ನಂಜನಗೂಡು: ಹೊಸ ವರ್ಷಾಚರಣೆ ಆಚರಿಸುವ ಮತ್ತಿನಲ್ಲಿ ಕುಡಿಯಲು ಹಣ ನೀಡದ ಹಿನ್ನಲೆ ವ್ಯಕ್ತಿಯೊಬ್ಬರನ್ನು ನಡು ರಸ್ತೆಯಲ್ಲಿ ಬಿಯರ್ ಬಾಟೆಲ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಂಜನಗೂಡಿನ ಸರಸ್ವತಿ ಕಾಲೋನಿಯಲ್ಲಿ ನಡೆದಿದೆ.
ಮಹದೇವನಗರದ ನಿವಾಸಿ ರಫೀಕ್(35) ಮೃತ ದುರ್ದೈವಿ. ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ ಸಲೀಂ ಹಾಗೂ ಈತನ ಸ್ನೇಹಿತ ಪರಾರಿಯಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ರಫೀಕ್ ರವರು ಸರಸ್ವತಿ ಕಾಲೋನಿಯಲ್ಲಿ ತಮ್ಮ ಮನೆಗೆ ತಡರಾತ್ರಿಯಲ್ಲಿ ನಡೆದು ಹೋಗುತ್ತಿದ್ದಾಗ. ನೀಲಕಂಠನಗರದ ನಿವಾಸಿ ಸಲೀಂ ತನ್ನ ಸ್ನೇಹಿತನ ಜೊತೆ ಬಂದು ಕುಡಿಯಲು ಹಣ ಕೊಡುವಂತೆ ರಫೀಕ್ ಗೆ ಕೇಳಿದ್ದಾನೆ.
ಹಣ ಕೊಡಲು ರಫೀಕ್ ನಿರಾಕರಿಸಿದ್ದಾರೆ. ಈ ವೇಳೆ ಸಲೀಂ ಹಾಗೂ ಸ್ನೇಹಿತ ಬಿಯರ್ ಬಾಟಲ್ ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ರಫೀಕ್ ರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ರಫೀಕ್ ಮೃತಪಟ್ಟಿದ್ದಾರೆ. ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.