, ಶಿಲ್ಪಕಲೆ, ಸ್ಕೆಚ್ಚಿಂಗ್, ಡಿಸೈನ್, ಪ್ರಿಂಟ್ ಮೇಕಿಂಗ್, ಕ್ಲೇ ಮೊಡೆಲಿಂಗ್, ಛಾಯಾಚಿತ್ರಗ್ರಹಣ, ಪಾರಂಪರಿಕ ಚಿತ್ರಕಲೆ, ಪ್ರಾಚೀನ ಚಿತ್ರಕಲೆ, ಧ್ಯಾನ, ಇಂಗ್ಲೀಷ್ ಭಾಷಾ ಅಧ್ಯಯನ, ಕಂಪ್ಯೂಟರ್ ಗ್ರಾಫಿಕ್ಸ್, ಪೋಸ್ಟರ್ ಡಿಸೈನ್, ಜಾಹೀರಾತು ಮಾದರಿ, ಪ್ರೊಡಕ್ಟ್ ಕ್ಯಾಂಪೇನ್ ಡಿಸೈನ್ ಹೀಗೆ ಹತ್ತು ಹಲವು ವಿಷಯಗಳನ್ನು ಸಲೀಸಾಗಿ ಕಲಿಯಬಹುದು.

ಉದ್ಯೋಗಾವಕಾಶಗಳು:

ದೇಶ-ವಿದೇಶಗಳಿಂದಲೂ ಬಹುಬೇಡಿಕೆಯಿರುವ ಈ ‘ದೃಶ್ಯ ಕಲಾ’ ಡಿಗ್ರಿಗೆ ವಿದ್ಯಾರ್ಥಿಗಳ ಪೂರೈಕೆಯ ಕೊರತೆಯಿದೆ. ಬಹುಶಃ ಇಲ್ಲಿ ಸಿಗುವಷ್ಟು ಸ್ವ-ಉದ್ಯೋಗದ ಆನಂದ ಮತ್ತು ಆದಾಯ ಬೇರೆಲ್ಲೂ ದೊರೆಯದು. ನಾನು ಗಮನಿಸಿದ ಕೆಲವೊಂದನ್ನು ಇಲ್ಲಿ ಪಟ್ಟಿ ಮಾಡಿಕೊಡುತ್ತಿದ್ದೇನೆ:

ವ್ಯಂಗ್ಯಚಿತ್ರಕಾರ: ವ್ಯಂಗ್ಯಚಿತ್ರಕ್ಕಾಗಿ ಹಲವು ಕಡೆಗಳಲ್ಲಿ ಬೇಡಿಕೆಯಿದೆ. ಕೊರೋನಾ ಮಹಾಮಾರಿ ಪ್ರಪಂಚದಾದ್ಯಂತ ಹಬ್ಬಿ ಕೋಟ್ಯಾಂತರ ನಷ್ಟ ಮಾಡಿಸಿದೆ, ಆದರೆ ಅಲ್ಲಿಯೂ ವ್ಯಂಗ್ಯಚಿತ್ರಕಾರನಿಗೆ ಬಹುಬೇಡಿಕೆಯಿತ್ತು. ಪತ್ರಿಕೆ, ನಿಯತಕಾಲಿಕೆಗಳಲ್ಲಿ, ವೆಬ್ ಸೈಟ್ ಗಳಲ್ಲಿ ಪಸರಿಸಿದ ವ್ಯಂಗ್ಯಚಿತ್ರಗಳು ಹಲವರಿಗೆ ಉದ್ಯೋಗ ನೀಡಿತ್ತು.

ಚಿತ್ರಕಾರ: ಸ್ವ-ಉದ್ಯೋಗ ಮಾಡಲಿಚ್ಚಿಸುವವರಿಗೆ ಚಿತ್ರಕಾರನಾಗಿ ಬೆಳೆಯುವುದು ಒಂದು ಒಳ್ಳೆಯ ಅವಕಾಶ. ಹೆಸರು, ಕೀರ್ತಿ ಮತ್ತು ಆದಾಯದ ಮೂಲ ಇದಾಗಿದ್ದು, ವಾಟರ್ ಕಲರ್ ಪೈಂಟಿಂಗ್, ಆಯಿಲ್ ಪೈಂಟಿಂಗ್, ಇಂಕ್ ವಾಶ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್, ಆಕ್ರಿಲಿಕ್ ಪೈಂಟಿಂಗ್ ಹೀಗೆ ವಿವಿಧ ಪ್ರಾಕಾರಗಳಲ್ಲಿ ಚಿತ್ರಕಾರ ತನ್ನನ್ನು ತೊಡಗಿಸಕೊಳ್ಳಬಹುದು.

