News Karnataka Kannada
Thursday, April 25 2024
Cricket
ಮನರಂಜನೆ

ಭಾರತೀಯ ಸಿನೆಮಾ ಮತ್ತು ಸಾಧ್ಯತೆಗಳು

Photo Credit :

ಭಾರತೀಯ ಸಿನೆಮಾ ಮತ್ತು ಸಾಧ್ಯತೆಗಳು

ಅಂಕಿಅಂಶಗಳನ್ನು ಪರಿಶೀಲಿಸಿ ನೋಡಿದರೆ ಪ್ರತಿ ವರ್ಷ ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಚಲನಚಿತ್ರಗಳು ತಯಾರಾಗುತ್ತವೆ. ಅದಕ್ಕೆ ತಕ್ಕಂತೆ ಭಾರತೀಯ ಚಿತ್ರಗಳಿಗೆ ಪ್ರಪಂಚದಾದ್ಯಂತ ವೀಕ್ಷಕರಿದ್ದಾರೆ, ಮಾರುಕಟ್ಟೆಯಿದೆ. ಈ ಸ್ಥಿತಿ ಹಿಂದಿನಿಂದಲೂ ಇತ್ತು ಮತ್ತು ಕಳೆದೆರಡು ದಶಕಗಳಿಂದೀಚೆಗೆ ಭಾರತೀಯ ಚಿತ್ರಗಳಿಗೆ ದೇಶದ ಹೊರಗಿನ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಿದೆ. ಇದಕ್ಕೆ ಮುಖ್ಯ ಕಾರಣ ಮೊದಮೊದಲು ಅನಿವಾಸಿ ಭಾರತೀಯರು ಮಾತ್ರ ನಮ್ಮ ದೇಶದ ಚಿತ್ರಗಳನ್ನು ನೋಡುತ್ತಿದ್ದರಾದರೆ, ಇದೀಗ ವಿದೇಶಿಯರು ಕೂಡ ಅಪಾರ ಸಂಖ್ಯೆಯಲ್ಲಿ ನಮ್ಮ ಚಿತ್ರಗಳನ್ನು ರೂಡಿಯಂತೆ ನೋಡುತ್ತಾರೆ. ‌

ಚಲನಚಿತ್ರಗಳ ಬಂಡವಾಳ ಮತ್ತು ಚಿತ್ರಗಳಿಂದ ಬರುವ ಆದಾಯದ ಪ್ರಮಾಣದಲ್ಲಿ ಹಾಲಿವುಡ್ ನಮ್ಮಿಂದ ಎಷ್ಟೋ ಮುಂದಿದೆ. ಎಲ್ಲರಿಗೂ ತಿಳಿದಿರುವಂತೆ ಇದಕ್ಕೆ ಇಂಗ್ಲಿಷ್ ಭಾಷೆಗೆ ವಿಶ್ವದಾದ್ಯಂತ ಇರುವ ಹರಿವೇ ಕಾರಣ. ಇದಲ್ಲದೆ ತಾಂತ್ರಿಕವಾಗಿಯೂ ಕೂಡ ಹಾಲಿವುಡ್ ಚಿತ್ರಗಳು ಬೇರೆ ರಾಷ್ಟ್ರಗಳ ಚಿತ್ರಗಳಿಗಿಂತ ಉತ್ತಮವಾಗಿವೆ. ತಾಂತ್ರಿಕ ಗುಣಮಟ್ಟವನ್ನೇ ಮುಖ್ಯ ಮಾನದಂಡವಾಗಿಟ್ಟುಕೊಂಡು ಹಾಲಿವುಡ್ ಚಿತ್ರಗಳು ಎಲಾ ವಿಧದಲ್ಲೂ ನಮ್ಮ ಚಿತ್ರಗಳಿಗಿಂತ ಶ್ರೇಷ್ಠ ಎಂದು ಅಭಿಪ್ರಾಯ ಪಡುವಂಥವರು ನಮ್ಮ ದೇಶದಲ್ಲಿ ಕಡಿಮೆಯೇನಿಲ್ಲ. ಅದು ತಪ್ಪು. ಒಂದು ಚಲನಚಿತ್ರ ಹಲವಾರು ಚಟುವಟಿಕೆಗಳ ಸಮಾಗಮದಿಂದ ಮೂಡಿ ಬರುವ ಕಲಾಕೃತಿ ಅಥವಾ ವಸ್ತು. ಅವುಗಳಲ್ಲಿ ಮುಖ್ಯವಾಗಿ ನಮ್ಮ ನಟನಾ ಶೈಲಿ, ನಿರೂಪಣೆ ಮತ್ತು ಸಂಗೀತವನ್ನು ನಾವು ಹಾಲಿವುಡ್ ಅಥವಾ ಬೇರೆ ದೇಶಗಳ ಚಿತ್ರಗಳೊಡನೆ ಹೋಲಿಸುವುದು ಸಮಂಜಸವೆನಿಸುವುದಿಲ್ಲ.‌

ಈ ಚಟುವಟಿಕೆಗಳು ಆಯಾ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ಅವು ಸ್ವಾಭಾವಿಕವಾಗಿ ಭಿನ್ನತೆಯಿಂದ ಕೂಡಿರುತ್ತವೆ. ಈ ಭಿನ್ನತೆಗಳ ಬಗ್ಗೆ ಗಮನವಹಿಸಬೇಕಾಗಿರುವುದು ಹೋಲಿಕೆಯ ಪ್ರಮೇಯ ಬಂದಾಗ ಮಾತ್ರ. ಪರದೇಶೀಯ ಚಿತ್ರಗಳಿಂದ ಒಳ್ಳೆಯ ಅಂಶಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಹಾಗೆಯೇ ನಮ್ಮ ಚಿತ್ರಗಳ ವಿಶಿಷ್ಟತೆಗಳನ್ನು ಅವರು ಎರವಲು ಪಡೆಯುವುದು ಎಂದಿಗೂ ಒಂದು ಆರೋಗ್ಯಕರ ಬೆಳವಣಿಗೆಯೇ. ಈ ಪ್ರಕ್ರಿಯೆ ನಡೆಯುತ್ತದೆ ಕೂಡಎಷ್ಟರ ಮಟ್ಟಿಗೆ ಅಂದರೆ ನಮ್ಮ ನಿರ್ದೇಶಕರು ವಿದೇಶೀ ಚಿತ್ರಗಳಿಂದ, ಅದರಲ್ಲೂ ಹಾಲಿವುಡ್ ಚಿತ್ರಗಳಿಂದ, ತುಸು ಹೆಚ್ಚಾಗಿಯೆ ಪ್ರಭಾವಿತರಾಗಿರುತ್ತಾರೆ. ಹಾಲಿವುಡ್ ಚಿತ್ರಗಳಿಗಿರುವ ಜಾಗತಿಕ ಮಟ್ಟದ ವರ್ಚಸ್ಸಿನಿಂದ ಇದು ಸಹಜವೂ ಕೂಡ. ಆದರೂ ನಾವು ಭಾರತೀಯ ಚಿತ್ರ ಮಾರುಕಟ್ಟೆಯನ್ನು ಪ್ರಪಂಚದ ಕೆಲವು ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಇತರ ಐರೋಪ್ಯ ದೇಶಗಳ ಚಿತ್ರ ಮಾರುಕಟ್ಟೆಗಳೊಂದಿಗೆ ತುಲನೆ ಮಾಡಿ ನೋಡಿದರೆ, ನಾವು ಎಷ್ಟೋ ಮೇಲುಎಷ್ಟೋ ವಾಸಿ. ಆ ದೇಶಗಳಲ್ಲಿ ಹಾಲಿವುಡ್ಡಿನ ಚಿತ್ರಗಳು ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದ್ದಾವೆಂದರೆ, ಸ್ಥಳೀಯ ಚಿತ್ರ ಮಾರುಕಟ್ಟೆಗಳನ್ನೇ ಕಬಳಿಸಿ ಹಾಕಿ ಬಿಟ್ಟಿವೆ. ಎಷ್ಟೇ ಪ್ರಯತ್ನ ಪಟ್ಟರೂ ಆ ದೇಶಗಳಿಗೆ ಹಾಲಿವುಡ್ಡಿನ ಚಿತ್ರಗಳ ಪ್ರಭಾವದಿಂದ ಈ ವರೆಗೂ ಮುಕ್ತಿ ಸಿಕ್ಕಿಲ್ಲ.

