ನಟ ಧ್ರುವ ಸರ್ಜಾ ಅವರಿಗೆ ಡಬಲ್ ಧಮಾಕಾ. ಇಂದು ಅವರ ಹುಟ್ಟುಹಬ್ಬದ ಸಂಭ್ರಮವಾದರೆ, ಬಹುನಿರೀಕ್ಷಿತ “ಮಾರ್ಟಿನ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕೂಡಾ ಇಂದು ನಡೆಯಲಿದೆ. ಈ ಮೂಲಕ ಧ್ರುವ ಖುಷಿಯಾಗಿದ್ದಾರೆ. ಇಂದು ದಾವಣಗೆರೆಯಲ್ಲಿ “ಮಾರ್ಟಿನ್’ ಚಿತ್ರದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಅಭಿಮಾನಿಗಳನ್ನು ಭೇಟಿಯಾದ ಧ್ರುವ ಸರ್ಜಾ ಇಂದು ದಾವಣಗೆರೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಲಿದ್ದಾರೆ.
“ಮಾರ್ಟಿನ್’ ಚಿತ್ರ ಅಕ್ಟೋಬರ್ 11ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಭರ್ಜರಿ ನಿರೀಕ್ಷೆ ಎಬ್ಬಿಸಿದ ಸಿನಿಮಾವಿದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟ್ರೇಲರ್, ಟೀಸರ್ ಹಿಟ್ಲಿಸ್ಟ್ ಸೇರುವ ಮೂಲಕ ಚಿತ್ರತಂಡದ ವಿಶ್ವಾಸ ಹೆಚ್ಚಿದೆ.
ಇನ್ನು, ಮಾರ್ಟಿನ್ ಚಿತ್ರದ ಮೊದಲ ಟ್ರೇಲರ್ ಇತ್ತೀಚೆಗೆ ಮುಂಬೈನಲ್ಲಿ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿ ಖುಷಿಯಾದ ವಿದೇಶಿ ಪತ್ರಕರ್ತರು, ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೇ, ತಮ್ಮ ದೇಶಗಳಲ್ಲೂ ಮಾರ್ಟಿನ್ಗೆ ವ್ಯಾಪಕ ಪ್ರಚಾರ ಹಾಗೂ ಬೆಂಬಲ ನೀಡುವ ಮಾತುಗಳನ್ನಾಡಿದರು. ಜತೆಗೆ ಮಾರ್ಟಿನ್ ಕಥೆಯ ಹುಟ್ಟು, ಬೆಳವಣಿಗೆ, ನಟನೆ, ಆ್ಯಕ್ಷನ್ ಸೇರಿದಂತೆ ಸಿನಿಮಾದ ಎಲ್ಲ ವಿಭಾಗಗಳ ತಮ್ಮ ಕುತೂಹಲದ ಪ್ರಶ್ನೆಗಳನ್ನು ಧ್ರುವ ಹಾಗೂ ಮಾರ್ಟಿನ್ ತಂಡದ ಮುಂದೆ ಇಟ್ಟರು.
Ad