News Karnataka Kannada
Monday, April 22 2024
Cricket
ಮನರಂಜನೆ

‘ಪೆಪ್ಪೆರೆರೆ ಪೆರೆರೆರೆ’ ತುಳು ಚಿತ್ರ ಮನೆ ಮನೆಗಳಲ್ಲಿ ಬಿಡುಗಡೆ

Photo Credit :

‘ಪೆಪ್ಪೆರೆರೆ ಪೆರೆರೆರೆ’ ತುಳು ಚಿತ್ರ ಮನೆ ಮನೆಗಳಲ್ಲಿ ಬಿಡುಗಡೆ

ಮಡಿಕೇರಿ: ಕೋವಿಡ್ ಪರಿಸ್ಥಿತಿಯಿಂದ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರ ಕೂಡ ಹಲವು ಕಷ್ಟ, ನಷ್ಟಗಳನ್ನು ಅನುಭವಿಸಿದೆ. ಇದರ ನಡುವೆಯೂ ಸಾಮಾಜಿಕ ಜಾಲತಾಣದ ನೆರವಿನ ಮೂಲಕ ಸಿನಿಮಾವೊಂದಕ್ಕೆ ಮಾರುಕಟ್ಟೆಯನ್ನು ನಿರ್ಮಿಸುವ ಹೊಸ ಪ್ರಯತ್ನಕ್ಕೆ ಪ್ರಾದೇಶಿಕ ಭಾಷೆಯ ತುಳು ಸಿನಿಮಾ ರಂಗ ಕೈ ಹಾಕಿದೆ. ನಿಶಾನ್ ವರುಣ್ ಮೂವೀಸ್ ನಿರ್ಮಾಣದ ‘ಪೆಪ್ಪೆರೆರೆ ಪೆರೆರೆರೆ’ ಚಿತ್ರವನ್ನು ಓಟಿಟಿ (ಓವರ್ ದಿ ಟಾಪ್) ಆ್ಯಪ್ ಮೂಲಕ ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ.

ಮಡಿಕೇರಿಯ ಪತ್ರಿಕಾ ಭವನದಲ್ಲಿ  ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ ತಮ್ಮ ಹೊಸ ಪ್ರಯತ್ನದ ಬಗ್ಗೆ ಚಿತ್ರ ತಂಡದ ಪ್ರಮುಖರು ಮಾಹಿತಿ ನೀಡಿದರು.

ಚಿತ್ರ ನಿರ್ದೇಶಕ ವಿಜಯ್ ಶೋಭರಾಜ್ ಪಾವೂರ್ ಮಾತನಾಡಿ, ಅತ್ಯಂತ ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರರಂಗ, ಅನೇಕ ಸಿನಿಮಾಗಳನ್ನು ನಿರ್ಮಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಪ್ರಸ್ತುತ ನಿಶಾನ್ ವರುಣ್ ಮೂವೀಸ್ ‘ಪೆಪ್ಪೆರೆರೆ ಪೆರೆರೆರೆ’ ಚಿತ್ರವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಕೋವಿಡ್ ಕಾರಣದಿಂದ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಆದರೆ, ಸಿನಿಮಾವನ್ನು ಸಿನಿ ಪ್ರಿಯರಿಗೆ ತಲುಪಿಸಲೇ ಬೇಕೆನ್ನುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಚಿತ್ರ ತಂಡ ಓಟಿಟಿ ಆ್ಯಪ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಿ ಪ್ರದರ್ಶನ ನೀಡಲು ತಯಾರಿ ನಡೆಸಿದೆ. ಚಿತ್ರ ಡಿ.18 ರಂದು ಬೆಳಗ್ಗೆ 10.52 ಗಂಟೆಗೆ ಬಿಡುಗಡೆಯಾಗಲಿದ್ದು, ಮೂರು ದಿನಗಳ ಒಳಗಾಗಿ ಚಿತ್ರವನ್ನು ಒಮ್ಮೆ ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಚಿತ್ರವನ್ನು ನೋಡಲು ಇಚ್ಛಿಸುವವರು 249 ರೂ.ಗಳ ಕೂಪನ್‍ನ್ನು ಪಡೆದುಕೊಳ್ಳಬೇಕಾಗುತ್ತದೆ. ಕೂಪನ್ ಸಂಖ್ಯೆಯಾಧಾರಿತ ಒಟಿಪಿ ಸಂಖ್ಯೆ ಸಂಬಂಧಿಸಿದವರ ಮೊಬೈಲ್‍ಗೆ ಬರಲಿದ್ದು, ಆ ಮೂಲಕ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಪ್ರತಿ ತಿಂಗಳು ಈ ಕೂಪನ್‍ನ ಡ್ರಾ ನಡೆಯಲಿದ್ದು, ಸೆ.27 ರಂದು ನಡೆದ ಡ್ರಾದಲ್ಲಿ ಕೊಡಗಿನವರೊಬ್ಬರಿಗೆ ಬಹುಮಾನ ಲಭ್ಯವಾಗಿದೆ. ಡಿಸೆಂಬರ್‍ ವರೆಗೆ ನಡೆಯುವ ಡ್ರಾದಲ್ಲಿ ಲ್ಯಾಪ್ ಟಾಪ್, ಸ್ಕೂಟರ್ ಮತ್ತು ಕಾರನ್ನು ಬಹುಮಾನವನ್ನಾಗಿ ಇಡಲಾಗಿದೆ. 249 ರೂ.ನ ಕೂಪನ್ ಪಡೆದುಕೊಂಡವರು ತಮ್ಮ ಟಿವಿ, ಕಂಪ್ಯೂಟರ್, ಮೊಬೈಲ್‍ನಲ್ಲಿ ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಕುಟುಂಬದ ಸದಸ್ಯರೆಲ್ಲರು ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದಾದ ಅವಕಾಶ ಇದಾಗಿದ್ದು, ರಾಜ್ಯದಲ್ಲಿರುವ 2.50 ಕೋಟಿ ತುಳು ಜನರು ಮಾತ್ರವಲ್ಲದೆ, ಇತರ ಭಾಷಿಕರು ಕೂಡ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಲಿದ್ದಾರೆ ಎನ್ನುವ ವಿಶ್ವಾಸವನ್ನು ಶೋಭರಾಜ್ ವ್ಯಕ್ತಪಡಿಸಿದರು.

 ಚಿತ್ರ ನಿರ್ಮಾಪಕ ನಿಶಾಂತ್ ಭಂಡಾರಿ ಮಾತನಾಡಿ, ಸಿನಿಮಾದಲ್ಲಿರುವ ಟಪಾಂಗುಚಿ ‘ಅತಳ ವಿತಳ ಶೂರ’ ಹಾಡನ್ನು ಬಿಡುಗಡೆ ಮಾಡಿದಾಗ, ಏಳೇ ದಿನಗಳಲ್ಲಿ 10 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದರು. ಖ್ಯಾತ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು  ಒಂದು ಹಾಡಿಗೆ ಸಾಹಿತ್ಯ ನೀಡಿದ್ದಾರೆ ಎಂದು ತಿಳಿಸಿದರು. ಈ ಹಿಂದೆ ‘ಏಸ’ ಸಿನಿಮಾವನ್ನು ನಿರ್ಮಿಸಿ ಯಶಸ್ವಿಯಾಗಿರುವ ತಂಡದಿಂದಲೆ ಈ ಚಿತ್ರ ನಿರ್ಮಾಣಗೊಂಡಿದ್ದು, ಹೊಸ ಪ್ರಯೋಗ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

ನಮ್ಮ ನೂತನ ಪ್ರಯೋಗ ತುಳು ಚಿತ್ರರಂಗ ಮಾತ್ರವಲ್ಲದೆ, ಕೊಡವ ಮತ್ತಿತರ ಪ್ರಾದೇಶಿಕ ಭಾಷೆಗಳ ಚಿತ್ರ ತಂಡಗಳಿಗೂ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 1.50 ಲಕ್ಷ ಮಂದಿ ತುಳು ಭಾಷಿಕರಿದ್ದು, ಓಟಿಟಿಯಲ್ಲಿ ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾವನ್ನು ನೋಡುವ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಇತರ ಭಾಷಿಕರು ಕೂಡ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದರು.

  ಕೂಪನ್ ಮತ್ತು ಓಟಿಟಿಯ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಮಡಿಕೇರಿಯ ಪಿ.ಎಂ.ರವಿ ಮೊ.9972073295 ಹಾಗೂ ಚಿತ್ರತಂಡದ ಮೊ.9141162169, 7349506079, 8073014830.

‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾದಲ್ಲಿ ಖ್ಯಾತ ನಟರುಗಳಾದ ದೇವದಾಸ್ ಕಾಪಿಕಾಡ್, ಪಡೀಲ್, ಅರವಿಂದ್ ಬೋಳಾರ್, ವಾಮಂಜೂರು, ಬಂದಲೆ, ಮಿಜಾರ್, ಸಾಯಿಕೃಷ್ಣ, ದೀಪಕ್ ರೈ ಪಾಣಾಜೆ ಮತ್ತಿತರರು ಅಭಿನಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಪ್ರಕಾಶ್ ಭಂಡಾರಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಡಬ ದಿನೇಶ್ ರೈ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು