ಉಡುಪಿ: ಉಡುಪಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಸಂಶೋಧನ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಇಂದು ಬೆಳಿಗ್ಗೆ 11ಗಂಟೆಗೆ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಮಮತಾ ಕೆ.ವಿ. ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥ ಶ್ರೀಪಾದರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ದೀಪ ಪ್ರಜ್ವಲಿಸಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾಲೇಜಿನ ನೂತನ ಕಟ್ಟಡವು 90,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಅತ್ಯಾಧುನಿಕ ತರಗತಿ ಕೊಠಡಿಗಳನ್ನು ಒಳಗೊಂಡಿದೆ. ಪ್ರತ್ಯೇಕ ವಿಭಾಗೀಯ ಗ್ರಂಥಾಲಯ, ವಿಸ್ತಾರಿತ ವಿಭಾಗೀಯ ಸಂಗ್ರಹಾಲಯ, ಪ್ರಯೋಗಾಲಯ ಸೌಲಭ್ಯ, ಅತ್ಯಾಧುನಿಕ ಸ್ನಾತಕೋತ್ತರ ಉಪನ್ಯಾಸ ಸಭಾಂಗಣ, ಸುಸಜ್ಜಿತ ಕೌಶಲ್ಯ ಪ್ರಯೋಗಾಲಯ, ಹಸ್ತಪ್ರತಿ ಗ್ರಂಥಾಲಯವನ್ನು ಒಳಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್. ರಾವ್, ಡೀನ್ ಡಾ. ರಜನೀಶ್ ಗಿರಿ, ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ್ ಆರ್., ವೈದ್ಯರಾದ ಡಾ. ಚೈತ್ರಾ ಹೆಬ್ಬಾರ್, ಡಾ. ಶ್ರೀನಿಧಿ ಆರ್. ಇದ್ದರು.