ರಾಯಚೂರು: ಬಾಡಿಗೆದಾರನೋರ್ವ ಮನೆಯ ಮಾಲಕಿಯನ್ನೇ ಕೊಲೆ ಮಾಡಿ ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ರಾಯಚೂರು ನಗರದ ಉದಯನಗರದಲ್ಲಿ ನಡೆದಿದೆ.
ಶೋಭಾ ಪಾಟೀಲ್ ( 63 ) ಎಂಬಾಕೆಯನ್ನ ಶಿವು ಬಂಡಯ್ಯಸ್ವಾಮಿ ಎಂಬಾತ ಹತ್ಯೆ ಮಾಡಿದ್ದಾನೆ. ಬೆಂಗಳೂರಲ್ಲಿ ವಾಸವಿದ್ದ ಶೋಭಾ ಪಾಟೀಲ್ ಅವರನ್ನ ಶಿವು ಬಂಡಯ್ಯಸ್ವಾಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಾಡಿಗೆ ಠೇವಣಿ ವಿಚಾರಕ್ಕೆ ತಕರಾರು ಶುರುವಾಗಿ ಕೊನೆಗೆ ಮನೆ ಮಾಲಕಿಯನ್ನೇ ಆತ ಕೊಲೆ ಮಾಡಿದ್ದಾನೆ.
ಮನೆ ಖಾಲಿ ಮಾಡು ಎಂದಿದ್ದಕ್ಕೆ ಒಬ್ಬರೇ ಇದ್ದಾಗ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕುಟುಂಬಸ್ಥರು ಶೋಭಾ ಪಾಟೀಲ್ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇರುವ ಕಾರಣ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದುಕೊಂಡಿದ್ದರು. ಆದರೀಗ ಬಾಡಿಗೆದಾರನೇ ಕೊಲೆ ಮಾಡಿದ್ದಾನೆ ಎಂಬ ಸತ್ಯ ತಿಳಿದೊಡನೆ ಅಚ್ಚರಿಗೊಂಡಿದ್ದಲ್ಲದೆ, ಕಣ್ಣೀರು ಹಾಕಿದ್ದಾರೆ.
ಶೋಭಾ ಪಾಟೀಲ್ ಕೂಡ ಮೂಲತಃ ರಾಯಚೂರಿನವರಾಗಿದ್ದು, ಬೆಂಗಳೂರಲ್ಲೇ ವಾಸವಿದ್ದರು. ಹಾಗಾಗಿ ಮನೆಯನ್ನ ಪರಿಚಯಸ್ಥನೇ ಆಗಿದ್ದ ಶಿವು ಬಂಡಯ್ಯಸ್ವಾಮಿಗೆ ಎಂಬಾತನಿಗೆ ಬಾಡಿಗೆ ನೀಡಿದ್ದರು. ಆದರೆ ಬಾಡಿಗೆ ವಿಚಾರದಲ್ಲಿ ತಕರಾರು ಆಗಿ ಮನೆಯೊಡತಿಯನ್ನೇ ಶಿವು ಕೊಂದಿದ್ದಾನೆ. ಪಶ್ಚಿಮ ಠಾಣಾ ಪೊಲೀಸರ ಕಾರ್ಯಕ್ಷಮತೆಯಿಂದ ಶೋಭಾ ಪಾಟೀಲ್ ಅವರ ಸಾವಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ. ಶಿವುವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.