ಹೇಮಾ ವರದಿ ಬಿಡುಗಡೆ ಆಗಿ ಸದ್ದು ಮಾಡುತ್ತಿರುವಾಗಲೇ ಕೆಲ ದಿನದ ಹಿಂದೆ ಯುವತಿಯೊಬ್ಬಾಕೆ, ಮಲಯಾಳಂ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಕೇರಳದ ಎರ್ನಾಕುಲಂನ ಒನ್ನುಕುಲ್ ನಿವಾಸಿಯಾಗಿದ್ದ ಯುವತಿ, ತಮಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಿವಿನ್ ಪೌಲಿ, ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತಿತರರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದರು. ಅತ್ಯಾಚಾರವು ದುಬೈನ ಹೋಟೆಲ್ ಒಂದರಲ್ಲಿ ನಡೆದಿತ್ತು ಎಂದಿದ್ದ ಯುವತಿ, ದೂರಿನಲ್ಲಿ ದಿನಾಂಕವನ್ನು ಸಹ ನಮೂದು ಮಾಡಿದ್ದರು.
ಆದರೆ ಇದೀಗ ನಟ ತಿರುಗೇಟು ನೀಡಿರುವ ನಟ ನಿವಿನ್ ಪೌಲಿ ಪೊಲೀಸರಿಗೆ ಕೆಲ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ. ಯುವತಿ ದೂರಿನಲ್ಲಿ ಉಲ್ಲೇಖಿಸಿರುವ ದಿನಾಂಕ ಅಸಲಿಗೆ ನಿವಿನ್ ಪೌಲಿ ದುಬೈನಲ್ಲಿ ಇರಲೇ ಇಲ್ಲ ಬದಲಿಗೆ ಭಾರತದಲ್ಲಿಯೇ ಇದ್ದರು. ಇದಕ್ಕೆ ಸಂಬಂಧಿಸಿದಂತೆ ತಮ್ಮ ಪಾಸ್ಪೋರ್ಟ್ ದಾಖಲೆಗಳ ಕಾಪಿಯನ್ನು ನಿವಿನ್ ಪೌಲಿ ಪೊಲೀಸರಿಗೆ ಒದಗಿಸಿದ್ದಾರೆ. ಮಾತ್ರವಲ್ಲದೆ ದೂರು ನೀಡಿರುವ ಯುವತಿಯ ವಿರುದ್ಧ ಪ್ರತಿದೂರು ನೀಡಿರುವ ನಿವಿನ್ ಪೌಲಿ, ಮಾನಹಾನಿ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದಾರೆ.
ನಿವಿನ್ ಪೌಲಿ, ಪಾಸ್ಪೋರ್ಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಯುವತಿ, ನಾನು ದೂರಿನಲ್ಲಿ ಯಾವುದೇ ದಿನಾಂಕವನ್ನು ನಮೂದು ಮಾಡಿಲ್ಲ ಆದರೆ ಮಾಧ್ಯಮಗಳೊಟ್ಟಿಗೆ ಮಾತನಾಡುವಾಗ ದಿನಾಂಕವೊಂದನ್ನು ಹೇಳಿದ್ದೆ, ಆದರೆ ನಾನು ಆ ದಿನಾಂಕವನ್ನು ತಪ್ಪಾಗಿ ಹೇಳಿದ್ದೆ. ಅರೆನಿದ್ದೆಯಲ್ಲಿದ್ದಾಗ ನಾನು ಆ ದಿನಾಂಕವನ್ನು ಹೇಳಿದ್ದೆ. ಈಗ ನಾನು ಬೇರೆ ದಿನಾಂಕವನ್ನು ಪೊಲೀಸರಿಗೆ ಹೇಳಿದ್ದೇನೆ. ಹೇಗೋ ನಿವಿನ್ ಪೌಲಿ ಪಾಸ್ಪೋರ್ಟ್ ನೀಡಿದ್ದಾರೆ. ನಾನೂ ಸಹ ನನ್ನ ಪಾಸ್ಪೋರ್ಟ್ ನೀಡಿದ್ದೇನೆ. ಪೊಲೀಸರು ತನಿಖೆ ಮುಂದುವರೆಸಲಿ’ ಎಂದಿದ್ದಾರೆ.