News Karnataka Kannada
Wednesday, April 24 2024
Cricket
ಆರೋಗ್ಯ

ರೋಗನಿರೋಧಕ ಶಕ್ತಿ ವೃದ್ಧಿಗೆ ದೊಡ್ಡಪತ್ರೆ ಸಹಕಾರಿ

Photo Credit :

ರೋಗನಿರೋಧಕ ಶಕ್ತಿ ವೃದ್ಧಿಗೆ ದೊಡ್ಡಪತ್ರೆ ಸಹಕಾರಿ

ಕೊರೋನಾ ಸೋಂಕು ಕಾಲಿಟ್ಟ ಬಳಿಕ ಎಲ್ಲರೂ ಭಯ ಬಿದ್ದಿದ್ದಾರೆ. ಇದನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಸರ್ಕಸ್ ಮಾಡುತ್ತಿದ್ದು, ಬಹಳಷ್ಟು ಮಂದಿ ಆಯುರ್ವೇದಿಕ್ ಗಿಡಮೂಲಿಕೆಗಳತ್ತ ಮುಖ ಮಾಡಿದ್ದಾರೆ. ವಿವಿಧ ಗಿಡಮೂಲಿಕೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದ್ದು, ಇದೀಗ ನಮಗೆ ನಮ್ಮ ಹಿತ್ತಲಲ್ಲೇ ಇರುವ ಗಿಡಗಳಲ್ಲಿರುವ ಔಷಧೀಯ ಮಹತ್ವ ಗೊತ್ತಾಗುತ್ತಿದೆ.

ಗಿಡಗಳಲ್ಲಿರುವ ಔಷಧಿಯನ್ನು ತಿಳಿದು ಅದನ್ನು ತಮ್ಮ ಮನೆಗಳ ಹಿತ್ತಲಲ್ಲಿ ಬೆಳೆಯುತ್ತಿದ್ದರು. ಇಂತಹ ಗಿಡಗಳ ಪೈಕಿ ದೊಡ್ಡಪತ್ರೆಯೂ ಒಂದಾಗಿದೆ. ಇದನ್ನು ಮನೆಯ ಹಿತ್ತಲಲ್ಲಿ ಬೆಳೆಯಲು ಕಾರಣವೂ ಇದೆ. ಅವತ್ತಿನ ಕಾಲದಲ್ಲಿ ಕಾಲಾರದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಇದು ಹೊಂದಿತ್ತು. ಇವತ್ತಿಗೂ ದೊಡ್ಡಪತ್ರೆ ಗಿಡಗಳು ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಕಂಡು ಬರುತ್ತದೆ. ಇದನ್ನು ಸಂಬಾರಬಳ್ಳಿ, ಸಾವಿರ ಸಂಬಾರ(ಅಜವಾನದೆಲೆ), ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುವುದನ್ನು ನಾವು ಕಾಣಬಹುದು. ಇದು ನೆಲದ ಮೇಲೆ ಪೆÇದೆಯಾಗಿ ಬೆಳೆಯುತ್ತದೆ. ಎಲೆಗಳು ಹಸಿರಾಗಿ, ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಲೆಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆ.

ಸುವಾಸನೆ ಹೊಂದಿರುವ ದೊಡ್ಡಪತ್ರೆ ವಿಟಿಸ್ ಇಂಡಿಕಾ ಎಂಬ ಸಸ್ಯವರ್ಗಕ್ಕೆ ಸೇರಿದೆ. ಜ್ಯೇಷ್ಠದಿಂದ ಭಾದ್ರಪದದವರೆಗೆ ಎಲೆಗಳು ಹುಲುಸಾಗಿ ಬೆಳೆದಿರುತ್ತವೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮನೆಗಳಲ್ಲಿ ಹೂಕುಂಡಗಳಲ್ಲಿ ಇದನ್ನು ಬೆಳೆಸಬಹುದಾಗಿದೆ.

ದೊಡ್ಡಪತ್ರೆ ಮನೆಯ ಹಿತ್ತಲಿನಲ್ಲಿ ನೆಟ್ಟು ಬೆಳೆಸುವುದರಿಂದ ಏನು ಉಪಯೋಗ ಎಂಬುವುದನ್ನು ನೋಡುವುದಾದರೆ, ಇದನ್ನು ಮಕ್ಕಳಲ್ಲಿ ಕಂಡು ಬರುವ ಉಬ್ಬಸ ಕಫಗಳ ನಿವಾರಣೆಗೆ ಬಳಸಬಹುದಂತೆ ಅದು ಹೇಗೆಂದರೆ? ಗಿಡದಿಂದ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದು ಕೆಂಬೂದಿಯಲ್ಲಿ ಅಥವಾ ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬಹುದಾಗಿದೆ.

ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಕ್ಲೇಷ್ಮ ಬಿಡಿಸುವ ಗುಣವಿರುವುದರಿಂದ ಕಫ, ನೆಗಡಿಯಾಗಿ ಮೂಗು ಕಟ್ಟಿದರೆ ಎಲೆಗಳನ್ನು ಬಿಸಿ ಬೂದಿ ಇರುವ ಒಲೆಯಲ್ಲಿ  ಹಾಕಿಬಾಡಿಸಿ ಬಳಿಕ ಎಲೆಯನ್ನು ಹಿಂಡಿ ಅದರಿಂದ ಬರುವ ಮೂರ್ನಾಲ್ಕು ತೊಟ್ಟು ರಸವನ್ನು ಜೀರಿಗೆ ಕಷಾಯದಲ್ಲಿ ಹಾಕಿ ಕುಡಿದರೆ ಒಳ್ಳೆಯದಾಗುತ್ತದೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಬಿಗಿಯಾದ ಬಟ್ಟೆ ತೊಡುವುದರಿಂದ ಬೆವರಿನಿಂದ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ.

ಇನ್ನು ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲಾರಾ ಹತೋಟಿಗೆ ಬರುವುದು. ಶೀತ, ಕೆಮ್ಮಿಗೆ ಕಬ್ಬಿನ ರಸದೊಂದಿಗೆ  ಎಲೆಗಳ ರಸವನ್ನು ಬೆರೆಸಿ ಕುಡಿಯಬಹುದಾಗಿದೆ.

ತೆಂಗಿನ ಹಾಲಿನೊಂದಿಗೆ ಡೊಡ್ಡಪತ್ರೆ ಬೇರಿನ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಎನ್ನಲಾಗಿದೆ. ಇನ್ನು ಕುರುನಂತಹ ವೃಣಗಳಾದಾಗ ಬೇರನ್ನು ಜಜ್ಜಿ ಎಣ್ಣೆ ಮತ್ತು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚಬೇಕು.  ಇನ್ನು ಎಲೆಗಳನ್ನು ಚಟ್ನಿ, ತಂಬುಳಿ ಮೊದಲಾದವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರಿಂದ ಹಲವು ರೀತಿಯ ಉಪಯೋಗ ಪಡೆಯಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು