ಅಸ್ಸಾಂ : ಅಪ್ರಾಪ್ತ ಮಗಳೊಬ್ಬಳು ಹೆತ್ತಮ್ಮನನ್ನೇ ಎಲೆಅಡಿಕೆ ಕುಟ್ಟುವ ಕಲ್ಲಿನಿಂದ (ಕುಟ್ಟಾಣಿ) ಹೊಡೆದು ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಹೀಗೆ ತಾಯಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕಿ ಉದಯೋನ್ಮುಖ ಟೆನ್ನಿಸ್ ಪ್ಲೇಯರ್ ಆಗಿದ್ದಳು ಎಂದು ತಿಳಿದು ಬಂದಿದೆ. ಯುವತಿಯ ತಂದೆ ಟೆನ್ನಿಸ್ ಕೋಚರ್ ಆಗಿದ್ದು, ಸಂಜೆ ಅವರು ಕೋಚಿಂಗ್ ನೀಡುವುದಕ್ಕಾಗಿ ಡ್ಯೂಟಿಗೆ ತೆರಳಿದ ನಂತರ ಈ ದುರ್ಘಟನೆ ಸಂಭವಿಸಿದೆ. ತಾಯಿ ಮಗಳಿಗೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಅಪ್ರಾಪ್ತ ಮಗಳು ತನ್ನ 40 ವರ್ಷ ಪ್ರಾಯದ ಹೆತ್ತಬ್ಬೆಯನ್ನು ಕುಟ್ಟಾಣಿಯಿಂದ ಹೊಡೆದು ಸಾಯಿಸಿದ್ದಾಳೆ.
ಗುವಾಹಟಿಯ ಚಚಲ್ ಪ್ರದೇಶದ ಪೂರ್ಣಿಮಾ ಮೆನ್ಸನ್‌ನಲ್ಲಿ ಬ್ಲಾಕ್ ಎನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಟೆನ್ನಿಸ್ ಕೋಚರ್ ಆಗಿದ್ದ ಅಪ್ಪ ಡ್ಯೂಟಿಗೆ ಹೋದ ನಂತರ ಶುಕ್ರವಾರ ಸಂಜೆ 7.30ರ ಸಮಯಕ್ಕೆ ಅಮ್ಮ ಮಗಳ ಮಧ್ಯೆ ವಾಗ್ವಾದ ಶುರುವಾಗಿದೆ. ಈ ವೇಳೆ ತೀವ್ರವಾಗಿ ಕುಪಿತಗೊಂಡಿದ್ದ ಬಾಲಕಿ ತನ್ನ ಹೆತ್ತಮ್ಮ ಎಂಬುದನ್ನು ಕೂಡ ಯೋಚಿಸದೇ ಕುಟ್ಟಾಣಿಯಿಂದ ಅಮ್ಮ ಮಂಜುದೇವಿ ಸಾಯುವವರೆಗೂ ಹೊಡೆದು ಕೊಂದೇ ಬಿಟ್ಟಿದ್ದಾಳೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಪ್ರಾಪ್ತ ಮಗಳನ್ನು ಬಂಧಿಸಿದ್ದಾರೆ. ಈಗ ಪೊಲೀಸ್ ಕಸ್ಟಡಿಯಲ್ಲಿರುವ ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ ಮೊದಲು ಏನು ನಡೆಯಿತು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.