News Karnataka Kannada
Monday, April 29 2024
ಆರೋಗ್ಯ

ಮುಂಗಾರಿನಲ್ಲಿ ಕಾಡುವ ಸಾಂಕ್ರಾಮಿಕ ರೋಗ ನಿಯಂತ್ರಣ ಹೇಗೆ

How to control the pandemic during the monsoon
Photo Credit : Pixabay

ಮುಂಗಾರು ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿಕ ರೋಗದ ಭಯ ಶುರುವಾಗಿದೆ. ಅದರಲ್ಲೂ ಚಿಕೂನ್‌ ಗುನ್ಯಾ, ಡೆಂಗ್ಯೂ ಸೇರಿದಂತೆ ಹಲವು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ. ಇದರ ಜತೆಗೆ ಮಳೆಗಾಲದಲ್ಲಿ ಕೆಮ್ಮು, ಶೀತ, ನೆಗಡಿ ಕಾಣಿಸಿಕೊಳ್ಳುತ್ತವೆ ಇದೆಲ್ಲದರಿಂದ ಪಾರಾಗಬೇಕಾದರೆ ಕೆಲವೊಂದು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ, ಅತಿಸಾರ, ಟೈಫಾಯಿಡ್, ವೈರಲ್‌ಜ್ವರ, ಕಾಲರಾ,  ಇನ್ನಿತರ ಕಾಯಿಲೆಗಳು ಕಾಡಲಿದ್ದು ಅದರತ್ತ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಈ ಎಲ್ಲ ಕಾಯಿಲೆಗಳು ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ, ಜತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಇರುತ್ತವೆ. ಮುಖ್ಯವಾಗಿ ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಸೊಳ್ಳೆಗಳ ಸಂತತಿ ಹೆಚ್ಚದಂತೆ ನೋಡಿಕೊಳ್ಳಬೇಕು. ಸೂಕ್ತ ಆರೈಕೆ ಮತ್ತು ಕಾಳಜಿಯ ಕೊರತೆಯಿಂದ ಮಳೆಗಾಲದ ಕೆಲ ಕಾಯಿಲೆಗಳು ಮಾರಕವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

ಡೆಂಗ್ಯೂ ಟೈಗರ್ ಮಾಸ್ಕಿಟೋ ಅಥವಾ ಹುಲಿ ಸೊಳ್ಳೆಯ ಕಡಿತದಿಂದ ಈ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಡೆಂಗ್ಯೂ ಜ್ವರದ ಲಕ್ಷಣಗಳೆಂದರೆ ತೀವ್ರತರದ ಜ್ವರ, ಕಡಿಮೆ ಪ್ಲೇಟ್‌ಲೆಟ್ ಎಣಿಕೆ, ಸೊಳ್ಳೆ ಕಡಿದ ಭಾಗದಲ್ಲಿ ದದ್ದುಗಳು, ತ್ವಚೆ ಅತಿ ಸಂವೇದಿಯಾಗುವುದು. ಈ ಸೊಳ್ಳೆ ನಿಮ್ಮ ಕೆಲಸದ ಕೇಂದ್ರ ಅಥವಾ ಮನೆಗೆ ಪ್ರವೇಶಿಸದಂತೆ ತಡೆಯಲು ಸೊಳ್ಳೆ ನಿವಾರಕಗಳು ಮತ್ತು ಸಿಟ್ರೊನೆಲ್ಲಾದಂತಹ ಕೀಟ ನಿವಾರಕ ಸಸ್ಯಗಳನ್ನು ಬಳಸುವುದು ಒಳ್ಳೆಯದು. ನಿಮ್ಮ ಇಡೀ ದೇಹವನ್ನು ಆವರಿಸುವ ಬಟ್ಟೆಗಳನ್ನು ಧರಿಸುವುದು ಸಹ ಉಪಯುಕ್ತವಾದ ಕ್ರಮವಾಗಿದೆ. ಸೊಳ್ಳೆಪರದೆ ಬಳಸಿ ಮಲಗುವುದು ಉತ್ತಮ.

ಚಿಕೂನ್‌ಗುನ್ಯಾ ಮುಖ್ಯವಾಗಿ ಹವಾನಿಯಂತ್ರಣಗಳು, ಕೂಲರ್‌ಗಳು, ಸಸ್ಯಗಳು, ಪಾತ್ರೆಗಳು, ನೀರಿನ ಕೊಳವೆಗಳಲ್ಲಿ ಕಂಡುಬರುವ ನಿಂತಿರುವ ನೀರಿನಲ್ಲಿ ಜನಿಸಿದ ಸೊಳ್ಳೆಗಳಿಂದ ಉಂಟಾಗುತ್ತದೆ. ಈಡಿಸ್ ಅಲ್ಬೋಪಿಕ್ಟಸ್ ಎಂಬ ಪ್ರಜಾತಿಯ ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಈ ರೋಗ ಹರಡುತ್ತದೆ. ಮೂಳೆಸಂಧುಗಳಲ್ಲಿ ನೋವು ಮತ್ತು ಜ್ವರವು ಚಿಕೂನ್‌ಗುನ್ಯಾದ ಎರಡು ಸಾಮಾನ್ಯ ಲಕ್ಷಣಗಳಾಗಿವೆ. ನೀರು ನಿಂತಿರುವ ಯಾವುದೇ ಮೇಲ್ಮೈ ಅಥವಾ ಪಾತ್ರೆಗಳನ್ನು ತೆರವುಗೊಳಿಸುವುದು ಮತ್ತು ಕೀಟ ನಿವಾರಕವನ್ನು ಬಳಸಬೇಕು.

ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಮಲೇರಿಯಾ ರೋಗ ಉಂಟಾಗುತ್ತದೆ. ಈ ಸೊಳ್ಳೆ ಜಲಾವೃತ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಈ ಕಾರಣದಿಂದಾಗಿ, ಮಳೆಗಾಲದಲ್ಲಿ ಮಲೇರಿಯಾ ಸಾಮಾನ್ಯವಾಗಿ ಎದುರಾಗುವ ಕಾಯಿಲೆಯಾಗಿದೆ. ಜ್ವರ, ನಡುಕ, ಸ್ನಾಯು ನೋವು ಮತ್ತು ಅತೀವ ಸುಸ್ತು ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳಾಗಿವೆ. ಮನೆಯಲ್ಲಿರುವ ನೀರಿನ ಟ್ಯಾಂಕ್‌ಅನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೀರು ನಿಲ್ಲದಂತೆ  ಸ್ವಚ್ಛಗೊಳಿಸುವುದು ಅಗತ್ಯ.

ಈ ವ್ಯಾಪಕವಾದ ಕರುಳಿನ ಕಾಯಿಲೆ ನೈರ್ಮಲ್ಯವಿಲ್ಲದ ಆಹಾರ ಮತ್ತು ನೀರಿನ ಸೇವನೆಯಿಂದ ಉಂಟಾಗುತ್ತದೆ. ತೀವ್ರ ಮತ್ತು ದೀರ್ಘಕಾಲದ ಹೀಗೆ ಎರಡು ರೀತಿಯ ಅತಿಸಾರವಿದೆ, ಇವೆರಡನ್ನೂ ಸರಳ ಚಿಕಿತ್ಸೆಗಳಿಂದಲೇ ನಿಭಾಯಿಸಬಹುದು. ಬಿಸಿ ನೀರನ್ನು ಕುಡಿಯುವುದು ಮತ್ತು ಮನೆಯ ಆಹಾರವನ್ನೇ ಸೇವಿಸುವುದು ಈ ರೋಗವನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ.

ಟೈಫಾಯಿಡ್ ಸಾಮಾನ್ಯವಾಗಿ ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತದೆ. ಸರಿಯಾದ ಕ್ರಮದಲ್ಲಿ ಸಂಗ್ರಹಿಸದ ಆಹಾರ ಮತ್ತು ನೀರಿನ ಬಳಕೆಯಿಂದ ಈ ರೋಗ ಬರುವ ಸಾಧ್ಯತೆ ಹೆಚ್ಚು. ಎಸ್.ಟೈಫಿ ಬ್ಯಾಕ್ಟೀರಿಯಾವೇ ಟೈಫಾಯಿಡ್‌ಗೆ ಕಾರಣವಾಗುತ್ತದೆ. ಜ್ವರ, ತಲೆನೋವು, ಅತೀವ ಸುಸ್ತು, ಮೈ ಕೈ ನೋವು ಮತ್ತು ಗಂಟಲ ಬೇನೆ, ನುಂಗಲು ಕಷ್ಟವಾಗುವುದು ಟೈಫಾಯಿಡ್‌ನ ಕೆಲವು ಲಕ್ಷಣಗಳಾಗಿವೆ. ಎಲ್ಲ ಸಮಯದಲ್ಲೂ ಹ್ಯಾಂಡ್ ಸ್ಯಾನಿಟೈಜರ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು, ಬೀದಿ ಬದಿಯ ಆಹಾರಗಳನ್ನು ಸೇವಿಸುವುದರಿಂದ ದೂರವಿರುವುದು ಮತ್ತು ಆರೋಗ್ಯಕರ ದ್ರವಗಳನ್ನು ಕುಡಿಯಬೇಕು.

ವೈರಲ್ ಜ್ವರ ವರ್ಷದುದ್ದಕ್ಕೂ ಎದುರಾಗುವ ಸಾಮಾನ್ಯ ಲಕ್ಷಣವಾಗಿದೆ, ಆದರೆ ಮಳೆಗಾಲದಲ್ಲಿ ಇದು ಇನ್ನೂ ಹೆಚ್ಚು ಸಾಮಾನ್ಯವಾಗಿದೆ. ತೀವ್ರ ಜ್ವರ, ಶೀತ ಮತ್ತು ಕೆಮ್ಮು ಇದರ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಇದು 3-7 ದಿನಗಳ ವರೆಗೆ ಇರುತ್ತದೆ. ಬಳಿಕ ನಮ್ಮ ರೋಗ ನಿರೋಧಕ ಶಕ್ತಿ ಈ ವೈರಸ್‌ಗೆ ರೋಗ ರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳುವ ಕಾರಣ ಈ ಜ್ವರ ತಾನಾಗಿಯೇ ಇಳಿಯುತ್ತದೆ.

ಕಲುಷಿತ ಆಹಾರ, ನೀರಿನ ಸೇವನೆಯಿಂದ ಉಂಟಾಗುವ ಮತ್ತೊಂದು ಮಳೆಗಾಲದ ಕಾಯಿಲೆ ಕಾಲರಾ. ನೈರ್ಮಲ್ಯದ ಮತ್ತು ಸ್ವಚ್ಛತೆಗೆ ಕೊರತೆಗಳು ಅನೇಕ ರೋಗಗಳಿಗೆ ಕಾರಣವಾಗಬಹುದು ಮತ್ತು ಕಾಲರಾ ಅವುಗಳಲ್ಲಿ ಒಂದು. ಅತಿಯಾದ ಮಲವಿಸರ್ಜನೆ ಮತ್ತು ಸುಸ್ತು ಈ ಮಾನ್ಸೂನ್ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ.

ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಈ ನೀರಿನಿಂದ ತಯಾರಿಸಿದ ಆಹಾರವನ್ನು ಸೇವನೆಯಿಂದ ಜಾಂಡೀಸ್ ಬರುತ್ತದೆ. ಅತಿಯಾದ ಸುಸ್ತು, ಹಳದಿ ಬಣ್ಣದ ಮೂತ್ರ, ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕುದಿಸಿ ತಣಿಸಿದ ನೀರನ್ನು ಕುಡಿಯುವುದು, ಮನೆಯಲ್ಲಿ ತಯಾರಿಸಿದ ಆಹಾರಗಳನ್ನೇ ಸೇವಿಸುವುದರಿಂದ ಇದನ್ನು ತಡೆಗಟ್ಟಬಹುದಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಳೆಗಾಲದಲ್ಲಿ ಹಲವು ರೋಗಗಳು ಕಾಡುವುದು ಸಹಜವಾಗಿದ್ದು ಅದರ ತಡೆಗೆ ಎಚ್ಚರ ವಹಿಸುವುದು ಮುಖ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು