ಚೆನ್ನೈ: ತಮಿಳು ನಟ ಜಯಂ ರವಿ ಖಾಸಗಿ ಜೀವನ ಈಗ ಸುದ್ದಿಗೆ ಗ್ರಾಸವಾಗಿದೆ. ಕೆಲವು ದಿನಗಳ ಹಿಂದಷ್ಟೆ ನಟ ಜಯಂ ರವಿ, ತಾವು ತಮ್ಮ ಪತ್ನಿ ಆರತಿ ದೂರಾಗುತ್ತಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜಯಂ ರವಿ ಪತ್ನಿ ಆರತಿ, ನನ್ನ ಒಪ್ಪಿಗೆ ಇಲ್ಲದೆ ಜಯಂ ರವಿ ವಿಚ್ಛೇದನ ಪ್ರಕಟಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅದಾದ ಬಳಿಕ ಜಯಂ ರವಿ ಹಾಗೂ ಆರತಿ ನಡುವೆ ಕಾನೂನು ಹೋರಾಟ ಪ್ರಾರಂಭವಾಗಿದೆ.
ಜಯಂ ರವಿಯ ಇನ್ಸ್ಟಾಗ್ರಾಂ ಖಾತೆಯನ್ನು ಆರತಿ ‘ಹೈಜಾಕ್’ ಮಾಡಿದ್ದರು. ಈ ವಿಷಯವನ್ನು ಹೇಳಿಕೊಂಡಿದ್ದ ಜಯಂ ರವಿ ಬಳಿಕ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ತಮ್ಮ ಸುಪರ್ಧಿಗೆ ಪಡೆದು ಮಾಜಿ ಪತ್ನಿಯ ಚಿತ್ರಗಳನ್ನು ಡಿಲೀಟ್ ಮಾಡಿದರು. ಆ ಬಳಿಕ ನೀಡಿದ್ದ ಹೇಳಿಕೆಯಲ್ಲಿ ತಮ್ಮ ಇಬ್ಬರು ಮಕ್ಕಳನ್ನು ತಮ್ಮ ವಶಕ್ಕೆ ಪಡೆಯಲು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಎಷ್ಟೇ ವರ್ಷಗಳಾದರೂ ಸಹ ನಾನು ಮಕ್ಕಳಿಗಾಗಿ ಹೋರಾಟ ಮಾಡುವೆ ಎಂದಿದ್ದರು.
ಇದೀಗ ಜಯಂ ರವಿ ತಮ್ಮ ಮಾಜಿ ಪತ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಆರತಿ, ಜಯಂ ರವಿ ಅವರನ್ನು ಅವರದ್ದೇ ಮನೆಯಿಂದ ಹೊರಗೆ ಹಾಕಿದ್ದು, ಮನೆಗೆ ಪ್ರವೇಶ ಮಾಡಲು ಅವಕಾಶ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಅಡ್ಯಾರ್ ಪೊಲೀಸ್ ಠಾಣೆಯಲ್ಲಿ ಜಯಂ ರವಿ ದೂರು ದಾಖಲಿಸಿದ್ದಾರೆ. ಚೆನ್ನೈನ ಇಸಿಆರ್ ರಸ್ತೆಯಲ್ಲಿ ಜಯಂ ರವಿಯ ಮನೆಯಿದ್ದು ಮನೆ ಹಾಗೂ ಅಲ್ಲಿರುವ ತಮ್ಮ ವಸ್ತುಗಳನ್ನು ತಮ್ಮ ವಶಕ್ಕೆ ಪಡೆಯಲು ಅವರು ಪೊಲೀಸರ ನೆರವು ಕೋರಿದ್ದಾರೆ.