News Karnataka Kannada
Saturday, April 20 2024
Cricket
ಆರೋಗ್ಯ

ಹೊರಗೆ ಮಾತ್ರವಲ್ಲ: ನಾಲ್ಕುಗೋಡೆಗಳ ನಡುವೆಯೂ ಇದೆ ಮಾಲಿನ್ಯ

Photo Credit :

ಹೊರಗೆ ಮಾತ್ರವಲ್ಲ: ನಾಲ್ಕುಗೋಡೆಗಳ ನಡುವೆಯೂ ಇದೆ ಮಾಲಿನ್ಯ

ಬೆಂಗಳೂರು: ವಾಹನಗಳ ಹೊಗೆ, ಕೈಗಾರಿಕೆಗಳ ಹೊಗೆಯಿಂದ, ಜೈವಿಕ ವಸ್ತುಗಳ ಸುಡುವಿಕೆಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದೆಯೆಂಬ ಮಾತ್ರಕ್ಕೆ ಹೊರಾಂಗಣ ಪ್ರದೇಶಗಳು ಮಾತ್ರವೇ ಅಪಾಯಕಾರಿಯೆಂದು ಭಾವಿಸಬೇಕಿಲ್ಲ; ತಜ್ಞರ ಪ್ರಕಾರ ಒಳಾಂಗಣ ಅಂದರೆ ನಾಲ್ಕು ಗೋಡೆಗಳ ನಡುವೆಯೂ ಇರುವ ವಾಯುಮಾಲಿನ್ಯವು ಕಡಿಮೆ ಅಪಾಯಕಾರಿಯಾದುದೇನಲ್ಲ.

ಭಾರತೀಯ ವಿಜ್ಞಾನ ಸಂಸ್ಥೆಯ ದಿವೆಚಾ ಸೆಂಟರ್ ಫಾರ್ ಕ್ಲೈಮೆಟ್ ಚೇಂಜ್ ಕೇಂದ್ರದ ಪ್ರಾಧ್ಯಾಪಕ ಹಾಗೂ ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಹೆಚ್. ಪರಮೇಶ್ ಅವರ ಪ್ರಕಾರ ‘ವಾತಾವರಣದಲ್ಲಿರುವ ಧೂಳಿನ ಕಣಗಳಿಂದಾಗಿ ಅಸ್ತಮಾ ಪೀಡಿತರಾಗುವ ಸಾಧ್ಯತೆಯು 60%ದಷ್ಟಿರುತ್ತದೆ.
ಜಿರಳೆಗಳು ಕೂಡಾ ಅಸ್ತಮಾಕ್ಕೆ ಕಾರಣವಾಗಬಹುದು, ಜಿರಳೆಗಳ ಒಣಗಿದ ಮಲವನ್ನು ಉಸಿರಾಡಿದಾಗ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆಯಿದೆ’ ಎನ್ನುತ್ತಾರವರು.

ಸೌದೆ ಒಲೆಯನ್ನು ಬಳಸುವುದು ಅಪಾಯಕಾರಿ
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೆಷನ್ (ಎನ್‍ಸಿಬಿಐ) ನಡೆಸಿದ ಒಳಾಂಗಣ ವಾಯುಮಾಲಿನ್ಯದ ಕುರಿತಾದ ಅಧ್ಯಯನವೊಂದರ ಪ್ರಕಾರ ರೇಡಾನ್ (ಬಣ್ಣರಹಿತ, ವಾಸನೆಯಿಲ್ಲದ ಅನಿಲ), ಕಲ್ನಾರು, ಕೀಟನಾಶಕಗಳು, ಭಾರಲೋಹಗಳು, ಭಾಷ್ಪಶೀಲ ಸಾವಯವ ವಸ್ತುಗಳು, ಪರಿಸರ ತಂಬಾಕು ಹೊಗೆ ಮತ್ತು ದಹನ ಉತ್ಪನ್ನಗಳು ಮತ್ತು ಜೈವಿಕ ಇಂಧನಗಳು ಒಳಾಂಗಣ ಮಾಲಿನ್ಯಕಾರಕಗಳ ಪ್ರಮುಖ ಮೂಲಗಳಾಗಿವೆ.
ಜೈವಿಕ ಮಾಲಿನ್ಯಕಾರಕಗಳಾಗಿರುವ ಧೂಳು ಹುಳಗಳು, ಅಚ್ಚುಗಳು, ಪರಾಗಗಳು ಮತ್ತು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೋಂಕುಕಾರಕಗಳು, ಹಾಸಿಗೆಗಳು, ರತ್ನಗಂಬಳಿಗಳು ಮತ್ತು ಆರ್ದಕಗಳು (ಹ್ಯುಮಿಡೈಫರ್ಸ್) ಕೂಡಾ ಒಳಾಂಗಣವನ್ನು ಕಲುಷಿತಗೊಳಿಸುತ್ತದೆ ಎಂಬುದನ್ನು ಅಧ್ಯಯನ ಬಹಿರಂಗಗೊಳಿಸಿದೆ.

ಡಾ. ಪರಮೇಶ್ ಅವರ ಪ್ರಕಾರ ಮನೆಯ ಒಬ್ಬ ಸದಸ್ಯ ಧೂಮಪಾನಿಯಾಗಿದ್ದರೆ, ಆ ಮನೆಯ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆಯು ಮೂರುಪಟ್ಟು ಅಧಿಕವಾಗಿರುತ್ತದೆ. ಸೌದೆ ಒಲೆಯನ್ನು ಬಳಸುವುದು ಗಂಟೆಗೆ 400 ಸಿಗರೇಟ್ ಸೇದಿದಷ್ಟು ಅಪಾಯಕಾರಿ. ಕೃಷಿ ತ್ಯಾಜ್ಯಗಳನ್ನು ಮನೆಯೊಳಗೆ ಒಲೆಗೆ ಸೌದೆಯಾಗಿ ಬಳಸುವುದಾದರೆ ಆ ಮನೆಯ ಸದಸ್ಯರಿಗೆ ನ್ಯುಮೇನಿಯಾ ಬರುವ ಸಾಧ್ಯತೆಯು 10.5 ಪಟ್ಟು ಅಧಿಕವಾಗಿದೆ.

ಆರೋಗ್ಯದ ಮೇಲೆ ಪರಿಣಾಮ
ಎನ್‍ಸಿಬಿಐನ ಇನ್ನೊಂದು ಅಧ್ಯಯನ ಪ್ರಕಾರ ಅಗರಬತ್ತಿ ಮುಂತಾದ ಧೂಪದ್ರವ್ಯ ಪದಾರ್ಥಗಳಲ್ಲಿ ಪಿಎಂ ಮಟ್ಟದ ಕಣಗಳು, ಅನೇಕ ಸಾವಯವ ಸಂಯುಕ್ತಗಳು ಮತ್ತು ಅನಿಲಗಳಾದ ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‍ಗಳಿದ್ದು, ಇವುಗಳನ್ನು ಉಸಿರಾಡುವುದರಿಂದ ಉಸಿರಾಟ ಕ್ರಿಯೆಗೆ ತೊಂದರೆಯುಂಟಾಗುತ್ತದೆ.
ಬೆಂಗಳೂರಿನ ಸೆಂಟರ್ ಫಾರ್ ಸಯನ್ಸ್ ಸ್ಪಿರುಚ್ಯುಆಲಿಟಿ ಕೇಂದ್ರದ ಮಕ್ಕಳ ವೈದ್ಯ ಡಾ. ಶಶಿಧರ ಗಂಗಯ್ಯ ಅವರ ಪ್ರಕಾರ ಒಳಾಂಗಣ ವಾಯುಮಾಲಿನ್ಯದಿಂದ ಅಲ್ಪ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಲ್ಪಕಾಲಿಕ ಸಮಸ್ಯೆಗಳಾದ ಕಣ್ಣುಗಳಲ್ಲಿ ಸದಾ ನೀರು ಬರುವುದು (ವಾಟರಿ ಐಸ್), ತಲೆನೋವು, ಸೈನಸೈಟಿಸ್, ಅಲರ್ಜಿ, ಸೀನುವಿಕೆ, ಬ್ರಾಂಕೈಟಿಸ್, ತಲೆತಿರುಗುವಿಕೆ ಮತ್ತು ನ್ಯುಮೇನಿಯಾ ಹಾಗೂ ದೀರ್ಘಕಾಲಿಕ ಸಮಸ್ಯೆಗಳಾದ ಅಸ್ತಮಾ, ಅಲರ್ಜಿಕ್ ರೆನಿಟಿಸ್, ಹೃದಯ ಅಸ್ವಸ್ಥತೆಗಳು, ನರಗಳ ಅಸ್ವಸ್ಥತೆಯಂತಹ ಉಸಿರಾಟದ ಖಾಯಿಲೆಗಳಾಗಿವೆ.
“ನಗರದ ಮಕ್ಕಳು ಅಲರ್ಜಿಕ್ ರಿನಿಟಿಸ್, ಅಸ್ತಮಾ ಮತ್ತು ಉಬ್ಬಸಕ್ಕೆ ಗುರಿಯಾಗುತ್ತಿದ್ದಾರೆ. ಶ್ವಾಸಕೋಶದ ಅಂಗಗಳು ದುರ್ಬಲವಾಗಿರುವ ವೃದ್ಧರು ಹಾಗೂ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು, ಬ್ರಾಂಕೈಟಿಸ್ ಮತ್ತು ಜ್ವರಕ್ಕೆ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯವಾಗಿದೆ” ಎನ್ನುತ್ತಾರೆ ಅವರು.
ಡಾ. ಪರಮೇಶ್ ಅವರ ಪ್ರಕಟಗೊಂಡ ಅಧ್ಯಯನ ವರದಿಯೊಂದರ ಪ್ರಕಾರ `8% ದಷ್ಟು ಮಕ್ಕಳು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿದ್ದಾರೆ ಮತ್ತು 1% ದಷ್ಟು ಮಕ್ಕಳು ಅಬ್ಸಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಸಿಂಡ್ರೋಮ್‍ನಿಂದ ಬಳಲುತ್ತಿದ್ದಾರೆ. ಅಧ್ಯಯನ ಪ್ರಕಾರ ಈ ಮಕ್ಕಳು ನಿದ್ದೆಯಲ್ಲಿರುವಾಗ ಉಸಿರಾಟಕ್ಕಾಗಿ ಬಾಯಿ ತೆರೆದುಕೊಳ್ಳುತ್ತಿದ್ದಾರೆ ಮತ್ತು ಇಂತಹ ಉಸಿರಾಟದ ಅಡಚಣೆಯ ಸನ್ನಿವೇಶವು ಹೃದಯವೈಫಲ್ಯಕ್ಕೂ ಕಾರಣವಾಗಬಹುದು. ಅದಲ್ಲದೆ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ನೆನಪಿನ ಶಕ್ತಿಯಲ್ಲಿ ಕುಂಠಿತಗೊಳ್ಳಬಹುದು ಮತ್ತು ಚರ್ಮದ ದದ್ದುಗಳಿಗೂ ಇದು ಕಾರಣವಾಗಬಹುದು.
ವಿಜ್ಞಾನಿಗಳ ಸಲಹೆ – ನಿಮಗಿದು ಗೊತ್ತಿರಲಿ
ತಜ್ಞರ ಪ್ರಕಾರ ದೈನಂದಿನ ಗೃಹಬಳಕೆಯ ವಸ್ತುಗಳಿಂದಲೂ ಒಳಾಂಗಣ ವಾಯುಮಾಲಿನ್ಯ ಉಂಟಾಗಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಕಾಳಜಿ, ಅರಿವು, ಜಾಗೃತಿ ಅಗತ್ಯವಾಗಿದೆ ಎಂದು ಡಾ. ಪರಮೇಶ್ ಹೇಳುತ್ತಾರೆ. ಮನೆಯೊಳಗೆ ನಾಲ್ಕು ಗೋಡೆಗಳ ನಡುವೆ ಧೂಮಪಾನ ಮಾಡುವುದು ಹಾಗೂ ನೆಲಕ್ಕೆ ಹಾಗೂ ಗೋಡೆಗಳಿಗೆ ರತ್ನಗಂಬಳಿ ಅಳವಡಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಮನೆಯೊಳಗೆ ಒಳಾಂಗಣ ಸಸ್ಯಗಳನ್ನು ನೆಡಬೇಕು ಹಾಗೂ ಜಿರಳೆಗಳು ಬರುವುದನ್ನು ತಪ್ಪಿಸುವುದನ್ನು ನಿರ್ವಹಿಸುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು ಎಂದು ಅವರು ವಿವರಿಸುತ್ತಾರೆ.
ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಾದ ಡಾ. ಯಲ್ಲಪ್ಪ ರೆಡ್ಡಿ `ಮನೆಯನ್ನು ಆಗಿದ್ದಾಂಗ್ಗೆ ಶುಚಿಯಾಗಿಟ್ಟುಕೊಳ್ಳುವುದೆಂದರೆ ಧೂಳು, ಪರಾಗ, ಒಳಾಂಗಣ ಮಾಲಿನ್ಯಕಾರಕಗಳನ್ನು ತೆಗೆದುಹಾಕುವುದೂ ಕೂಡಾ ಅದರಲ್ಲಿ ಸೇರಿರಬೇಕು. ರಗ್ಗುಗಳು ಮತ್ತು ರತ್ನಗಂಬಳಿಗಳು ಬಹಳಷ್ಟು ಧೂಳನ್ನು ಸಂಗ್ರಹಿಸುತ್ತವೆಯಾದ್ದರಿಂದ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತಿರಬೇಕು. ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಸೊಳ್ಳೆ ಬತ್ತಿಗಳು, ಅಗರಬತ್ತಿ ಮತ್ತು ಇತರ ಶುಚಿಕಾರಕ ವಸ್ತುಗಳು ಅಪಾಯಕಾರಿಗಳಾಗಿದ್ದು, ಅವುಗಳನ್ನು ಬಳಸದೇ ಇರುವುದು ಉತ್ತಮ’ ಎಂದವರು ಸಲಹೆ ನೀಡುತ್ತಾರೆ.
ಒಳಾಂಗಣ ಮಾಲಿನ್ಯವನ್ನು ಪರಿಹರಿಸಲು ಜನರು ವಾಯು ಶುದ್ಧೀಕರಣ (ಏರ್‍ಫ್ಯೂರಿಫೈರ್ಸ್)ಗಳನ್ನು ಬಳಸುತ್ತಿದ್ದಾರೆ. ಅವುಗಳನ್ನು ಮಾರಾಟ ಮಾಡುವ ಕಂಪೆನಿಗಳ ಪ್ರಕಾರ ಅವು ಪರಿಣಾಮಕಾರಿಯಾಗಿವೆಯಾದರೂ ತಜ್ಞರ ಅಭಿಮತವೇ ಬೇರೆ. ಡಾ.ಮೊಯಿನ್ ಒಬೆಸಿಟಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ಕಾರ್ಲ್ ಮೆಹ್ತಾ ಅವರ ಪ್ರಕಾರ ಏರ್‍ಫ್ಯೂರಿಫೈರ್‍ಗಳು ಕೋಣೆಯಲ್ಲಿ ಅಡ್ಡವಾಗಿ ಗಾಳಿಯ ಚಲನೆಯಿದ್ದಾಗ ವಿಫಲವಾಗುತ್ತದೆ. ಮುಚ್ಚಿದ ಕೋಣೆಯಲ್ಲಿ ಹವಾನಿಯಂತ್ರಕಗಳು ಸಾಕಾಗುತ್ತವೆ. ಬೆಂಗಳೂರಿನಲ್ಲಿ ಏರ್‍ಫ್ಯೂರಿಫೈರ್‍ಗಳು ಪರಿಣಾಮಕಾರಿ ಸಾಧನಗಳಲ್ಲ ಮತ್ತು ಅವುಗಳು ಉಸಿರಾಟದ ಖಾಯಿಲೆಗಳನ್ನು ಬರದಂತೆ ತಡೆಯಲು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಆದಾಗ್ಯೂ, ಇಂತಹ ಸಾಧನಗಳು ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಪ್ರಯೋಜನಕಾರಿಯಾಗಬಹುದು ಎನ್ನುತ್ತಾರವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು