News Karnataka Kannada
Wednesday, April 24 2024
Cricket
ಆರೋಗ್ಯ

ಮೊಗದಲ್ಲಿ ಮೂಡುವ ಮೊಡವೆಗಳಿಗೆ ಭಯಪಡಬೇಕಾಗಿಲ್ಲ…!

Photo Credit :

ಮೊಗದಲ್ಲಿ ಮೂಡುವ ಮೊಡವೆಗಳಿಗೆ ಭಯಪಡಬೇಕಾಗಿಲ್ಲ...!

ಪ್ರತಿಯೊಬ್ಬರೂ ತಾವು ಅಂದವಾಗಿ ಕಾಣಬೇಕೆಂದು ಬಯಸುವುದು ಸಹಜ. ಮೊಗದ ಅಂದಕ್ಕಾಗಿ ಹಲವು ರೀತಿಯ ಮೇಕಪ್‍ಗಳನ್ನು ಮಾಡಿಕೊಂಡರೂ ಕೆಲವೊಮ್ಮೆ ಮೊಡವೆಗಳು ಅಂದಕ್ಕೆ ಕಪ್ಪು ಚುಕ್ಕೆಯಾಗಿ ಕಾಡುವುದುಂಟು.

ಸಾಮಾನ್ಯವಾಗಿ ಹರೆಯದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕೆಲವೊಂದು ಕ್ರಮಗಳ ಮೂಲಕ ನಿಯಂತ್ರಿಸದೆ ಉಗುರಿನಿಂದ ಕೆರೆಯುವುದು, ಚಿವುಟುವುದು ಮಾಡುತ್ತಾ ಹೋದರೆ ಅದು ಉಲ್ಭಣಗೊಂಡು ಕೆಲವೊಮ್ಮೆ ಮುಖದಲ್ಲಿ ಕಪ್ಪು ಕಲೆಯಾಗಿ ಉಳಿದುಹೋದರೂ ಅಚ್ಚರಿಪಡಬೇಕಾಗಿಲ್ಲ. ಇಷ್ಟಕ್ಕೂ ಮನುಷ್ಯರಲ್ಲಿ ಮೊಡವೆಗಳು ಮೂಡುವುದು ಸಾಮಾನ್ಯವಾದರೂ ಕೆಲವರನ್ನು ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುವುದಾದರೆ ನಮ್ಮ ಆಹಾರ ಪದ್ಧತಿ ಮತ್ತು ಲೈಫ್ ಸ್ಟೈಲ್ ಎಂದರೆ ತಪ್ಪಾಗಲಾರದು.

ಮೊಡವೆಗಳು ಕಾಣಿಸಿಕೊಳ್ಳುವಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವ್ಯತ್ಯಾಸವಿರಬಹುದು. ಇದಕ್ಕೆ ಮನುಷ್ಯನ ದೇಹ ಮತ್ತು ಆತನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಕೂಡ ಕಾರಣವಾಗಿರಬಹುದು. ಕೆಲವರಲ್ಲಿ ಚಿಕ್ಕದಾಗಿ ಹರಡಿಕೊಂಡಿದ್ದರೆ ಮತ್ತೆ ಕೆಲವರಲ್ಲಿ ಕುರುವಿನಂತೆ ದಪ್ಪದಾಗಿಯೂ ಮೂಡುತ್ತದೆ. ಹದಿಹರೆಯದವರ ಶರೀರದಲ್ಲಿ ಟೆಸ್ಪೊಸ್ಟಿರೋನ್ ಎಂಬ ಹಾರ್ಮೋನ್ ಹೆಚ್ಚಾಗಿ ಜಿಡ್ಡಿನಾಂಶವೂ ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮದ ಬ್ಯಾಕ್ಟೀರಿಯಾ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇನ್ನು ಸತ್ತ ಚರ್ಮದ ಜೀವಕೋಶಗಳು ಕೂದಲಿನ ರಂಧ್ರವನ್ನು ಆವರಿಸಿ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದಲೂ ಮೊಡವೆಗಳು ಉದ್ಭವವಾಗುತ್ತವೆ. ಇಂತಹ ಮೊಡವೆಗಳನ್ನು ಕೆಲವರು ಆಗಾಗ್ಗೆ ಚಿವುಟುವುದು, ಕೆರೆಯುವುದು ಮಾಡದೆ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಇನ್ನು ಈ ಮೊಡವೆಗಳ ಬಗ್ಗೆ ಹೇಳುವುದಾದರೆ ಮೊಡವೆಗಳು ಕಪ್ಪು, ಬಿಳಿ ಶಿರ ಮತ್ತು ಕೆಂಪು ಕಲೆಗಳನ್ನು ಹೊಂದಿರುತ್ತವೆ. ಈ ಕಪ್ಪು ಮತ್ತು ಬಿಳಿಶಿರಗಳು ಮೂಡಲು ಕೂದಲಿನ ಕೋಶಿಕಗಳು(ಫಾಲಿಕಲ್ಸ್) ಮುಚ್ಚಿಕೊಂಡು ಬಿಡುವುದರಿಂದಾಗಿ ದೇಹದ ಜಿಡ್ಡು ಚರ್ಮದ ಹೊರಮೈಗೆ ಬರಲಾಗದ ಕಾರಣದಿಂದಾಗಿ ಅಲ್ಲಿಯೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆಗ ಕಪ್ಪು ಶಿರ ಮತ್ತು ಬಿಳಿಶಿರದ ಮೊಡವೆಗಳು ಹೊರಬರುತ್ತವೆ. ಇದನ್ನು ಮೈಕ್ರೋಕಡೆಮನ್ ಎಂದು ಕರೆಯಲಾಗುತ್ತದೆ.

ಬಹಳಷ್ಟು ಹೆಣ್ಣುಮಕ್ಕಳು ಮೊಡವೆ ಎಂದಾಕ್ಷಣವೇ ಭಯಬೀಳುತ್ತಾರೆ. ಸುಂದರಿಯರಿಗೆ ಈ ಮೊಡವೆಗಳು

ಕಪ್ಪು ಚುಕ್ಕೆ ಎಂದರೂ ತಪ್ಪಾಗಲಾರದು, ಕೆಲವರು ಗಾಬರಿಯಿಂದ ಕೈಗೆ ಸಿಕ್ಕ ಕ್ರೀಮ್ ಹಾಕಿ ಅಯ್ಯೋ ಹಾಳಾದ ಪಿಂಪಲ್ಸ್ ಹೋಗಿಲ್ಲವೆಂದು ಗೊಣಗುವುದು ಕೂಡ ಇದೆ. ಹಾಗಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಕೆಲವೊಂದು ಸಲಹೆಗಳನ್ನು ವೈದ್ಯರು ನೀಡುತ್ತಾರೆ. ಅವರ ಪ್ರಕರ ಹದಿಹರೆಯದಲ್ಲಿ ಮೊಡವೆಗಳು ಬರುವುದು ಸಾಮಾನ್ಯ. ಅದಕ್ಕಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಖದಲ್ಲಿ ಮೂಡಿದ ಮೊಡವೆಯನ್ನು ಚಿವುಟುವುದು, ಕೆರೆಯುವುದು ಮಾಡಬೇಡಿ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ. ಉಲ್ಭಣಗೊಂಡರೆ ಚರ್ಮ ವೈದ್ಯರನ್ನು ಸಂಪರ್ಕಿಸಿ ಅವರ ಶಿಫಾರಸ್ಸಿನಂತೆ ಔಷಧೋಪಚಾರ ಮಾಡಿ.

ಕೆಲವೊಮ್ಮೆ ಸ್ವಚ್ಛತೆಯಿಲ್ಲದಾಗಲೂ ಮೊಡವೆಗಳು ಬರುವುದುಂಟು ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಖವನ್ನು ಚೆನ್ನಾಗಿ ಆಗಾಗ್ಗೆ ತೊಳೆದು ಜಿಡ್ಡಿನಾಂಶ ಮುಖದಲ್ಲಿರದಂತೆ ಕನಿಷ್ಟ ದಿನಕ್ಕೆ ಮೂರು ಬಾರಿಯಾದರೂ ಶುದ್ಧ ನೀರಿನಿಂದ ತೊಳೆಯಿರಿ. ಕೊಬ್ಬಿನಾಂಶವಿರುವ ಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಚಾಕೋಲೆಟ್‍ಗಳ ಅತಿಯಾದ ಸೇವನೆ ಕಡಿಮೆ ಮಾಡಿ. ಅದು ಸೋಂಕು ರೋಗವಲ್ಲ ಎಂಬುದು ನೆನಪಿರಲಿ. ಒಂದಷ್ಟು ಔಷಧಿ ಉಪಚಾರ, ಸ್ವಚ್ಛತೆಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹ ಮತ್ತು ಮುಖದ ಬಗ್ಗೆ ಕಾಳಜಿ ವಹಿಸಿದರೆ ಸಾಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು