ಮುಂಬೈ: ನಟ ಆಮಿರ್ ಖಾನ್ ಅವರು ನಿರ್ಮಾಪಕನಾಗಿ ಸಾಮಾಜಿಕ ಕಳಜಳಿ ಇರುವಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈ ವರ್ಷ ಅವರು ನಿರ್ಮಾಣ ಮಾಡಿದ ‘ಲಾಪತಾ ಲೇಡೀಸ್’ ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿತು. ಈ ಸಿನಿಮಾಗೆ ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಹೊಸ ಕಲಾವಿದರು ಮುಖ್ಯಭೂಮಿಕೆ ನಿಭಾಯಿಸಿರುವ ‘ಲಾಪತಾ ಲೇಡೀಸ್’ ಸಿನಿಮಾಗೆ ಈಗ ಇನ್ನೊಂದು ವಿಶೇಷ ಗೌರವ ಸಿಗುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಇಂದು (ಆಗಸ್ಟ್ 9) ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಲಿಂಗ ಸಮಾನತೆ ಬಗ್ಗೆ ‘ಲಾಪತಾ ಲೇಡೀಸ್’ ಸಿನಿಮಾದಲ್ಲಿ ಹೇಳಲಾಗಿದೆ. ವಿಮರ್ಶಕರು ಈ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರಮಂದಿರದಲ್ಲಿ ತೆರೆಕಂಡ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿಯೂ ಈ ಸಿನಿಮಾ ಹೆಚ್ಚು ಜನರನ್ನು ತಲುಪಿತು. ಅನೇಕ ಸೆಲೆಬ್ರಿಟಿಗಳು ‘ಲಾಪತಾ ಲೇಡೀಸ್’ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಈಗ ಸುಪ್ರೀಂ ಕೋರ್ಟ್ನಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಇಂದು ಸಂಜೆ 4.15ರಿಂದ 6.20ರ ತನಕ ಸುಪ್ರೀಂ ಕೋರ್ಟ್ನ ಸಿ-ಬ್ಲಾಕ್ ಆಡಿಟೋರಿಯಂನಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ಪ್ರದರ್ಶನ ನಡೆಯುತ್ತಿದೆ
ಸುಪ್ರೀಂ ಕೋರ್ಟ್ ಜಡ್ಜ್ಗಳಿಗಾಗಿ, ಅವರ ಕುಟುಂಬದವರಿಗಾಗಿ, ಅಧಿಕಾರಿಗಳಿಗಾಗಿ ‘ಲಾಪತಾ ಲೇಡೀಸ್’ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದರಲ್ಲಿ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಭಾಗಿ ಆಗಿದ್ದಾರೆ. ಸುಪ್ರೀಂ ಕೋರ್ಟ್ನ 75ನೇ ವಾರ್ಷಿಕೋತ್ಸವದ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ‘ಲಾಪತಾ ಲೇಡೀಸ್’ ಸಿನಿಮಾ ಪ್ರದರ್ಶನ ಆಗುತ್ತಿದೆ.