 

ನಮ್ಮ ದೇಶದಲ್ಲಿ ಹಲವಾರು ಭಾಷೆಗಳಲ್ಲಿ ಚಿತ್ರಗಳು ತಯಾರಾಗುತ್ತಾವಾದರೂ ಮುಖ್ಯ ಚಿತ್ರೋದ್ಯಮಗಳೆಂದರೆ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರೋದ್ಯಮಗಳು, ಬೆಂಗಾಳಿ ಮತ್ತು ಬಾಲಿವುಡ್. ಈ ಆರೂ ಚಿತ್ರೋದ್ಯಮಗಳಲ್ಲಿ ಸರಾಸರಿ ವರ್ಷಕ್ಕೆ ನೂರು ಅಥವಾ ಅದಕ್ಕೂ ಮೇಲ್ಪಟ್ಟು ಚಿತ್ರಗಳು ನಿರ್ಮಿತಗೊಳ್ಳುತ್ತವೆ….ಅಂದರೆ ಪ್ರತಿ ಭಾಷೆಯ ಸುಮಾರು ಎರಡು ಚಿತ್ರಗಳು ಪ್ರತಿ ವಾರ ಬಿಡುಗಡೆಯಾಗುತ್ತವೆ. ಅವುಗಳಲ್ಲಿ ವ್ಯಾಪಾರಿ ದೃಷ್ಟಿಕೊನದಿಂದ ಯಶಸ್ವಿಯಾಗಿ ಹಿಟ್ಎನಿಸಿಕೊಳ್ಳುವ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಮತ್ತು ಹಿಟ್ ಚಿತ್ರಗಳು ಪ್ರೇಕ್ಷಕರ ಮನರಂಜನೆಯನ್ನೇ ತಮ್ಮ ಮುಖ್ಯ ಗುರಿಯನ್ನಾಗಿಸಿಕೊಂಡಿರುತ್ತವೆ. ಸನ್ನಿವೇಶ ಹೀಗಿರುವಾಗ ಚಲನಚಿತ್ರವೆಂದರೆ ಮನರಂಜನೆಯ ಒಂದು ಮಾಧ್ಯಮ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿಬಿಟ್ಟಿದೆ. ಆದರೆ ವಾಸ್ತವತೆಯೇನೆಂದರೆ ಒಂದು ಚಲನಚಿತ್ರ ಕೇವಲ ಮನರಂಜನೆಗಷ್ಟೇ ಸೀಮಿತಗೊಳ್ಳಬೇಕಾಗಿಲ್ಲ. ಏಕಕಾಲಕ್ಕೆ ಲಕ್ಷಾಂತರ ಜನರ ಭಾವನೆಗಳನ್ನು ಹಾಗು ವಿಚಾರಗಳನ್ನು ಪರಿಣಾಮಕಾರಿಯಾಗಿ ಸ್ಪರ್ಶಿಸಬಲ್ಲ, ರೂಪಿಸಬಲ್ಲ ಮತ್ತು ಪರಿವರ್ತಿಸಬಲ್ಲ ಸಾಧನ ಒಂದು ಚಲನಚಿತ್ರ. ಒಂದು ಚಲನಚಿತ್ರದ ಇಂಥ ಸಾಧ್ಯತೆಗಳನ್ನು ಪರಿಶೋಧಿಸುವ ನಿರ್ದೇಶಕರು ಕೂಡ ಇದ್ದಾರೆಆದರೆ ತುಂಬ ವಿರಳ. ಈ ಅಪರೂಪದ ನಿರ್ದೇಶಕರು ಒಂದು ಚಲಚಿತ್ರ ಕೇವಲ ಮನರಂಜನೆಯ ಚೌಕಟ್ಟನ್ನು ಮೀರಿ ನಿಲ್ಲಬಲ್ಲುದು ಎಂಬುದನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಸಾಬೀತು ಮಾಡಿ ತೋರಿಸುತ್ತಿರುತ್ತಾರೆ. ಅಂಥ ಚಿತ್ರಗಳನ್ನು ನಾವು ಆರ್ಟ್ (ಕಲಾತ್ಮಕ) ಸಿನೆಮಾ ಅಥವಾ ಆಫ್ ಬೀಟ್ ಸಿನೆಮಾ ಎಂದು ಕರೆಯುತ್ತೇವೆ.

ಒಂದು ರೀತಿಯಲ್ಲಿ ನೋಡಿದರೆ ಈ ಕಲಾತ್ಮಕ ಅಥವಾ ಆಫ್ ಬೀಟ್ ಚಿತ್ರಗಳ ಮಾದರಿಯನ್ನು ಹುಟ್ಟುಹಾಕಿದವರು ಸತ್ಯಜಿತ್ ರೇ ಎಂದೇ ಹೇಳಬಹುದು. 1955ರಲ್ಲಿ ಬಿಡುಗಡೆಯಾದ ರೇಯವರ ಮೊದಲ ಚಿತ್ರ ಬೆಂಗಾಳಿ ಭಾಷೆಯ ಪಥೆರ್ ಪಾಂಚಾಲಿ‘ — ವಿಶ್ವದಾದ್ಯಂತ ಮನ್ನಣೆ ಪಡೆಯಿತು1956ರ ಕಾನ್ ಚಿತ್ರೋತ್ಸವದಲ್ಲಿ ‘ಬೆಸ್ಟ್ ಹ್ಯೂಮನ್ ಡೂಕ್ಯುಮೆನ್ಟ್’ ಪ್ರಶಸ್ತಿಯನ್ನು ಪಡೆಯಿತು. ಮುಂದೆ ಸಾಲಾಗಿ ಬಂದ ಸತ್ಯಜಿತ್ ರೇಯವರ ಚಿತ್ರಗಳಾದ ಅಪರಾಜಿತೊ‘, ‘ಅಪುರ್ ಸಂಸಾರ್‘,’ಚಾರುಲತಮುಂತಾದಾದ ಅತ್ಯುತ್ತಮ ಚಿತ್ರಗಳು ವಿದೇಶಿ ಚಿತ್ರೋತ್ಸವಗಳಲ್ಲಿ ಭಾರತೀಯ ಚಿತ್ರಗಳೆಂದರೆ ಸತ್ಯಜಿತ್ ರೇಯವರ ಚಿತ್ರಗಳು ಎನ್ನುವಷ್ಟರ ಮಟ್ಟಿಗೆ ಅವೆರಡನ್ನು ಜೊತೆಜೊತೆಯಾಗಿ ಬೆಸುಗೆ ಹಾಕಿ ಬಿಟ್ಟಿದ್ದವು.

ಮುಂದೆ 70ರ ದಶಕದಲ್ಲಿ ಫಿಲ್ಮ್ ಆಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ದಿಂದ ತೇರ್ಗಡೆ ಹೊಂದಿ ಮುಂಚೂಣಿಗೆ ಬಂದ ಆಡೂರ್ ಗೋಪಾಲಕೃಷ್ಣನ್, ಜಿ. ಅರವಿಂದನ್, ಗಿರೀಶ್ ಕಾಸರವಳ್ಳಿ ಮತ್ತು ಜಾಹೀರಾತು ಲೋಕದಿಂದ ಬಂದ ಶ್ಯಾಂ ಬೆನೆಗಲ್ ಮುಂತಾದ ಪ್ರತಿಭೆಗಳಿಂದ ಭಾರತೀಯ ಕಲಾತ್ಮಕ ಚಿತ್ರಗಳು ಇನ್ನಷ್ಟು ಜನರನ್ನು ತಲುಪಿದವು. ಇವರ ಚಿತ್ರಗಳಷ್ಟೇ ಅಲ್ಲದೆ ಹೆಚ್ಚು ಕಡಿಮೆ ಎಲ್ಲ ಭಾಷೆಗಳಲ್ಲೂ ಕಲಾತ್ಮಕ ಚಿತ್ರಗಳು ಯಶಸ್ಸನ್ನು ಕಂಡವು. 80ರ ದಶಕದಲ್ಲಿ ಈ ಚಳುವಳಿ ಸ್ವಲ್ಪ ತಣ್ಣಗಾಯಿತು. ಇಷ್ಟೆಲ್ಲಾ ನಡೆದರೂ ಭಾರತದ ಕಮರ್ಷಿಯಲ್ ಚಿತ್ರಗಳು ವಿದೇಶದಲ್ಲಿ ಹೆಚ್ಚಿನ ಸದ್ದನ್ನೇ ಮಾಡಲಿಲ್ಲ. 50ರ ದಶಕದಲ್ಲಿ ರಾಜ್ ಕಪೂರ್ ಚಿತ್ರಗಳು ರಷ್ಯದಲ್ಲಿ ಕಂಡ ಯಶಸ್ಸು ಮತ್ತು 1957ರಲ್ಲಿ ಮದರ್ ಇಂಡಿಯಶ್ರೇಷ್ಠ ವಿಧೇಶಿ ಚಿತ್ರ ಆಸ್ಕರ್ ನ ಅಂತಿಮ ಐದು ಚಿತ್ರಗಳ ಪಟ್ಟಿಯಲ್ಲಿ ಆಯ್ಕೆಗೊಂಡದ್ದು ಈ ನಿಯಮಕ್ಕೆ ಅಪವಾದಗಳಂತೆ ನಡೆದ ಘಟನೆಗಳೆಂದೇ ಹೇಳಬೇಕು.

ಈ ಲೇಖನದ ಆರಂಭದಲ್ಲಿ ಹೇಳಿದಂತೆ ಇಂದು ಭಾರತೀಯ ಚಿತ್ರಗಳಿಗೆ ಪ್ರಪಂಚದಾದ್ಯಂತ ಮಾರುಕಟ್ಟೆ ಇದೆ. ಈ ಬದಲಾವಣೆಯಾದದ್ದು 90ರ ದಶಕದಲ್ಲಿ. ಆ ದಶಕದಲ್ಲಿ ಭಾರತೀಯ ಚಿತ್ರಗಳು ಅಧಿಕ ಸಂಖ್ಯೆಯಲ್ಲಿ ವಿದೇಶಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿದವು ಮತ್ತು ಮುಖ್ಯವಾಗಿ ಇಂಗ್ಲೆಂಡ್, ಅಮೇರಿಕ, ಕೆನಡ ದೇಶಗಳಲ್ಲಿ ಯಶಸ್ವಿಯಾಗಲಾರಂಭಿಸಿದವು. ಎಷ್ಟರ ಮಟ್ಟಿಗೆ ಅಂದರೆ 2002ನೇ ಇಸವಿಯಲ್ಲಿ ಸಂಜಯ್ ಲೀಲ ಭನ್ಸಾಲಿಯ ದೇವದಾಸ್ಚಿತ್ರದ ವಿಶೇಷ ಪ್ರದರ್ಶನದ ನಂತರ ಕಾನ್ ಚಿತ್ರೋತ್ಸವ ಕೂಡ ಭಾರತೀಯ ಚಿತ್ರಗಳ ಬಗ್ಗೆ ವಿಶಿಷ್ಟ ಆಸಕ್ತಿ ತೋರಿಸಲು ಶುರು ಮಾಡಿದೆ. ಹೋದ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರಗಳಿಗೆಂದೇ ಒಂದು ಪ್ರತ್ಯೇಕ ವಿಭಾಗವನ್ನು ಕಾಯ್ದಿರಿಸಲಾಗಿತ್ತು. ಎಲ್ಲರಿಗೂ ತಿಳಿದಿರುವ ಹಾಗೆ 2001ರ ಆಸ್ಕರ್ ಸ್ಪರ್ಧೆಯಲ್ಲಿ ತುಂಬ ಕಡಿಮೆ ಅಂತರದಲ್ಲಿ ಲಗಾನ್ಚಿತ್ರ ಶ್ರೇಷ್ಠ ವಿದೇಶಿ ಚಿತ್ರಪ್ರಶಸ್ತಿಯಿಂದ ವಂಚಿತಗೊಂದಿತ್ತು. ಆದರೆ ಒಬ್ಬ ವಿದೇಶಿ ನಿರ್ದೇಶಕನಿಂದ ನಿರ್ದೇಶಿಸಲ್ಪಟ್ಟರೂ ಭಾರತೀಯತೆಯ ಹೂರಣವನ್ನೇ ಹೊಂದಿರುವ ಸ್ಲಂ ಡಾಗ್ ಮಿಲಿಯನೆರ್‘ 2009ರಲ್ಲಿ ಹಲವಾರು ಆಸ್ಕರ್ ಗಳನ್ನು ಗೆದ್ದುಕೊಂಡಿತು. ಇವೆಲ್ಲ ಭಾರತೀಯ ಚಿತ್ರೋದ್ಯಮದ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯಂತ ಆರೋಗ್ಯಕರ ಬೆಳವಣಿಗೆಗಳೇ.

ಇಲ್ಲೊಂದು ಮಾತನ್ನು ಹೇಳಬೇಕು. ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳುವುದು ಅಥವಾ ಆಸ್ಕರ್ ಗೆಲ್ಲುವುದು ಇವೇ ನಮ್ಮ ದೇಶದ ಚಿತ್ರಗಳಿಗೆ ಹಿರಿಮೆಯ ಅತ್ಯುನ್ನತ ಮಾನದಂಡವಾಗಬೇಕಾಗಿಲ್ಲ; ಆದರೆ ಅವುಗಳಿಂದ ನಮ್ಮ ಚಿತ್ರಗಳಿಗೆ, ಕಲಾವಿದರ ಸಾಮರ್ಥ್ಯಕ್ಕೆ ಹೆಚ್ಚಿನ ಮನ್ನಣೆ ದೊರಕುತ್ತದೆ ಎಂದಾದರೆ ನಾವು ಈ ಚಿತ್ರೋತ್ಸವಗಳಿಂದ, ಸ್ಪರ್ಧೆಗಳಿಂದ ಹಿಂಜರಿಯುವುದು ಯಾವ ದೃಷ್ಟಿಯಿಂದಲೂ ಒಳಿತಲ್ಲ. ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಆಸ್ಕರ್ ಗೆದ್ದ ಮೇಲೆ ವಿಶ್ವದಾದ್ಯಂತ ಪ್ರಸಿದ್ದಿಯನ್ನು ಪಡೆಯಲಿಲ್ಲವೇ? ಒಟ್ಟಿನಲ್ಲಿ ಹೇಳುವುದಾದರೆ ಭಾರತೀಯ ಸಿನೆಮಾಕ್ಕಿದು ಪರ್ವ ಕಾಲಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ, ಕೆಲಸವಾಗಬೇಕಾಗಿದೆಜೊತೆಗೇ, ಅನೇಕ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಏನೇನು ಅಚ್ಚರಿಗಳು ಬರುವವಿದೆಯೋ ಕಾದು ನೋಡೋಣ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು