ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಸಂಸ್ಥೆಗಳ ಆವರಣದಲ್ಲಿ ಭಾನುವಾರ ವಿಶಿಷ್ಟ ರೀತಿಯ ಪ್ರಜಾಪ್ರಭುತ್ವ ದಿನಾಚರಣೆ ಸಂಪನ್ನಗೊಳ್ಳಲಿದೆ. ಈ ವರ್ಷ 42 ಮಂದಿ ಬಿಎಸ್‌ಎಫ್ ಯೋಧರೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8.50ರ ವೇಳೆಗೆ ಬಪ್ಪಳಿಗೆಯ ಅಂಬಿಕಾ ಆವರಣಕ್ಕೆ ಬಿಎಸ್‌ಎಫ್ ನ ಹಾಲಿ ಹಾಗೂ ಮಾಜಿ ಯೋಧರು ಆಗಮಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಎಲ್ಲಾ ಯೋಧರನ್ನು ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಗುತ್ತದೆ.
9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ತದನಂತರ ಯೋಧಗೌರವ ಕಾರ್ಯಕ್ರಮವನ್ನು ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳೇ ನಡೆಸಿಕೊಡಲಿದ್ದಾರೆ. ಆಗಮಿಸಿದ ಎಲ್ಲಾ ಯೋಧರನ್ನು ಗೌರವಿಸುವ ಕಾರ್ಯ ವಿದ್ಯಾರ್ಥಿಗಳಿಂದ ನಡೆಯಲಿದೆ. ತದನಂತರ ಯೋಧರೊಂದಿಗೆ ಉಪಾಹಾರಕೂಟ ನಡೆಯಲಿದೆ.
ದೇಶಭಕ್ತಿ, ಧರ್ಮಶಿಕ್ಷಣ, ಸಂಸ್ಕೃತಿ ಸಂಸ್ಕಾರಗಳ ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ಜ್ಞಾನದಾಸೋಹ ನಡೆಯುತ್ತಿದ್ದು, ಭಾರತೀಯ ಯೋಧರ ಬಗೆಗೆ ಅಪಾರ ಗೌರವಾದರಗಳನ್ನು ಸಂಸ್ಥೆ ಹೊಂದಿದೆ. ಜತೆಗೆ, ವಿದ್ಯಾರ್ಥಿಗಳಿಗೂ ಯೋಧರ ತ್ಯಾಗಗಳ ಬಗೆಗೆ ನಿತ್ಯ ತಿಳಿಹೇಳುವ ಕಾರ್ಯವೂ ಇಲ್ಲಿ ನಡೆಯುತ್ತಿದೆ.
ಪುತ್ತೂರಿನಲ್ಲಿ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕವನ್ನು ಸ್ಥಾಪಿಸಿದ ಹೆಮ್ಮೆಯೂ ಸಂಸ್ಥೆಗಿದೆ. ಜತೆಗೆ, ಪುತ್ತೂರು ಆಸುಪಾಸಿನ ಯಾವುದೇ ಊರುಗಳ ಯೋಧ ಸೈನ್ಯದಿಂದ ನಿವೃತ್ತನಾಗಿ ಬಂದರೆ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಿ, ಸನ್ಮಾನಿಸುವ ಕೆಲಸವನ್ನು ಅಂಬಿಕಾ ಸಂಸ್ಥೆಗಳು ನಡೆಸಿಕೊಂಡು ಬರುತ್ತಿವೆ.
ಬಿಎಸ್‌ಎಫ್ ಯೋಧರು ನಮ್ಮ ಗಡಿಗಳನ್ನು ನಿತ್ಯವೂ ಕಾಯುವವರು. ತಮ್ಮ ಕೌಟುಂಬಿಕ ಬದುಕನ್ನು ತ್ಯಾಗ ಮಾಡಿ ದೇಶಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಯುದ್ಧದ ಸಂದರ್ಭದಲ್ಲಿ ಸೈನ್ಯ ಕಾದಾಡಿದರೆ ಉಳಿದ ಸಂದರ್ಭದಲ್ಲಿ ಗಡಿಯ ಇಂಚಿಂಚನ್ನೂ ಬಿಎಸ್‌ಎಫ್ ಯೋಧರು ತಮ್ಮ ಕಣ್ಗಾವಲಿನಲ್ಲಿಟ್ಟಿರುತ್ತಾರೆ. ಅಂತಹ ಯೋಧರ ಜತೆಗೆ ಪ್ರಜಾಪ್ರಭುತ್ವದ ಆಚರಣೆ ನಮ್ಮ ಮಕ್ಕಳಿಗೆ ರೋಮಾಂಚನಕಾರಿ ವಿಷಯವೆನಿಸಿದೆ.