ಉಡುಪಿ: ಉದ್ಯಾವರ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ನೂತನ ಕಟ್ಟಡವನ್ನು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಸರ್ವ ರೋಗಕ್ಕೂ ಆಯುರ್ವೇದದಲ್ಲಿ ಔಷಧವಿದೆ. ಆದರೆ ಆಧುನಿಕ ವೈದ್ಯ ಪದ್ಧತಿಯ ಮೋಹದಿಂದ ಆಯುರ್ವೇದವನ್ನು ಮರೆಯುತ್ತಿದ್ದೇವೆ. ಎಸ್‌ಡಿಎಂನಂತಹ ಸಂಸ್ಥೆಗಳ ಮೂಲಕ ಆಯುರ್ವೇದ ಚಿಕಿತ್ಸಾ ಪದ್ಧತಿ ಇನ್ನಷ್ಟು ಜನಪ್ರಿಯತೆ ಪಡೆಯುತ್ತಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಿಕ್ಷಣ, ಆರೋಗ್ಯ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜದ ನಿರ್ಮಾಣ ಸಾಧ್ಯ ಎಂಬುವುದನ್ನು ಡಾ. ವೀರೇಂದ್ರ ಹೆಗ್ಗಡೆಯವರು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಶಿಕ್ಷಣ, ವೈದ್ಯಕೀಯ, ಯೋಗ, ಭಜನೆ ಮೊದಲಾದ ಕ್ಷೇತ್ರಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯುರ್ವೇದ ಅತ್ಯಂತ ಪ್ರಾಚೀನ ವೈದ್ಯ ಪದ್ಧತಿ. ಹಿಂದೆಲ್ಲ ಯುದ್ಧ ಸಂದರ್ಭಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಇದೇ ಪದ್ಧತಿ ಮೂಲಕ ನೀಡುತ್ತಿದ್ದರು. ಆಯುರ್ವೇದವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು.
ಈ ಮೊದಲು ಆಯುರ್ವೇದವನ್ನು ಶೈಕ್ಷಣಿಕವಾಗಿ ಸರಿಯಾಗಿ ಕಲಿಯುವ ಅವಕಾಶ ಇರಲಿಲ್ಲ. ಈಗ ಯಾರು ಬೇಕಾದರೂ ಆಯುರ್ವೇದವನ್ನು ಕಲಿಯುವ ಅವಕಾಶಗಳಿವೆ. ಕೊರೊನಾ ಸಂದರ್ಭದಲ್ಲಿ ಆಯುರ್ವೇದ ಮಹತ್ತರ ಪಾತ್ರ ವಹಿಸಿತ್ತು. ಪ್ರಸ್ತುತ ಜನರಲ್ಲಿ ಆಯುರ್ವೇದದ ಬಗ್ಗೆ ಸಾಕಷ್ಟು ಅರಿವು ಮೂಡಿದೆ ಎಂದು ಹೇಳಿದರು.