ನಟಿ ಸಮಂತಾ-ನಾಗ ಚೈತನ್ಯ ವಿಚ್ಛೇದನ ಹಾಗೂ ಅಕ್ಕಿನೇನಿ ಕುಟುಂಬದ ಬಗ್ಗೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ನೀಡಿರುವ ಹೇಳಿಕೆ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಜೂ ಎನ್ಟಿಆರ್, ನಾನಿ, ರಾಣಾ ದಗ್ಗುಬಾಟಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು, ಕೊಂಡ ಸುರೇಖಾ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟಿ ಸಮಂತಾ, ನಾಗ ಚೈತನ್ಯ ಅವರುಗಳು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಅಕ್ಕಿನೇನಿ ನಾಗಾರ್ಜುನ, ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಚಿವೆ ಸಮಂತಾ, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ‘ನಾಗಾರ್ಜುನಗೆ ಸೇರಿದ ಅಕ್ರಮ ಕಟ್ಟಡ ಎನ್ ಕನ್ವೆನ್ಷನ್ ಅನ್ನು ಬೀಳಿಸುವ ಬೆದರಿಕೆಯನ್ನು ಕೆಟಿಆರ್ ಹಾಕಿದ್ದರು, ಅದನ್ನು ಬೀಳಿಸಬಾರದೆಂದರೆ ಸಮಂತಾ ಅನ್ನು ನನ್ನ ಬಳಿ ಕಳಿಸು ಎಂದಿದ್ದ, ಅಂತೆಯೇ ನಾಗಾರ್ಜುನ ಸಮಂತಾ ಅನ್ನು ಕೆಟಿಆರ್ ಬಳಿ ಹೋಗಲು ಹೇಳಿದ್ದರು, ಆದರೆ ಸಮಂತಾ ಅದಕ್ಕೆ ಒಪ್ಪಿರಲಿಲ್ಲ, ಇದೇ ಕಾರಣಕ್ಕೆ ಸಮಂತಾಗೆ ನಾಗ ಚೈತನ್ಯ ವಿಚ್ಛೇದನ ನೀಡಿ ಹೊರ ಹಾಕಿದರು’ ಎಂದಿದ್ದರು. ಕೊಂಡ ಸುರೇಖಾರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.