News Karnataka Kannada
Thursday, April 18 2024
Cricket
ಆರೋಗ್ಯ

ವಾಯುಮಾಲಿನ್ಯ: ಭ್ರೂಣ ಮತ್ತು ಅರಿವಿನ ಸಾಮರ್ಥ್ಯಕ್ಕೆ ಅಪಾಯ

Photo Credit :

ವಾಯುಮಾಲಿನ್ಯ: ಭ್ರೂಣ ಮತ್ತು ಅರಿವಿನ ಸಾಮರ್ಥ್ಯಕ್ಕೆ ಅಪಾಯ

ಬೆಂಗಳೂರು:  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವಂತೆಯೇ ಗರ್ಭಾವಸ್ಥೆಯಲ್ಲಿರುವ ಭ್ರೂಣದ ಮೇಲೂ ತೀವ್ರವಾದ ಅಪಾಯಗಳಿವೆ ಎಂದು ತಜ್ಞರು ಎಚ್ಚರಿಸುತ್ತಾರೆ. ಶಿಶುಗಳ ಅರಿವಿನ ಸಾಮರ್ಥ್ಯಕ್ಕೆ ತೊಂದರೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ತೀವ್ರವಾಗಿ ಏರಿಕೆ ಕಂಡಿದೆ ಎಂಬುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ನ ದಿವೆಚಾ ಸೆಂಟರ್ ಫಾರ್ ಕ್ಲೈಮೆಟ್ ಚೇಂಜ್‍ನ ಪ್ರಾಧ್ಯಾಪಕ, ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಹೆಚ್. ಪರಮೇಶ್ ಅವರ ಪ್ರಕಾರ `ವಾಹನಗಳ ಹೊರಸೂಸುವಿಕೆಯು ವಾತಾವರಣದಲ್ಲಿ ಸೀಸದ ಮಟ್ಟವನ್ನು ಸುಮಾರು 86% ನಷ್ಟು ಹೆಚ್ಚಿಸಿದೆ ಮತ್ತು ಇದು ಸೀಸದ ವಿಷಕ್ಕೆ ಕಾರಣವಾಗುತ್ತಿದೆ’.

`863 ಮಕ್ಕಳ ರಕ್ತದ ಮಾದರಿಯನ್ನು ಪರಿಶೀಲಿಸಿದಾಗ ಆ ಪೈಕಿ 25 ಶಿಶುಗಳಲ್ಲಿ 4.6% ರಷ್ಟು ಸೀಸದ ಮಟ್ಟವು ರಕ್ತದಲ್ಲಿರುವುದು ಕಂಡುಬಂದಿದೆ. ಶಿಶುಗಳು ಗರ್ಭಾವಸ್ಥೆಯಲ್ಲಿದ್ದಾಗ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡಿದ್ದರ ಪರಿಣಾಮದಿಂದ ಈ ರೀತಿಯ ಬೆಳವಣಿಗೆಗೆ ಕಾರಣವಾಗಿದ್ದು, ಇದು ಮುಂದೆ ಮಕ್ಕಳ ಅರಿವಿನ ಸಾಮಥ್ರ್ಯದ ಮೇಲೆ ಹಾನಿಗೆ ಕಾರಣವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್‍ಒ) ವರದಿಯ ಪ್ರಕಾರ “ಪಾದರಸವು ಬೆಳವಣಿಗೆ ಹಂತದಲ್ಲಿರುವ ನ್ಯೂರೋಟಾಕ್ಸಿಕೆಂಟ್ ಎಂದು ಗುರುತಿಸಲಾಗಿದ್ದು, ಇದು ಸಣ್ಣ ಮಕ್ಕಳು ಹಾಗೂ ಭ್ರೂಣಾವಸ್ಥೆಯಲ್ಲಿರುವ ಶಿಶುಗಳ ಮೆದುಳಿನ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತವೆಯೆಂಬುದು ಸಾಬೀತಾಗಿದೆ.

ನರಮಂಡಲ ಹಾಗೂ ಇತರ ಅಂಗಗಳು ಬೆಳವಣಿಗೆಯ ಹಂತದಲ್ಲಿರುವ ಈ ಸಮಯದಲ್ಲಿ ಪರಿಸರದಲ್ಲಿರುವ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ಸರಿಪಡಿಸಲಾಗದ ರೀತಿಯ ಹಾನಿಗೆ ಕಾರಣವಾಗಬಹುದು. ಇದು ರೋಗ ನಿರೋಧಕ ವ್ಯವಸ್ಥೆ, ಸಂತಾನೋತ್ಪತ್ತಿ, ನಡವಳಿಕೆ ಹಾಗೂ ಅರಿವಿನ ಮಾದರಿ ಮತ್ತು ಅಂಗಾಗಗಳ ಮುಂತಾದ ಅಗತ್ಯವಾದ ದೀರ್ಘಕಾಲದ ಬೆಳವಣಿಗೆಗೂ ಮಾರಕವಾಗಬಹುದು”.

ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ವಾಲಿಟಿಯ ಮಕ್ಕಳ ತಜ್ಞವೈದ್ಯ ಡಾ. ಶಶಿಧರ ಗಂಗಯ್ಯ ಅವರ ಪ್ರಕಾರ `ಗರ್ಭಿಣಿ ಮಹಿಳೆಯರು ನಿರಂತರವಾಗಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಭಾರಲೋಹಗಳಾದ ಸೀಸ, ಸತು, ಪಾದರಸ, ಆರ್ಸೆನಿಕ್ ಮತ್ತು ಕ್ರೋಮಿಯಂಗಳು ಮಗುವಿನ ಬೆಳವಣಿಗೆಯ ಮೇಲೆ ಜೆನೆಟಿಕ್ (ಅನುವಂಶಿಕ ಅಥವಾ ಜೀನ್ಸ್) ಹಾಗೂ ಎಪಿಜೆನಿಟಿಕ್ ಮಟ್ಟದಲ್ಲಿಯೇ ಅಡ್ಡಪರಿಣಾಮ ಉಂಟುಮಾಡುತ್ತದೆ.’

`ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಾದ ಬಿಡದಿ, ರಾಜಾಜಿನಗರ, ಪೀಣ್ಯ, ನೆಲಮಂಗಲ ಮತ್ತು ವೈಟ್‍ಫೀಲ್ಡ್ ಪ್ರದೇಶಗಳಲ್ಲಿ ಭಾರಲೋಹಗಳು ವ್ಯಾಪಕವಾಗಿ ಗಾಳಿಯಲ್ಲಿ ತುಂಬಿಕೊಂಡಿದೆ. ತ್ಯಾಜ್ಯ ಸುಡುವ ಸಂದರ್ಭದಲ್ಲಿ ಭಾರಲೋಹಗಳು ಸುಟ್ಟರೆ ವಿಷಕಾರಿ ಅನಿಲಗಳು ಗಾಳಿಯಲ್ಲಿ ಸೇರಿಕೊಂಡು ಅಪಾಯಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಡಾ. ಗಂಗಯ್ಯ.

ಹೆಚ್ಚುತ್ತಿರುವ ಶಿಶುಗಳ ಮರಣ ಪ್ರಮಾಣ

ಮಕ್ಕಳ ಅರಿವಿನ ಸಾಮಥ್ರ್ಯಕ್ಕೆ ಪರಿಣಾಮ ಬೀರುವುದರ ಹೊರತಾಗಿಯೂ, ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಶಿಶುಗಳ ಸಾವಿಗೂ ಕಾರಣವಾಗಬಹುದು. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್‍ನ ಅಧ್ಯಯನ ವರದಿಯು ಪ್ರಸವಪೂರ್ವ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಪ್ರಸವನಂತರದ ಬೆಳವಣಿಗೆಯಲ್ಲಿ ಪರಿಣಾಮ ಬೀರುವ ಮಹತ್ವದ ವಿಷಯವನ್ನು ಕಂಡುಕೊಂಡಿದೆ. ಪ್ರಮುಖವಾಗಿ ಪಿಎಂ ಮಟ್ಟದ ಕಣಗಳು (ಸಣ್ಣ ಕಣಗಳು), ಸಲ್ಫರ್ ಡೈಆಕ್ಸೈಡ್, ಆಕ್ಸೈಡ್ಸ್ ಆಫ್ ನೈಟ್ರೋಜನ್, ಓಝೋನ್ ಮತ್ತು ಕಾರ್ಬನ್ ಮೋನಾಕ್ಸೈಡ್‍ಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗುತ್ತವೆ.

