News Karnataka Kannada
Monday, April 29 2024
ಆರೋಗ್ಯ

ಚಾಮರಾಜನಗರದಲ್ಲಿ 84 ಮಂದಿ ಎಚ್‌ಐವಿ ಸೋಂಕಿತರು ಪತ್ತೆ

84 HIV positive cases detected in Chamarajanagar
Photo Credit : News Kannada

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ   ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 84 ಮಂದಿಗೆ ಎಚ್‌ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ ಮೂವರು ಗರ್ಭಿಣಿಯರು ಇರುವುದು ಆತಂಕಕಾರಿಯಾಗಿದೆ.

ಈ ಕುರಿತಂತೆ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಎಂ.ಎಸ್‌.ರವಿಕುಮಾರ್‌ ಅವರು ಈ ಮಾಹಿತಿಗಳನ್ನು ನೀಡಿದ್ದು, ಕಳೆದ ವರ್ಷ (2022–23)  58,332 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪೈಕಿ 194 ಮಂದಿ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದರು. 16,684 ಗರ್ಭಿಣಿಯರನ್ನು ಎಚ್‌ಐವಿ ಪರೀಕ್ಷೆಗೆ ಒಳಪ‍ಡಿಸಲಾಗಿತ್ತು, ಈ ಪೈಕಿ ನಾಲ್ವರಲ್ಲಿ ಸೋಂಕು ಕಂಡು ಬಂದಿತ್ತು.

ಏಡ್ಸ್‌ ತಡೆ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ಇಲಾಖೆಯು ಈ ಸಾಲಿನಲ್ಲಿ (ಅಕ್ಟೋಬರ್‌ 23ರವರೆಗೆ)  33,849 ಸಾಮಾನ್ಯ ಅಭ್ಯರ್ಥಿಗಳನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, 81 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 8,350 ಗರ್ಭಿಣಿಯರನ್ನು ಪರೀಕ್ಷೆ ನಡೆಸಲಾಗಿದ್ದು, ಮೂವರು ಸೋಂಕಿನಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ 2008ರಿಂದ ಇಲ್ಲಿಯವರೆಗೆ 4,246 ಸಾಮಾನ್ಯ ಜನ ಮತ್ತು 230 ಗರ್ಭಿಣಿಯರು, ಸೇರಿದಂತೆ 4,476 ಮಂದಿಯಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ. ಈ ಪೈಕಿ 2,350 ಪುರುಷರು, 2,110 ಮಂದಿ ಮಹಿಳೆಯರು ಮತ್ತು 16 ಮಂದಿ ಲೈಂಗಿಕ ಅಲ್ಪಸಂಖ್ಯಾತರಾಗಿದ್ದಾರೆ.

2008ರಿಂದ 2023ರ ಅಕ್ಟೋಬರ್‌ವರೆಗೆ ಚಾಮರಾಜನಗರ ತಾಲ್ಲೂಕಿನಲ್ಲಿ 2,218, ಗುಂಡ್ಲುಪೇಟೆಯಲ್ಲಿ 979, ಕೊಳ್ಳೇಗಾಲದಲ್ಲಿ 1,058, ಯಳಂದೂರು ತಾಲ್ಲೂಕಿನಲ್ಲಿ 221 ರೋಗಿಗಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ.  15 ವರ್ಷಗಳ ಅವಧಿಯಲ್ಲಿ 945 ಪುರುಷರು, 521 ಮಹಿಳೆಯರು, ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ 1,469 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 2,511 ಮಂದಿ ಎ.ಆರ್‌.ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಸುರಕ್ಷಿತ ಲೈಂಗಿಕತೆ, ಮಾದಕ ವ್ಯಸನಿ ಸಿರಿಂಜ್ ಬದಲಾಯಿಸದೆ ಬಳಕೆ, ರಕ್ತದಾನ ಮಾಡುವುದರಿಂದ, ಎಚ್‌ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಏಡ್ಸ್ ಹರಡುತ್ತದೆ. ಎಚ್ಚರಿಕೆ ವಹಿಸಿದರೆ ಈ ಕಾಯಿಲೆಯನ್ನು ನಿಯಂತ್ರಣ  ಮಾಡಬಹುದು. ಜಿಲ್ಲೆಯಲ್ಲಿ ಇಲಾಖೆಯ ವತಿಯಿಂದ ವಿವಿಧ ಸೌಲಭ್ಯಗಳು ಲಭ್ಯವಿದೆ ಎಂದು ಅವರು ಹೇಳಿದರು.

1986ರಲ್ಲಿ ದೇಶದಲ್ಲಿ ಮೊದಲ ಎಚ್‌ಐವಿ ಪ್ರಕರಣ ಕಂಡುಬಂತು. ಚಾಮರಾಜನಗರ  ಜಿಲ್ಲೆಯಲ್ಲಿ 2004ರಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು. 2004ರಿಂದ ಇಲ್ಲಿಯವರೆಗೆ 5,219 ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದಾರೆ. ಇದರಲ್ಲಿ 1944 ಜನ ಮರಣ ಹೊಂದಿದ್ದರೆ, 2,640 ಜನರು ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ 0.23ರಷ್ಟು ಇದೆ ಎಂದು ಅವರು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು