ಚೆನ್ನೈ: ಬಾಲಿವುಡ್ ನಟ ರಣದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಸಲ್ಲಿಕೆಯಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಚಿತ್ರತಂಡ, ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ‘ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್ ಪ್ರಶಸ್ತಿಗೆ ಸಲ್ಲಿಕೆಯಾಗಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಷನ್‌ಗೆ ಧನ್ಯವಾದಗಳು. ಇದೊಂದು ಅಧ್ಬುತ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಪೋಸ್ಟ್‌ಗೆ ಒಕ್ಕಣೆ ಬರೆದುಕೊಂಡಿದೆ.
ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ಜೀವನಾಧಾರಿತ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಇದೇ ವರ್ಷ ಮಾರ್ಚ್ 22ರಂದು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಟ ರಣದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಚಿತ್ರ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಭಾರತೀಯ ಚಲನಚಿತ್ರ ಫೆಡರೇಷನ್ ಸೋಮವಾರ ತಿಳಿಸಿದೆ.