“ಗರ್ಭಿಣಿಯರು ಪಿಎಂ ಮಟ್ಟದ ಕಣಗಳಿಗೆ ಒಡ್ಡಿಕೊಳ್ಳುವುದರಿಂದ ಕಡಿಮೆ ತೂಕದ ಮಕ್ಕಳ ಜನನಕ್ಕೂ ಕಾರಣವಾಗುತ್ತದೆ. ಇನ್ನು ಅತಿಸಣ್ಣ ಮಟ್ಟದ ಪಿಎಂ ಕಣಗಳಿಗೆ ಒಡ್ಡಿಕೊಳ್ಳುವುದರಿಂದ ಅವಧಿಪೂರ್ವ ಪ್ರಸವವಾಗುತ್ತದೆ ಎಂಬುದಕ್ಕೆ ಪುರಾವೆಗಳಿವೆ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಹಾಗೂ ನಂತರದ ಪಲಿತಾಂಶಗಳ ಬಗ್ಗೆ ಅಧ್ಯಯನಗಳಿಂದ ದೃಢಪಡಿಸಲಾಗಿದ್ದು, ಗರ್ಭಾವಸ್ಥೆಯಲ್ಲಿಯೇ ಮರಣಹೊಂದಿದ ಶಿಶು ಹೆರಿಗೆ ಮತ್ತು ಸಣ್ಣ ಗರ್ಭವಸ್ಥೆಯಲ್ಲಿಯೇ ಶಿಶು ಜನಿಸುವುದು, ನರಬೆಳವಣಿಗೆ, ಬಾಲ್ಯದ ಸ್ಥೂಲಕಾಯತೆ, ಶ್ವಾಶಕೋಶದ ಕಾರ್ಯಗಳು, ಎಎಲ್‍ಆರ್‍ಐ (ತೀವ್ರವಾದ ಕೆಳ ಶ್ವಾಸಕೋಶದ ಸೋಂಕು)ಗಳ ಮೇಲೆ ವಾಯುಮಾಲಿನ್ಯವು ತೀವ್ರವಾದ ಪರಿಣಾಮ ಬೀರುತ್ತದೆ” ಎಂಬುದನ್ನು ಅಧ್ಯಯನ ತಿಳಿಸಿದೆ.

ಡಾ. ಪರಮೇಶ್ ಅವರ ಅಧ್ಯಯನ ಪ್ರಕಾರ “ಪ್ರಸವಪೂರ್ವ ಅವಧಿಯಲ್ಲಿ ವಾಯುಮಾಲಿನ್ಯಕ್ಕೆ ತೀವ್ರವಾಗಿ ಒಡ್ಡಿಕೊಳ್ಳುವುದರಿಂದ ಐದು ವರ್ಷದ ಕೆಳಗಿನ 77% ಮಕ್ಕಳಲ್ಲಿ, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ 26% ಮಕ್ಕಳಲ್ಲಿ ಉಬ್ಬಸ ಕಾಣಿಸಿಕೊಳ್ಳುತ್ತಿದೆ.”

ಪಿಎಂ ಮಟ್ಟದ ಕಣಗಳನ್ನು ಉಸಿರಾಡುವುದರಿಂದ ಆಕ್ಸಿಡೇಟಿವ್ (ಉತ್ಕರ್ಷಣಶೀಲ) ರೋಗಗಳಿಗೆ ಕಾರಣವಾಗುತ್ತವೆ ಮತ್ತು ಇದರಿಂದ ಅಪಕ್ವ ಮರಣಗಳು ಸಂಭವಿಸುತ್ತವೆ ಎನ್ನುತ್ತಾರೆ ಗಂಗಯ್ಯ. ಆಕ್ಸಿಡೇಟಿವ್ ಹಂತವು ದೇಹದಲ್ಲಿ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ವಯಸ್ಕರ ಶ್ವಾಸಕೋಶದ ಸಾಮಥ್ರ್ಯವು ಮಕ್ಕಳಿಗಿಂತ 120 ಪಟ್ಟು ಹೆಚ್ಚಿರುವುದರಿಂದ ಮಕ್ಕಳ ಶ್ವಾಸಕೋಶದ ಕೊಳವೆಗಳಲ್ಲಿ ಅಡೆತಡೆಗಳು ಎದುರಾಗಿ ಅಪಾಯ ಸಂಭವಿಸುತ್ತದೆ ಎನ್ನುತ್ತಾರವರು.

