ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಈ ಹಿಂದೆ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಇದೀಗ ಮತ್ತೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಬೆಳಕಿಗೆ ಬಂದಿದೆ.
ಆರೋಪಿ ಲೋಕೇಶ್ ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋದಲ್ಲಿ 22 ವರ್ಷದ ಯುವತಿಯ ಮೈಕೈ ಮುಟ್ಟಿ ಪರಾರಿಯಾಗಲು ಯತ್ನಿಸಿದ್ದ.
ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಆರೋಪಿ ಲೋಕೇಶ್ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.
ತನಿಖೆಯ ವೇಳೆ ಆರೋಪಿ ಮೇಲೆ ಈ ಹಿಂದೆ ಕೂಡ ಕೆಲ ಕೇಸ್ ಗಳಿತ್ತು. ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.