ಉಡುಪಿ: ನಕ್ಸಲ್ ವಿಕ್ರಂ ಗೌಡನ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ಮನೆಯ ಮಾಲೀಕ ಜಯಂತ್ ಗೌಡರನ್ನು ಹೆಬ್ರಿ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿದರು.
ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಜಯಂತ್ ಗೌಡರನ್ನು ವಶಪಡಿಸಿಕೊಂಡು ಠಾಣೆಗೆ ಕರೆ ತಂದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಹಾಗೂ ಮಲೆಕುಡಿಯ ಮುಖಂಡರು ಠಾಣೆಗೆ ಆಗಮಿಸಿ ಠಾಣಾಧಿಕಾರಿಯೊಂದಿಗೆ ಚರ್ಚೆ ನಡೆಸಿದರು. ಜಯಂತ್ ಗೌಡ ಅಮಾಯಕ ಆತನಿಗೆ ಏನು ತಿಳಿದಿಲ್ಲ. ಅವರನ್ನು ಯಾಕೆ ಠಾಣೆಗೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದರು.
ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಆತನನ್ನು ಬಿಡುವ ತನಕ ನಾವು ಠಾಣೆಯಿಂದ ಕದಲುವುದಿಲ್ಲ ಎಂದರು. ಬಳಿಕ ಪೊಲೀಸರು ಜಯಂತ್ ಗೌಡರನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಯಂತ್ ಗೌಡ, ನಾನು ಮನೆ ಬಿಟ್ಟು ಮಗಳ ಮನೆಗೆ ಬಂದು 13 ದಿನ ಆಯಿತು. ಅಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ವಿಚಾರಣೆಯಲ್ಲಿ ಪೊಲೀಸರು ನಿಮಗೆ ಏನಾಯಿತು ಎಂದು ಕೇಳಿದರು. ನಾನು ಅದಕ್ಕೆ ನನಗೆ ಏನು ಆಗಿದೆ ಎಂದು ಗೊತ್ತಿಲ್ಲ ತಿಳಿಸಿದೆ. ಅದು ಬಿಟ್ಟು ಬೇರೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಅದಕ್ಕಾಗಿಯೇ ಅವರು ನನ್ನನ್ನು ಠಾಣೆಗೆ ಕರೆಸಿರುವುದು ಎಂದು ತಿಳಿಸಿದರು.