Categories: ಸಮುದಾಯ

ಮೈಸೂರು: ವೈಭವದ ಚಾಮುಂಡೇಶ್ವರಿ ವರ್ಧಂತಿ, ಚಿನ್ನದ ಪಲ್ಲಕ್ಕಿ ಉತ್ಸವ

ಮೈಸೂರು: ಆಷಾಢ ಮಾಸದ ಕೃಷ್ಣಪಕ್ಷ ಅಷ್ಠಮಿ ರೇವತಿ ನಕ್ಷತ್ರದ ದಿನವಾದ ಸೋಮವಾರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಚಿನ್ನದ ಪಲ್ಲಕ್ಕಿ ಉತ್ಸವವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಚಾಮುಂಡಿಬೆಟ್ಟದತ್ತ ಧಾವಿಸಿ ಬಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದು ಪುನೀತರಾದರು. ಚಾಮುಂಡೇಶ್ವರಿಯ ಹುಟ್ಟಿದ ಹಬ್ಬದ ವಿಶೇಷ ದಿನವಾದ್ದರಿಂದ ನಗರ, ಜಿಲ್ಲೆ ಸೇರಿದಂತೆ ರಾಜ್ಯ, ಹೊರರಾಜ್ಯದ ಭಕ್ತರು ಬೆಟ್ಟಕ್ಕೆ ಆಗಮಿಸಿ ಭಕ್ತಿಭಾವ ಮೆರೆದರಲ್ಲದೆ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿದರು.

ಮುಂಜಾನೆ 4 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ತಾಯಿಯ ವರ್ಧಂತ್ಯುತ್ಸವದ ವಿಶೇಷ ದಿನವಾದ್ದರಿಂದ ಮೊದಲು ಅಮ್ಮನಿಗೆ ಅಭ್ಯಂಜನ ಸ್ನಾನ ಮಾಡಿಸಿ, ಬಳಿಕ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪ್ರಾತಃಕಾಲ ಬೆಳಗ್ಗೆ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ 9 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ತಾಯಿಯ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಾವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಚಾಮುಂಡೇಶ್ವರಿ ಅಲಂಕಾರ ಮಾಡಲಾಗಿತ್ತು. ಸುಗಂಧರಾಜ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ಬಗೆ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರವೇಶದ್ವಾರ, ಹೊರಭಾಗವನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು.

ರಾಜಮಾತೆ ಪ್ರಮೋದಾದೇವಿ ಒಡೆಯರ್, ಪತ್ನಿ ತ್ರಿಷಿಕಾ ಸಿಂಗ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿಯಲ್ಲಿ ಕುಳಿತು ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಉತ್ಸಮ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ನಂತರ 10.30ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ವಿಶೇಷವಾಗಿ ಅಲಂಕೃತಗೊಂಡಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಯದುವೀರ್ ದಂಪತಿ, ಪ್ರಮೋದಾದೇವಿ ಒಡೆಯರ್ ಪಲ್ಲಕ್ಕಿಯನ್ನು ಎಳೆದು ಉತ್ಸವಕ್ಕೆ ಚಾಲನೆ ನೀಡಿದರು.

ಉತ್ಸವ ಸಾಗುತ್ತಿದ್ದಂತೆ ಸಹಸ್ರಾರು ಭಕ್ತರು ಹಿಂದೆ ಸಾಗಿದರು. ಜೈ ದುರ್ಗೆ, ಜೈ ಚಾಮುಂಡೇಶ್ವರಿ ಎಂಬ ಘೋಷಣೆಗಳನ್ನು ಕೂಗಿದರು. ಪೊಲೀಸ್ ಬ್ಯಾಂಡ್, ಮಂಗಳವಾದ್ಯ ಸೇರಿದಂತೆ ಛತ್ರಿ, ಚಾಮರಗಳೊಂದಿಗೆ ದೇವಸ್ಥಾನದ ಸುತ್ತ ಉತ್ಸವ ಯಶಸ್ವಿಯಾಗಿ ನಡೆಯಿತು. ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ರಾತ್ರಿ 8.30ಕ್ಕೆ ಉತ್ಸವ ಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ನಡೆಸಿ, ರಾಷ್ಟ್ರಾಶೀರ್ವಾದ ಸಲ್ಲಿಸಲಾಯಿತು.

ಬೆಟ್ಟಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಎಂದಿನಂತೆ ಮಲ್ಟಿಲೆವೆಲ್ ಪಾರ್ಕಿಂಗ್ ಜಾಗದಲ್ಲಿ ಬೆಂಗಳೂರಿನ ಸುನಂದಾ ಗಿರೀಶ್ ಅವರ ನಾಗಾರ್ಜುನ ಕನ್ಸ್‌ಸ್ಟ್ರಕ್ಷನ್ಸ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ೭ರಿಂದ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿಯವರೆಗೂ ನಡೆಯಿತು. ಬೆಳಗ್ಗೆ ಪೊಂಗಲ್, ಕೇಸರಿಬಾತ್, ಇಡ್ಲಿ ಸಾಂಬಾರ್, ಉದ್ದಿನ ವಡೆ ವಿತರಿಸಲಾಯಿತು.

 

Sneha Gowda

Recent Posts

ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ…

18 mins ago

ಚಾಮರಾಜನಗರದಲ್ಲಿ ಉಡ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಸಾಗಾಟ ಮಾಡುವ ಜಾಲ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿಗಳನ್ನು ಬೇಟೆಯಾಡಿ ಮಾಂಸ…

29 mins ago

ಮೈಸೂರಿನಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು…

39 mins ago

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

50 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

1 hour ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

1 hour ago