ಚಂಡೀಗಢ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಒಂದಿಲ್ಲೊಂದು ವಿಷಯದಲ್ಲಿ ಸುದ್ಧಿಯಾಗುತ್ತಲೇ ಇರುತ್ತಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ‘ಎಮರ್ಜೆನ್ಸಿ’ ಸಿನಿಮಾವನ್ನು ನಟಿ ಕಂಗನಾ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಜೊತೆಗೆ ಇದರಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಆದರೆ ಅಂದುಕೊಂಡ ಸಮಯಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ಆಗಿಲ್ಲ. ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿನಿಮಾ ಸಿಲುಕುತ್ತಲೇ ಇದೆ. ಈ ನಡುವೆ ಹೊಸದೊಂದು ಟೆನ್ಶನ್ ಶುರುವಾಗಿದೆ.
ವಿವಾದಾತ್ಮಕ ಚಿತ್ರ ʻಎಮರ್ಜೆನ್ಸಿʼಗೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು, ಈ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ಚಿತ್ರಣವನ್ನು ತಪ್ಪಾಗಿ ಪ್ರದರ್ಶಿಸಲಾಗಿದೆ. ಜೊತೆಗೆ ಸಿಖ್ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಕಂಗನಾ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.