ಶಿಲ್ಪಿ: ಶಿಲ್ಪಕಲೆಗೆ ಬಹಳ ಬೇಡಿಕೆಯಿದೆ. ದೇಗುಲಗಳಿಂದ ಹಿಡಿದು, ಮೂರ್ತಿಗಳು, ಕಂಬಗಳ ಕೆತ್ತನೆ, ಅಲಂಕಾರಿಕ ಗೋಡೆಗಳವರೆಗೆ ಶಿಲ್ಪಿ ಬಹು ಬೇಡಿಕೆಯ ಉದ್ಯೋಗಿ.

ಆರ್ಟ್ ಡೈರೆಕ್ಟರ್: ಪತ್ರಿಕಾ ಕಛೇರಿಯಲ್ಲಿ, ದೂರದರ್ಶನ ಕೇಂದ್ರಗಳಲ್ಲಿ, ಕಿರುಪರದೆಯಲ್ಲಿ ಅಥವಾ ಸಿನೆಮಾ ಇಂಡಸ್ಟ್ರಿಯಲ್ಲಿ ಆರ್ಟ್ ಡೈರೆಕ್ಟರ್ ಪ್ರಮುಖ ಪಾತ್ರವಹಿಸುತ್ತಾನೆ. ಇವರ ಕೆಲಸ ಸಂಪೂರ್ಣವಾಗಿ ಆರ್ಟ್ ಡಿಸೈನ್ ಮಾಡುವುದಾಗಿದ್ದು, ಉತ್ತಮ ವೇತನವಿರುತ್ತದೆ.

ಗ್ರಾಫಿಕ್ ಡಿಸೈನರ್: ಗಣಕಯಂತ್ರದ ನೆರವಿನಿಂದ ಮಾಡುವ ಗ್ರಾಫಿಕ್ ಡಿಸೈನ್ ಗೆ ಎಲ್ಲಾಕಡೆಯಿಂದಲೂ ಬೇಡಿಕೆಯಿದ್ದು ಒಮ್ಮೆ ಕಲಿತ ವಿದ್ಯೆಯನ್ನು ಸ್ವ-ಉದ್ಯೋಗಕ್ಕಾಗಿ ಬಳಸುವ ಅವಕಾಶವಿದೆ. ಅನೇಕ ಕಂಪೆನಿಗಳಲ್ಲೂ ಗ್ರಾಫಿಕ್ ಡಿಸೈನರ್ ಗಳ ಅವಶ್ಯಕತೆಯಿದ್ದು ಉದ್ಯೋಗಕ್ಕೇನೂ ಕೊರತೆಯಿಲ್ಲ.

ಡಿಸೈನರ್ ಹುದ್ದೆಗಳು: ಬಹುತೇಕ ಕಂಪೆನಿಗಳಲ್ಲಿ ಯಾವುದೇ ಉತ್ಪನ್ನ ತಯಾರಾಗುವಲ್ಲಿಂದ ಕಂಪೆನಿಯ ಬೆಳವಣಿಗೆಯಲ್ಲಿ ಅನೇಕ ಡಿಸೈನರ್ ಉದ್ಯೋಗಗಳಿವೆ. ವಿಷುವಲ್ ಡಿಸೈನರ್, ಇಂಟೀರಿಯರ್ ಡಿಸೈನರ್, ಗ್ರಾಫಿಕ್ ಡಿಸೈನರ್, ಟೆಕ್ಸ್ಟೈಲ್ ಡಿಸೈನರ್, ವೆಬ್ ಡಿಸೈನರ್, ಮ್ಯೂರಲ್ ಡಿಸೈನರ್, ಜ್ಯುವೆಲರಿ ಡಿಸೈನರ್, ಲ್ಯಾಂಡ್ ಸ್ಕೇಪ್ ಡಿಸೈನರ್ ಹೀಗೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿಗೆ ಅನೇಕ ಉದ್ಯೋಗಗಳಿವೆ.

