ಮಧ್ಯಪ್ರದೇಶದಲ್ಲಿ ಅಳುವುದನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಒಂದು ವರ್ಷದ ಮಗಳನ್ನು ಆಕೆಯ ತಾಯಿಯ ಎದುರೇ ಪ್ರಿಯಕರನ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಈ ಮಹಿಳೆ ಪ್ರಿಯಕರನ ಜತೆ ಮಲಗಿದ್ದಳು. ಮಧ್ಯರಾತ್ರಿಯಲ್ಲಿ ಮಗು ಅಳಲು ಶುರು ಮಾಡಿದೆ. ತನ್ನ ಪ್ರಣಯಕ್ಕೆ ತೊಂದರೆ ಆಯಿತು ಎಂದು ಸಿಟ್ಟುಗೊಂಡ ಪ್ರಿಯಕರ ಮೊದಲು ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಉಸಿರಾಟವನ್ನು ನಿಲ್ಲಿಸಲು ಬಾಯಿಯನ್ನು ಮುಚ್ಚಿದ್ದಾನೆ. ಇದರಿಂದ ಮಗು ಸಾವನಪ್ಪಿದೆ. ತಾಯಿ ತನ್ನ ಮಗಳ ನಿರ್ಜೀವ ದೇಹವನ್ನು ಹಿಡಿದುಕೊಂಡು ಇಡೀ ರಾತ್ರಿ ಅಳುತ್ತಾ ಕಳೆದರೆ, ಪ್ರೇಮಿ ಹತ್ತಿರದಲ್ಲೇ ನಿದ್ದೆ ಮಾಡುತ್ತಿದ್ದ! ಮರುದಿನ ಬೆಳಗ್ಗೆ ಅವನು ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ತಾಯಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಮಾಹಿತಿಯ ಪ್ರಕಾರ, ಮೃತ ಮಗುವನ್ನು ಛಾಯಾ ಎಂದು ಗುರುತಿಸಲಾಗಿದೆ. ಆರೋಪಿ ಪ್ರೇಮಿ ಭೈಯಾಲಾಲ್ ಆದಿವಾಸಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲಿ, ಅವನು ಜಯಂತಿ ಆದಿವಾಸಿ (35) ಅವಳನ್ನು ಭೇಟಿಯಾಗಿದ್ದಾನೆ. ಜಯಂತಿ ತನ್ನ ಪತಿ ಪರಮಾನಂದ್ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ಕೆಲಸ ಮಾಡುತ್ತಿದ್ದಳು. ಸುಮಾರು 20 ದಿನಗಳ ಹಿಂದೆ ಜಯಂತಿ ತನ್ನ ಪತಿ ಮತ್ತು ಇಬ್ಬರು ಹಿರಿಯ ಮಕ್ಕಳಾದ ದಾಮಿನಿ (9) ಮತ್ತು ದೇವ್ (8) ಅವರನ್ನು ಬಿಟ್ಟು ತನ್ನ ಒಂದು ವರ್ಷದ ಮಗಳು ಛಾಯಾಳನ್ನು ಕರೆದುಕೊಂಡು ಪ್ರಿಯಕರ ಭೈಯಾಲಾಲ್ ