ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಚಾಕುವಿನಿಂದ ಮನೆಮಂದಿಗೆಲ್ಲ ಇರಿದು ಹುಚ್ಚಾಟವಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ಬುಧವಾರ ರಾತ್ರಿ ನಡೆದಿದೆ. ಗಾಯಗೊಂಡವರ ಪೈಕಿ ಒಬ್ಬರು ಮೃತಪಟ್ಟರೆ, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ ಫರ್ಮಾನ್ ಎಂಬಾತನೇ ಚಾಕುವಿನಿಂದ ಇರಿದು ಹುಚ್ಚಾಟವಾಡಿದ ಹಂತಕ. ಈತನ ಹುಚ್ಚಾಟಕ್ಕೆ ಸಹೋದರಿ ಐಮಾನ್ ಬಾನು(26) ಸ್ಥಳದಲ್ಲೇ ಮೃತಪಟ್ಟರೆ, ತಂದೆ ಸೈಯ್ಯದ್(60) ಮತ್ತು ಅತ್ತಿಗೆ ತಸ್ಲಿಮಾತಾಜ್(25) ಗಂಭೀರ ಗಾಯಗೊಂಡಿದ್ದಾರೆ. ಹಂತಕ ಫರ್ಮಾನ್ ತನ್ನ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದನು ಎನ್ನಲಾಗಿದೆ.
ಈ ವೇಳೆ ಆತನ ಸಹೋದರಿ ಐಮಾನ್ ಬಾನು ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ಏಕೆ ತಿನ್ನಿಸುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಫರ್ಮಾನ್ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಇದನ್ನು ತಡೆಯಲು ಬಂದ ತಂದೆ ಸೈಯ್ಯದ್ ಗೆ ಚುಚ್ಚಿದಲ್ಲದೆ, ಕೈಯ್ಯನ್ನು ಮುರಿದು ಹಾಕಿದ್ದಾನೆ.
ಇದೇ ವೇಳೆ ತಡೆಯಲು ಬಂದ ಅತ್ತಿಗೆ ತಸ್ಲಿಮಾತಾಜ್ ಅವರಿಗೂ ಚಾಕುವಿನಿಂದ ಇರಿದು ಇಡೀ ಮನೆಯನ್ನು ರಣಾಂಗಣ ಮಾಡಿದ್ದಾನೆ. ಗಂಭೀರ ಗಾಯಗೊಂಡ ಸಹೋದರಿ ಐಮಾನ್ ಬಾನು ಮೃತಪಟ್ಟರೆ ಗಾಯಗೊಂಡಿರುವ ಸೈಯ್ಯದ್ ಮತ್ತು ತಸ್ಲಿಮಾತಾಜ್ ಅವರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆದೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದ ಪೊಲೀಸರು ಆರೋಪಿ ಚಾಕು ಇರಿದ ಫರ್ಮಾನ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.