ದೃಶ್ಯ ಕಲಾವಿದ: ವಿಷುವಲ್ ಆರ್ಟಿಸ್ಟ್ ಹೊಸ ಆಲೋಚನೆಗಳನ್ನು ಮಾಹಿತಿಯನ್ನು ಅಥವಾ ಭಾವನೆಗಳನ್ನು ತುಂಬಿದ ಸಂದೇಶಗಳನ್ನು ತನ್ನದೇ ರೀತಿಯಲ್ಲಿ ಬಿತ್ತರಿಸುವ ಪರಿಣತಿ ಹೊಂದಿರುತ್ತಾನೆ. ಎಲ್ಲಾ ಮಾದರಿಯ ಕೆಲಸವನ್ನು ನಿಭಾಯಿಸುವ ಇವರಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ.

ಆರ್ಟ್ ಕ್ರಿಟಿಕ್: ಯಾರು ತಮ್ಮ ಬರವಣಿಗೆಯಲ್ಲಿ ಹಿಡಿತ ಹೊಂದಿರುತ್ತಾರೋ, ಅವರಿಗೆ ಈ ರೀತಿಯ ಅವಕಾಶ ಸಿಗುತ್ತದೆ. ಮ್ಯೂಸಿಯಂಗಳಲ್ಲಿ, ಆರ್ಟ್ ಗ್ಯಾಲರಿಗಳಲ್ಲಿ, ಸ್ಟುಡಿಯೋಗಳಲ್ಲಿ ಇರುವ ಆರ್ಟ್ ಕುರಿತು ಪತ್ರಿಕೆಗಳು, ನಿಯತಕಾಲಿಕೆಗಳು, ಸಂಶೋಧನಾ ಪ್ರಬಂಧಗಳು, ಬ್ಲಾಗ್ ಗಳ ಮುಖಾಂತರ ಜನರಿಗೆ ತಲುಪಿಸುವ ಕೆಲಸ ಇವರದ್ದು. ಕಲೆಗಳ ಬಗ್ಗೆ ತುಂಬಾ ಅಧ್ಯಯನ ಮಾಡಿಕೊಂಡಿದ್ದು ನೇರವಾಗಿ ತೀರ್ಪು ನೀಡುವ ಪರಿಣತಿ ಹೊಂದಿದ್ದರೆ ಉತ್ತಮ.

ಕಂಪೆನಿ ಉದ್ಯೋಗ: ಬಿ.ವಿ.ಎ. ಮಾಡಿದವರನ್ನು ಅನೇಕ ಕಂಪೆನಿಗಳು ನಾ ಮುಂದು ತಾ ಮುಂದು ಎಂದು ಉದ್ಯೋಗ ನೀಡುತ್ತವೆ. ಅವುಗಳಲ್ಲಿ ಪ್ರಮುಖವುಗಳೆಂದರೆ; ಜಾಹೀರಾತು ಕಂಪೆನಿ, ಸಾಫ್ಟ್ ವೇರ್ ಕಂಪೆನಿ, ಫಿಲ್ಮ್ ಇಂಡಸ್ಟ್ರಿ, ಮ್ಯೂಸಿಯಂ, ಸ್ಟೇಜ್ ಡೆಕೋರೇಟರ್, ಅನಿಮೇಟರ್ಸ್ ಹೀಗೆ ಹಲವಾರು ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಉತ್ತಮ ವೇತನದೊಂದಿಗೆ ಉದ್ಯೋಗಗಳು ಸಿಗಲಿವೆ.

ಭೋದಕ ಸಿಬ್ಬಂಧಿ: ಚಿತ್ರಕಲೆ, ಶಿಲ್ಪಕಲೆ ಮತ್ತು ಇನ್ನಿತರ ಆಯಾಮಗಳಲ್ಲಿ ಪರಿಣತಿ ಹೊಂದಿದ ಮತ್ತು ಶಿಕ್ಷಕರಾಗಿ ಕೆಲಸ ಮಾಡುವವರಿಗೆ ವಿಫುಲ ಅವಕಾಶಗಳಿವೆ. ಸಾಮಾನ್ಯ ಶಾಲೆಗಳಿಂದ ಹಿಡಿದು ಆರ್ಟ್ ಸ್ಕೂಲ್ಸ್,  ಸ್ನಾತಕೋತ್ತರ ವಲಯಗಳಲ್ಲಿ ಭೋದಕ ವರ್ಗದಲ್ಲಿ ಉದ್ಯೋಗ ಪಡೆಯಬಹುದು. ಕೇಂದ್ರೀಯ ವಿದ್ಯಾಲಯಗಳಲ್ಲಿ ಸರ್ಕಾರಿ ನೌಕರಿಯಲ್ಲೂ ಅನೇಕ ಹುದ್ದೆಗಳು ಈ ವಿಭಾಗಕ್ಕೆ ತೆರೆದಿರುತ್ತವೆ.

ಇಷ್ಟೆಲ್ಲಾ ಓದಿದ ಮೇಲೆ, ಬಹುಶಃ ನಾನು ಡಿಗ್ರಿ ಮಾಡಿಕೊಂಡವನಾಗಿದ್ದರೆ, ‘ಹೋ, ನಾನೂ ಕೂಡ ಬಿ.ವಿ.ಎ. ಮಾಡಬಹುದಿತ್ತು; ಆದರೆ ನಂಗೆ ಯಾರೂ ಇದರ ಬಗ್ಗೆ ಹೇಳಲೇ ಇಲ್ಲ.’ ಎಂಬ ಉದ್ಗಾರ ಬಂದರೂ ಆಶ್ಚರ್ಯವಿಲ್ಲ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ‘ದೃಶ್ಯ ಕಲಾ ವಿಭಾಗದ’ ಮುಖ್ಯಸ್ಥರಾದ ಶ್ರೀ ಶರತ್ ಕುಮಾರ್ ಶೆಟ್ಟಿಯವರು ಹೇಳುವ ಹಾಗೇ, “ಈ ಬಿ.ವಿ.ಎ. ಡಿಗ್ರಿ ಮಾಡಲು ಬರುವ ವಿದ್ಯಾರ್ಥಿ ಒಬ್ಬ ‘ಬಡಗಿ’ಯ ಹಾಗೆ; ಬಡಗಿಯೊಬ್ಬ ತನ್ನ ಕೆಲಸವನ್ನು ಒಮ್ಮೆ ಕಲಿತುಕೊಂಡರೆ ಮತ್ತೆ ತನ್ನದೇ ಶೈಲಿಯಲ್ಲಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಾನೆ. ಆದರೆ ಈ ಕೋರ್ಸಿನ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯಿರುವುದಿಲ್ಲ ಮತ್ತು ಈ ಡಿಗ್ರಿಯಲ್ಲಿ ಆಗುತ್ತಿರುವ ಬೆಳವಣಿಗೆಗೆ ಪ್ರಚಾರದ ಅಗತ್ಯತೆಯಿದೆ” ಎನ್ನುತ್ತಾರೆ.

ನಾನು ಪಣತೊಟ್ಟಿದ್ದೇನೆ ನನಗೆ ಗೊತ್ತಿರುವ ಎಲ್ಲಾ ವರ್ಗದ ಆಸಕ್ತಿಯಿರುವ ವಿದ್ಯಾರ್ಥಿಗೆ ಈ ಡಿಗ್ರಿಯ ಅವಕಾಶಗಳನ್ನು ತಪ್ಪದೇ ತಿಳಿಸಿಕೊಡುತ್ತೇನೆ. ವಿಶ್ವದಾದ್ಯಂತ ಉದ್ಯೋಗವಿಲ್ಲದೆ ಒದ್ದಾಡುವ ಅನೇಕ ಪದವೀಧರರನ್ನು ನೋಡುವಾಗ ಇವರು ಬಿ.ವಿ.ಎ. ಮಾಡಬಹುದಿತ್ತಲ್ಲ ಎಂದು ಕೊನೆಗೆ ಹೇಳುವ ಬದಲು ಈವಾಗಲೇ ಅವರನ್ನು ಎಚ್ಚರಿಸುತ್ತೇನೆ. ನೀವೂ ಈ ವಿಷಯವನ್ನು ಪಸರಿಸಿ, ಎಲ್ಲರಿಗೂ ಒಳ್ಳೆಯದಾಗಲಿ.. ಎನ್ನುವ ಆಶಯದೊಂದಿಗೆ.. ಸಿಗುವೆ ಮುಂದಿನ ವಾರ.. ಹೊಸ ಡಿಗ್ರಿಯೊಂದಿಗೆ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
197
Ashok K. G.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು