ಚಾಮರಾಜನಗರ: ಅಕ್ರಮವಾಗಿ ಶ್ರೀಗಂಧದ 3 ತುಂಡು, 6 ಜೀವಂತ ಆಮೆಯನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಸಿಬ್ಬಂದಿ ಬಂಧಿಸಿರುವ ಘಟನೆ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪ್ರದೇಶ ಮದ್ದೂರು ವಲಯದಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿಯ ಕುಮಾರ್ ಆರ್ ಬಂಧಿತ ಆರೋಪಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮದ್ದೂರು ವಲಯದ ನುರ್ಜಿನೊರೆ ಪ್ರದೇಶದಲ್ಲಿ ಮದ್ದೂರು ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆರೋಪಿ ಕುಮಾರ್ ಆರ್ ಸಿಕ್ಕಿಬಿದ್ದಿದ್ದು, ತಪಾಸಣೆ ನಡೆಸಿದಾಗ 72 ಕೆಜಿಯಷ್ಟು ಶ್ರೀಗಂಧದ 3 ತುಂಡು, 6 ಜೀವಂತ ಆಮೆ ದೊರೆತಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್, ಆರ್‌ಎಫ್ ಒ ಎನ್. ಮಹದೇವ ಹೆಚ್ಚಿನ ವಿಚಾರಣೆ ನಡೆಸಿದ್ದು ಬಂಧಿತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಹಾಗು ಕರ್ನಾಟಕ ಅರಣ್ಯ ಕಾಯ್ದೆ 1963 ರಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತನ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.