“ಮಕ್ಕಳಲ್ಲಿ ಉಸಿರಾಟದ ಕೊಳವೆ ತುಂಬಾ ಚಿಕ್ಕದಾಗಿದ್ದು, ವಯಸ್ಕರಲ್ಲಿ ಇದು 20 ಮಿ.ಮೀ. ಆಗಿದ್ದು, ಮಕ್ಕಳಲ್ಲಿ ಇದು 6 ರಿಂದ 8 ಮಿಲಿಮೀಟರ್ ಆಗಿರುತ್ತದೆ. ವಾಯುಮಾಲಿನ್ಯವಿರುವ ವಾತಾವರಣದಲ್ಲಿ ವಯಸ್ಕರು ಹಾಗೂ ಮಕ್ಕಳ ಶ್ವಾಸಕೋಶದ ಕೊಳವೆಯು 4 ಮಿಲಿಮೀಟರ್‍ನಷ್ಟು ಮುಚ್ಚಿಕೊಳ್ಳುತ್ತದೆ. ಹೀಗಾಗಿ ಮಕ್ಕಳಲ್ಲಿ ಇದರ ಒತ್ತಡವು ಅಧಿಕಗೊಳ್ಳುತ್ತದೆ. ಮಕ್ಕಳು ಕಡಿಮೆ ಎತ್ತರ ಹೊಂದಿರುವುದರಿಂದ ವಾಹನಗಳ ಹೊರಸೂಸುವಿಕೆಗೆ ಒಡ್ಡಿಕೊಳ್ಳುತ್ತಾರೆ. ಈ ಮಟ್ಟದಲ್ಲಿ ಎಲ್ಲ ವಾಹನಗಳ ಹೊಗೆ ಅಥವಾ ಹೊರಸೂಸುವಿಕೆಯು ನಿರಂತರವಾಗಿ ಹೆಚ್ಚಿರುವುದರಿಂದ ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಓಝೋನ್ ಕೂಡಾ ಈ ಎತ್ತರಕ್ಕಿಂತ ಸ್ವಲ್ಪ ಮೇಲ್ಮೈಯಲ್ಲಿರುವುದರಿಂದ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ” ಎಂದು ಡಾ. ಗಂಗಯ್ಯ ವಿವರಿಸುತ್ತಾರೆ.

ಪರಿಸರವಾದಿ ಸಂದೀಪ್ ಅನಿರುದ್ಧನ್ ಅವರು ಉಸಿರಾಟದ ಖಾಯಿಲೆ ಬರದಂತೆ ತಡೆಯುವುದಕ್ಕೆ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯವೆಂದು ಸಲಹೆ ನೀಡುತ್ತಾರೆ. ಸಾರ್ವಜನಿಕ ಸಾರಿಗೆ, ಉಪನಗರ ರೈಲ್ವೇ, ಮೆಟ್ರೋ ವಿಸ್ತರಣೆ, ಬಸ್‍ಗಳಿಗೆ ಪ್ರತ್ಯೇಕ ದಾರಿ ಮತ್ತು ಖಾಸಗಿ ವಾಹನಗಳನ್ನು ಕಡಿಮೆ ಮಾಡುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸುಧಾರಣೆ ಸಾಧ್ಯವೆಂದು ಅವರು ಅಭಿಪ್ರಾಯಪಡುತ್ತಾರೆ.

(ಲೇಖಕರು ಮುಂಬಯಿ ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101reporters.com ನ ಸದಸ್ಯರು)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು