ಚಾಮರಾಜನಗರ: ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡದಿಂದ ವಿದ್ಯಾರ್ಥಿಯೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಕಾಲೇಜಿನವಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಣಿತ್(17) ಮೃತ ವಿದ್ಯಾರ್ಥಿ. ಎರಡನೇ ಮಹಡಿಯ ಕಿಟಕಿ ಬಳಿಯಿಂದ ಮಧ್ಯರಾತ್ರಿ 2 ಗಂಟೆ ವೇಳೆ ಬಿದ್ದು ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಮಣಿತ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮಧ್ಯೆ ರಾತ್ರಿ 2 ಗಂಟೆಯಲ್ಲಿ ಬಿದ್ದ ಮಣಿತ್ ನನ್ನು ಮರುದಿನ ಬೆಳಿಗ್ಗೆ 8 ಗಂಟೆಯಲ್ಲಿ ಸಹ ವಿದ್ಯಾರ್ಥಿಗಳು ಗಮನಿಸಿ ವಸತಿ ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಗಾಯಗೊಂಡು ನರಳುತ್ತಿದ್ದ ಮಣಿತ್ ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದೇ ಆವರಣದಲ್ಲಿ ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಪದವಿ ಪೂರ್ವ ಕಾಲೇಜಿನ ಪ್ರತ್ಯೇಕ ವಸತಿ ನಿಲಯಗಳಿವೆ. ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಮಣಿತ್ ಹೋದ ಉದ್ದೇಶವೇನು ಗೊತ್ತಿಲ್ಲ, ವಿದ್ಯಾರ್ಥಿನಿಯೋರ್ವಳ ಕೊಠಡಿಯ ಕಿಟಕಿ ಬಳಿಯಿಂದ ಮಣಿತ್ ಬಿದ್ದಿದ್ದಾನೆ. ಮಧ್ಯರಾತ್ರಿಯಲ್ಲಿ ಮಣಿತ್ ಗೆ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕೆಲಸವೇನಿತ್ತು..? ಮಧ್ಯರಾತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಅಕ್ರಮವಾಗಿ ಪ್ರವೇಶಿಸಿದ್ದು ಹೇಗೆ..?
ವಾಚ್ ಮೆನ್ ಗಳು ಗಮನಿಸಲಿಲ್ಲವೇ…? ಪ್ರಾಂಶುಪಾಲರು ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲವೇ…? ಯಾರು ಬೇಕಾದ್ರೂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಮಧ್ಯರಾತ್ರಿ ಪ್ರವೇಶಿಸಬಹುದೇ..?ಹಾಗಿದ್ದಲ್ಲಿ ಇಲ್ಲಿ ತಂಗಿರುವ ವಿದ್ಯಾರ್ಥಿಗಳ ರಕ್ಷಣೆ ಹೇಗೆ..? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಮಧ್ಯರಾತ್ರಿ ಬಿದ್ದು ನರಳಾಡುತ್ತಿದ್ದರೂ ಯಾರ ಗಮನಕ್ಕೂ ಬಂದಿಲ್ಲವೆಂದರೆ ಅಲ್ಲಿನ ವ್ಯವಸ್ಥೆ ಹೇಗಿದೆ..? ಎಂಬ ಅನುಮಾನಗಳು ಕಾಡುತ್ತಿವೆ. ಎರಡನೇ ಮಹಡಿ ಏರಿ ವಿಧ್ಯಾರ್ಥಿನಿ ಕೊಠಡಿ ಬಳಿ ತಲುಪಿದ ಕಾರಣಾವಾದ್ರೂ ಏನು…?
ವಿದ್ಯಾರ್ಥಿನಿಯರನ್ನ ಮಧ್ಯರಾತ್ರಿ ನೋಡುವ ಕೆಟ್ಟ ಚಟವೇ…? ಅಥವಾ ಪ್ರೇಮ ಪ್ರಸಂಗವೇ…? ತನ್ನಿಷ್ಟದಂತೆ ನಡೆಯಲಿಲ್ಲವೆಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡನೇ..? ಅಥವಾ ಆಕಸ್ಮಿಕವಾಗಿ ಜಾರಿ ಬಿದ್ದನೇ…? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕಿದೆ. ಬಡ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯದ ದೃಷ್ಟಿಯಿಂದ ಇಲ್ಲಿ ಪ್ರವೇಶ ಪಡೆಯುತ್ತಾರೆ. ಅವರ ರಕ್ಷಣೆ ಹೇಗೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.