ಮೈಸೂರು: ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಅಭಿಮಾನಿಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡು ಬಳಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಅವರು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರು ನಟ ಶ್ರೀಮುರಳಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಇದಾದ ಬಳಿಕ ಕೂರ್ಗಳ್ಳಿಯ ಮಾನಸಿಕ ಅಸ್ವಸ್ಥ ಮಹಿಳೆಯರ ವಸತಿ ಹಾಗೂ ಆರೈಕೆ ಕೇಂದ್ರವಾದ ಚಿಗುರು ಆಶ್ರಮದಲ್ಲಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡ ಅವರು ಆಶ್ರಮ ವಾಸಿಗಳಿಗೆ ಉಪಹಾರ ಬಡಿಸಿದರು.
ಮೈಸೂರಿನ ಟೀಮ್ ಶ್ರೀಮುರಳಿ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಹುಟ್ಟಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ಶ್ರೀಮುರಳಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಿಕೊಂಡರು. ಈ ವೇಳೆ ರೋರಿಂಗ್ ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಅವರು, ನಟ ದರ್ಶನ್ ಅವರಿಗೆ ಬೇಲ್ ದೊರೆತ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿ ಶ್ರೀಮುರಳಿ, ಕಾಲಾಯ ತಸ್ಮೈ ನಮಃ, ನಾನು ಈ ಹಿಂದೆಯೂ ಇದನ್ನೇ ಹೇಳಿದ್ದೆ. ಕೆಟ್ಟದ್ದು ಬರುವುದೇ ಒಳ್ಳೆಯ ದಾರಿಯಲ್ಲಿ ನಡೆಸೋಕೆ. ನಟ ದರ್ಶನ್ ಅವರು ಆಸ್ಪತ್ರೆಯಿಂದ ಬಂದ ಬಳಿಕ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.