ಹುಣಸೂರು: ಮೈಕ್ರೋ ಫೈನಾನ್ಸ್ ನವರು ಸಾಲ ಮರುಪಾವತಿಸುವಂತೆ ನೀಡುತ್ತಿದ್ದ ಕಿರುಕುಳ ತಾಳಲಾರದೇ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಸಣ್ಣಕಾಳಯ್ಯನವರ ಪತ್ನಿ ಸುಶೀಲ (48) ಎಂಬ ಮಹಿಳೆಯ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಸಾವನಪ್ಪಿರುವ ನತದೃಷ್ಟೆ. ಈಕೆಗೆ ಪತಿ ಹಾಗೂ ಪುತ್ರ, ಪುತ್ರಿ ಇದ್ದಾರೆ. ಮೃತ ಸುಶೀಲ ಅವರು ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್ ರವರಿಂದ ಸಾಲ ಪಡೆದಿದ್ದು ಸಾಲದ ಮರುಪಾವತಿಯನ್ನು ಸಕಾಲದಲ್ಲಿ ಪಾವತಿ ಮಾಡುತ್ತ ಬಂದಿದ್ದಾರೆ.
ಆದರೆ ಈ ವಾರದ ಮರುಪಾವತಿಯನ್ನು ಪಾವತಿಸಲು ಸಾಧ್ಯವಾಗದ ಕಾರಣ ನಾಳೆ ಕಟ್ಟುತ್ತೇನೆ ಸಮಯ ಕೊಡಿ ಎಂದು ಕೇಳಿದ್ದಾರೆ. ಆದರೆ ಮರುಪಾವತಿಗೆ ಬಂದಿದ್ದ ಉಮೇಶ್ ಮತ್ತು ಆತನ ನಾಲ್ಕು ಮಂದಿ ಸಹಚರರು ಸುಶೀಲ ರವರಿಗೆ ಈಗಲೇ ಹಣ ಕೊಡು ಎಂದು ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ.
ಇದರಿಂದ ಮನನೊಂದ ಸುಶೀಲ ಕಾಳಿನ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಬಿದ್ದಿರುವುದನ್ನು ಕಂಡು ಮನೆಯವರು ಹುಣಸೂರು ಡಿ ದೇವರಾಜ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ಪ್ರಕರಣ ದಾಖಲಿಸಿದ್ದಾರೆ.