ಮಂಗಳೂರು : ಹಳೆಯ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಕಾಸರಗೋಡು ಬಡಾಜೆಯ ಮೊಹಮ್ಮದ್ ಆಸೀಫ್ ಎಂಬವರ ಮೇಲೆ ತಲಪಾಡಿ ಗ್ರಾಮದ ಕೆಸಿರೋಡ್-ಉಚ್ಚಿಲ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ರಾತ್ರಿ ಮಾರಕಾಯುಧಗಳಿಂದ ದಾಳಿ ಮಾಡಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಇಡ್ಯ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು (24), ಪಡೀಲ್ ನಾರ್ಲದ ಸಚಿನ್ (24), ಪಜೀರ್ ಪಾದಲ್ ಕೋಡಿಯ ಕುಶಿತ್(18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮೊಹಮ್ಮದ್ ಆಸಿಫ್ ತನ್ನ ಮನೆಯವರ ಜೊತೆಯಲ್ಲಿ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿರುವಾಗ ಆರೋಪಿಗಳು ಇವರ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿರುವುದಾಗಿ ನ.9 ರಂದು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯ.ಎನ್.ನಾಯಕ್ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ. ಎಚ್.ಎನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳನ್ನು ನ.11ರಂದು ರಾತ್ರಿ 8 ಗಂಟೆಗೆ ದಸ್ತಗಿರಿ ಮಾಡಲಾಗಿರುತ್ತದೆ. ತನಿಖೆ ಪ್ರಗತಿಯಲ್ಲಿರುತ್ತದೆ ಎಂದು ಪೊಲೀಸ್ ಅಧಿಕಾರುಗಳು ಮಾಹಿತಿ ನೀಡಿದ್ದಾರೆ.