Bengaluru 30°C

ಅಂಬಿಕಾ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ರಂಗಪ್ರವೇಶ

ಯಾವುದೇ ಕೆಲಸವನ್ನು ಮಾಡುತ್ತೇನೆಂದು ಬಾಯಿಯಲ್ಲಿ ಹೇಳುತ್ತಾ ಇರುವ ಬದಲಿಗೆ ಕೃತಿಯಲ್ಲಿ ಆಚರಿಸಿ ತೋರಿದಾಗ ವ್ಯಕ್ತಿತ್ವ ಬೆಳಗುತ್ತದೆ. ಹಾಗೆಂದು ನಾವು ಏನೇ ಸಾಧನೆ ಮಾಡಿದರೂ ಅದು ದೈವದ ಕೃಪೆಯೇ ಆಗಿರುತ್ತದೆ.

ಪುತ್ತೂರು: ಯಾವುದೇ ಕೆಲಸವನ್ನು ಮಾಡುತ್ತೇನೆಂದು ಬಾಯಿಯಲ್ಲಿ ಹೇಳುತ್ತಾ ಇರುವ ಬದಲಿಗೆ ಕೃತಿಯಲ್ಲಿ ಆಚರಿಸಿ ತೋರಿದಾಗ ವ್ಯಕ್ತಿತ್ವ ಬೆಳಗುತ್ತದೆ. ಹಾಗೆಂದು ನಾವು ಏನೇ ಸಾಧನೆ ಮಾಡಿದರೂ ಅದು ದೈವದ ಕೃಪೆಯೇ ಆಗಿರುತ್ತದೆ. ಆದ್ದರಿಂದ ನಮಲ್ಲಿರುವ ಅಹಂ ಅನ್ನು ಮೊದಲು ತೊರೆಯಬೇಕು ಎಂದು ಹಿರಿಯ ಸಾಮಾಜಿಕ ನೇತಾರ ದಂಬೆಕಾನ ಸದಾಶಿವ ರೈ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಹೆಚ್. ಮಾಧವ ಭಟ್ ಮಾತನಾಡಿ ನಾವು ಸಾಧಿಸಿದ್ದೇವೆ ಎಂದರೆ ಯಶಸ್ಸನ್ನು ಗಳಿಸಿದ್ದೇವೆ ಎಂದು ಅರ್ಥ, ಸೋಲನ್ನು ಅನುಭವಿಸಿದ್ದೇವೆ ಎಂದರೆ ಅದು ಸೋಲಲ್ಲ, ಬದಲಿಗೆ ನಾವು ಯಶಸ್ಸಿನ ಹಾದಿಯ ಹತ್ತಿರದ ಮೆಟ್ಟಿಲಿನಲ್ಲಿದ್ದೇವೆ ಎಂದುಕೊಳ್ಳಬೇಕು. ಎಲ್ಲವನ್ನು ಸಕಾರಾತ್ಮಕವಾಗಿ ಜೀವನದಲ್ಲಿ ಸ್ವೀಕರಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಉಸಿರು ನಿಂತ ಬಳಿಕವೂ ಜಗತ್ತು ನಮ್ಮನ್ನು ಸ್ಮರಿಸುವಂತಹ ಕೆಲಸವನ್ನು ನಾವು ಮಾಡಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ದಂಬೆಕಾನ ಸದಾಶಿವ ರೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ರಾಷ್ಟ್ರ ಮಟ್ಟದ ವಿದ್ಯಾಭಾರತಿ ಬಾಲವರ್ಗದ ಗಣಿತ ಮಾದರಿ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದ 6ನೇ ತರಗತಿಯ ಸ್ವಾನಿ ಜಿ., ರಾಷ್ಟ್ರೀಯ ಅಥ್ಲೇಟಿಕ್ಸ್ ಕೂಟದಲ್ಲಿ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿ, 4×100 ಮೀ ರಿಲೇಯಲ್ಲಿ ತೃತೀಯ ಸ್ಥಾನ ಪಡೆದ ಹಾಗೂ ಎಸ್‌ಜಿಎಫ್‌ಐನ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ 8ನೇ ತರಗತಿಯ ದೃಶಾನ ಸುರೇಶ ಸರಳಿಕಾನ, ಮೈಸೂರಿನ ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಕರ್ನಾಟಕ ತಾಳವಾದ್ಯ (ಮೃದಂಗ) ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ 10ನೇ ತರಗತಿಯ ಅದ್ವೆತ ಕೃಷ್ಣ, ಸ್ಕೌಟ್ & ಗೈಡ್ಸ್ನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದ 10ನೇ ತರಗತಿಯ ಹಿತಾಲಿ ಪಿ. ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.


ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಯುಕೆಜಿ ತರಗತಿಯ ಪುಟಾಣಿ ಇಶಾನ್ವಿ ಸ್ವಾಗತಿಸಿ, ಒಂದನೇ ತರಗತಿಯ ಅನ್ವಿತಾ ಹೆಚ್ ಪಿ. ವಂದಿಸಿದರು. 7ನೇ ತರಗತಿಯ ಅನ್ವಿತಾ, 9ನೇ ತರಗತಿಯ ನಿಹಾರಿಕಾ ಹಾಗೂ ಶಿಕ್ಷಕಿ ಗೌರಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ನಿರ್ದೇಶನದ, ಉಪನ್ಯಾಸಕ ಸತೀಶ್ ಇರ್ದೆ ಸಂಯೋಜನೆಯ ಶ್ರೀಕೃಷ್ಣ ಕಾರುಣ್ಯ, ಕೃಷ್ಣಲೀಲೆ, ಪಾಂಜಜನ್ಯ ಹಾಗೂ ನರಕಾಸುರ ಮೋಕ್ಷ ಯಕ್ಷಗಾನ ಪ್ರಸಂಗಗಳು ನಡೆದು ವಿದ್ಯಾರ್ಥಿಗಳು ರಂಗಪ್ರವೇಶಗೈದರು.


Nk Channel Final 21 09 2023