News Karnataka Kannada
Monday, April 29 2024
ಆರೋಗ್ಯ

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ

Arogya Health
Photo Credit :

ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ಬಿಸಿಲಿಗೆ ಮೈವೊಡ್ಡದೆ ಮನೆಯಲ್ಲಿ ತೆಪ್ಪಗೆ ಕುಳಿತವರು ಈ ಬಾರಿ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಬಿಸಿಲಿಗೆ ಅನಿವಾರ್ಯವಾಗಿ ಮೈವೊಡ್ಡಲೇ ಬೇಕಾಗಿದೆ. ಜತೆಗೆ ಬಿಸಿಲಿನ ತಾಪವೂ ಹೆಚ್ಚಾಗಿದೆ.

ಹೀಗಿರುವಾಗ ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಈಗಾಗಲೇ  ಅಲ್ಲಲ್ಲಿ ಮಳೆ ಸುರಿದಿದೆ. ಆಗಾಗ್ಗೆ ಮಳೆ ಸುರಿದರೆ ಪರಿಸರ ತಂಪಾಗಿ ಒಂದಿಷ್ಟು ನೆಮ್ಮದಿ ತರಬಹುದು. ಮಳೆ ಕಡಿಮೆಯಾದರೆ ಈಗಾಗಲೇ ಸುರಿದ ಮಳೆಯಿಂದ ಅಲ್ಲಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳು  ಉತ್ಪತ್ತಿಯಾಗಿ ಹಲವು ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.

ಸಾಮಾನ್ಯವಾಗಿ  ಬೇಸಿಗೆಯಲ್ಲಿ ಮಲೇರಿಯಾ ಕಾಣಿಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಮಲೇರಿಯಾ ಕೂಡ ಪ್ರಾಣತೆಗೆಯುವ ಸಾಂಕ್ರಾಮಿಕ ರೋಗವಾಗಿತ್ತು. ಆದರೆ ವೈದ್ಯಕೀಯ ಆವಿಷ್ಕಾರಗಳು ಮಲೇರಿಯಾದ ಪರಿಣಾಮವನ್ನು ತಗ್ಗಿಸುವಂತೆ ಮಾಡಿದೆ. ಆದರೆ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ  ಬರಲಿರುವ ಕಾಯಿಲೆಯನ್ನು ತಡೆಯಲು ಸಾಧ್ಯವಾಗುತ್ತದೆ. ಮಲೇರಿಯಾ ರೋಗ ಸೊಳ್ಳೆಯಿಂದ ಹರಡುವ ಕಾರಣ ಸ್ವಚ್ಛತೆಗೆ ಆದ್ಯತೆ ನೀಡುವುದು ಬಹು ಮುಖ್ಯವಾಗಿದೆ. ಮಲೇರಿಯಾ ಜ್ವರದಲ್ಲಿ ನಾಲ್ಕು ಪ್ರಬೇಧಗಳಿದ್ದು, ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ ಎಂಬಂತೆ ರೋಗಕ್ಕೆ ಚಿಕಿತ್ಸೆ ಲಭ್ಯವಿದ್ದು, ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದೆ.

ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಮಲೇರಿಯಾ ರೋಗವು ಅನಾಫಿಲೀಸ್ ಜಾತಿಗೆ ಸೇರಿದ ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ. ನೀರಿನ ತಾಣಗಳಾದ ಕೆರೆಗಳು, ಬಾವಿಗಳು, ಕಾಲುವೆ, ಹೊಂಡ, ಇತರೆ ಅನುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ಅನಾಫಿಲೀಸ್ ಜಾತಿಯ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ಮಲೇರಿಯಾ ರೋಗವನ್ನು ತಡೆಗಟ್ಟಲು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಮೈತುಂಬ ಬಟ್ಟೆ  ಧರಿಸಬೇಕು. ಮನೆಗಳ ಕಿಟಕಿ ಬಾಗಿಲುಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸಿಕೊಳ್ಳಬೇಕು. ಮಲಗುವ ವೇಳೆ ಸೊಳ್ಳೆ ಪರದೆ ಕಟ್ಟಿಕೊಳ್ಳಬೇಕು. ಮನೆಯ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮಲೇರಿಯಾ ಜ್ವರ ಹೆಚ್ಚು ಪ್ರಕರಣಗಳಿರುವ ಸ್ಥಳಗಳಿಗೆ ಹೋಗಿಬಂದಾಗ ಮಲೇರಿಯಾ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಜ್ವರ ಎಂದಾಕ್ಷಣ ಕೊರೋನಾ ಇರಬಹುದೆಂದು ಹೆದರಿ ಯಾವುದೇ ಮಾತ್ರೆ ನುಂಗಿ ತೆಪ್ಪಗಾಗುವವರ ಸಂಖ್ಯೆ ಹೆಚ್ಚಿದೆ. ಆದರೆ ಹಾಗೆ ಮಾಡದೆ ವೈದ್ಯರಿಗೆ ತೋರಿಸಿ ರಕ್ತ ಪರೀಕ್ಷೆ ಮಾಡಿಸುವ ಮೂಲಕ ಮಲೇರಿಯಾನಾ ಎಂಬುದನ್ನು ಖಚಿತ ಮಾಡಿಕೊಳ್ಳಬೇಕಾಗುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಹಳಷ್ಟು ಕಾಯಿಲೆಗಳು ಅನೈರ್ಮಲ್ಯದಿಂದ ಬರುತ್ತದೆ. ಆದ್ದರಿಂದ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ಮರೆಯಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು