ಮೈಸೂರು: ಜಮೀನಿನಲ್ಲಿ ಮರ ಕಡಿದು ಮಾರಾಟ ಮಾಡುವ ವಿಚಾರಕ್ಕೆ ಸ್ವಂತ ತಮ್ಮ ಅಣ್ಣನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಾರಾಪುರ ಗುಂಡತ್ತೂರು ಗ್ರಾಮದಲ್ಲಿ ನಡೆದಿದೆ.
ಅಂತರಸಂತೆ ಹೋಬಳಿಯ ಕಾರಂಜಿನ ಗ್ರಾಮವಾದ ಕಾರಾಪುರ ಗುಂಡತ್ತೂರು ಗ್ರಾಮದಲ್ಲಿ ಜಮೀನಿನಲ್ಲಿ ಮರ ಕಡಿದು ಮಾರಾಟ ಮಾಡುವ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದು ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ತಮ್ಮ ಅಭಿಷೇಕ್ ನನ್ನ ಸ್ವಂತ ಅಣ್ಣ ಚೆಲುವರಾಜು ಎಂಬಾತನಿಗೆ ಗುಂಡು ಹಾರಿಸಿದ್ದಾನೆ.
ಅಭಿಷೇಕ್ ಗುಂಡಿನ ದಾಳಿ ಮಾಡಿದ ಪರಿಣಾಮ ಅಣ್ಣ ಚೆಲುವರಾಜ್ ಬಲಭಾಗದ ಕಾಲಿಗೆ 11 ಚರೆಕಾಳು ಗುಂಡುಗಳು ಹೊಕ್ಕಿವೆ. ಗಾಯಗೊಂಡ ಚೆಲುವರಾಜ್ ರಕ್ಷಣೆಗೆ ಧಾವಿಸಿದ ನೆರ ಹೊರೆಯ ರೈತರ ಮೇಲು ಗುಂಡು ಹಾರಿಸುವ ಬೆದರಿಕೆಯನ್ನು ಅಭಿಷೇಕ್ ಮಾಡಿದ್ದ ಎಂದು ಹೇಳಲಾಗಿದೆ.
ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.