‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಕಾಶಿನಾಥ್ ಅವರು ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈಗ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಇದರಲ್ಲಿ ಅವರ ಗೆಟಪ್ ಡಿಫರೆಂಟ್ ಆಗಿದೆ. ಇದೊಂದು ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾ ಎಂಬ ಸುಳಿವು ಟೀಸರ್ ಮೂಲಕ ಸಿಕ್ಕಿದೆ. ಈ ಪ್ರಕಾರದ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಟೀಸರ್ನಿಂದ ಕುತೂಹಲ ಹೆಚ್ಚಾಗಿದೆ.
‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾಗೆ ಕಿರಣ್ ಎಸ್. ಸೂರ್ಯ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಹಲವು ವರ್ಷಗಳ ಕಾಲ ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ.
ಇದೊಂದು ಲವ್ ಕಂ ಥ್ರಿಲ್ಲರ್ ಶೈಲಿಯ ಸಿನಿಮಾ. ಆದರೆ ಕಥೆ ಅಷ್ಟಕೇ ಸೀಮಿತ ಅಲ್ಲವಂತೆ. ಕೊಲೆಯೊಂದರ ಸುತ್ತ ಕಥೆ ಜರುಗುತ್ತದೆ ಆದರೂ ಇದುವರೆಗೆ ನೋಡಿದ್ದು ನಿಜವೋ ಅಥವಾ ಸುಳ್ಳೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವ ರೀತಿಯಲ್ಲಿ ಸಿನಿಮಾ ಸಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಅಭಿಮನ್ಯು ಕಾಶಿನಾಥ್ ಅವರಿಗೆ ಜೋಡಿಯಾಗಿ ನಟಿ ಸ್ಫೂರ್ತಿ ಉಡಿಮನೆ ಅವರು ಅಭಿನಯಿಸಿದ್ದಾರೆ.
ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ ಮಾತ್ರವಲ್ಲದೇ ವಿಜಯಶ್ರೀ ಕಲಬುರ್ಗಿ, ಬಲರಾಜ್ ವಾಡಿ, ಅಯಾಂಕ್, ಶೋಭನ್, ರಿನಿ ಬೋಪಣ್ಣ, ರವಿತೇಜ, ಪ್ರದೀಪ್, ಕಿಶೋರ್, ಪ್ರಿಯಾ, ಅಶ್ವಿನಿ ರಾವ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಣವ್ ರಾವ್ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಸತ್ಯ ರಾಮ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಸದ್ಯ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ.
ಕಿಚ್ಚ ಸುದೀಪ್ ಅವರು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ವಾಸುಕಿ ವೈಭವ್, ಶ್ರೀಲಕ್ಷ್ಮಿ ಒಂದೊಂದು ಗೀತೆಗಳನ್ನು ಹಾಡಿದ್ದಾರೆ. ಎರಡು ಹಾಡುಗಳಿಗೆ ನಿರ್ದೇಶಕ ಕಿರಣ್ ಎಸ್. ಸೂರ್ಯ ಸಾಹಿತ್ಯ ಬರೆದಿದ್ದಾರೆ. ‘ಸುದರ್ಶನ ಆರ್ಟ್ಸ್’ ಬ್ಯಾನರ್ ಮೂಲಕ ಜತಿನ್ ಪಟೇಲ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಕಿರಣ್ ಎಸ್. ಸೂರ್ಯ ಅವರದ್ದು.