ಪಶ್ಚಿಮ ಬಂಗಾಳ: ರಾಜಧಾನಿ ಕೋಲ್ಕತ್ತಾದ ಆರ್ಜಿ ಕರ್ ಹಾಸ್ಪಿಟಲ್ನಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಹೊರ ಬಂದಿರುವ ಪೋಸ್ಟ್ ಮಾರ್ಟಮ್ ರಿಪೋರ್ಟ್ ಅತ್ಯಾಚಾರಿಯ ಕ್ರೌರ್ಯದ ಮುಖವನ್ನು ತೆರೆದಿಟ್ಟಿದೆ. 31 ವರ್ಷದ ಯುವತಿಯನ್ನು ಕಿರಾತಕ ಹೇಗೆಲ್ಲಾ ಹಿಂಸಿಸಿದ ಅನ್ನೋ ಬೆಚ್ಚಿ ಬೀಳಿಸುವ ಅಂಶಗಳು ಈಗ ಬಯಲಾಗಿದೆ.
ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಚಾರಣೆ ವೇಳೆ ರಾತ್ರಿ ವೇಳೆ ಡ್ಯೂಟಿಗೆ ಬಂದಿದ್ದ ಟ್ರೈನಿ ಡಾಕ್ಟರ್ ಅನ್ನು ಹೇಗೆಲ್ಲಾ ಹಿಂಸಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಯ್ತು ಅನ್ನೋದರ ಡಿಟೇಲ್ಸ್ ಸಿಕ್ಕಿದೆ. ಮೂರು ಪುಟಗಳ ಶವ ಪರೀಕ್ಷೆ ವರದಿಯಲ್ಲಿ ಹಲವು ಅಂಶಗಳು ಬಯಲಾಗಿವೆ. ವಿಚಾರಣಾ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ರಾತ್ರಿ ಪಾಳೆಯದ ಡ್ಯೂಟಿಗೆ ಬಂದಿದ್ದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಮೊದಲು ನೋಡಿದಾಗ ಅವಳು ಅರೆನಗ್ನ ಸ್ಥಿತಿಯಲ್ಲಿದ್ದಳು. ನೀಲಿ ಬಣ್ಣದ ಮ್ಯಾಟ್ ಮೇಲೆ ಆಕೆಯ ಜೀನ್ಸ್ ಬಿದ್ದಿತ್ತು. ಅವಳ ಎಡಭಾಗದಲ್ಲಿ ಆಕೆಯ ಒಳ ಉಡುಪು ಬಿದ್ದಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲ ಬಾರಿ ಶವವನ್ನು ನೋಡಿದಾಗ ವೈದ್ಯೆಯ ಮೃತದೇಹದಲ್ಲಿ ಬಾಯಿ, ಕಣ್ಣು ಮತ್ತು ಖಾಸಗಿ ಭಾಗದಲ್ಲಿ ರಕ್ತಸ್ರಾವ ಆಗುತ್ತಿತ್ತು, ಅವಳ ತುಟಿಯ, ಹೊಟ್ಟೆ, ಎಡಗಾಲು, ಮುಖ ಹಾಗೂ ಬಲಗೈ ಉಗುರಿನ ಮೇಲೆ ಗಾಯದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎಲ್ಲಾ ಅಂಶಗಳು ಪೊಲೀಸರು ಅತ್ಯಾಚಾರ ನಡೆದ ಒಂದು ಗಂಟೆಯಲ್ಲಿಯೇ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಸಲ್ಲಿಕೆ ಮಾಡಿದೆ.
ಸದ್ಯ ವೈದ್ಯಕೀಯ ಪಿಜಿ ವಿದ್ಯಾರ್ಥೀನಿಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಕಾಲೇಜ್ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಯುವತಿಗೆ ನ್ಯಾಯಕೊಡಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈ ಮೀರದಂತೆ ಆರ್ಜಿ ಕರ್ ಹಾಸ್ಪಿಟಲ್ ಬಳಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅಗತ್ಯ ಬಿದ್ರೆ ಅವನನ್ನು ಗಲ್ಲಿಗೂ ಏರಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ.