ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿ ನಗನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನವೆಂಬರ್ 4ರಂದು ಚಿಲಕ ಮುರಿದು ಒಳಗೆ ಪ್ರವೇಶ ಮಾಡಿ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಬಶೀರ್ ಕೆ ಪಿ, @ ಆಕ್ರಿ ಬಶೀರ್, (44), ಅಲಪ್ಪಾಡ್ ನಿವಾಸಿ ಪ್ರಕಾಶ್ ಬಾಬು @ ಮಹಮ್ಮದ್ ನಿಯಾಝ್, ( 46), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಎಫ್. ಜೆ. ಮಹಮ್ಮದ್ ಇಸ್ಮಾಯಿಲ್( 53 ) ಬಂಧಿತ ಆರೋಪಿಗಳು.
ದೇವಸ್ಥಾನದ ಕಛೇರಿಯಲ್ಲಿರಿಸಿದ್ದ ಒಂದುವರೆ ಕೆ.ಜಿ ತೂಕದ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಜಲದ್ರೋಣ ಕಳ್ಳತನ ಮಾಡಿದ್ದಾರೆ. ಜೊತೆಗೆ ಗೊದ್ರೇಜ್ , ಕ್ಯಾಸ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ಹಣ ದೋಚಿದ್ದಾರೆ. ಸಿಸಿ ಕ್ಯಾಮರಾದ ಡಿ.ವಿಆರ್ ನ್ನು ಕೂಡ ಬಿಡದೇ ಕಳ್ಳರು ಎಗರಿಸಿದ್ದಾರೆ. ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.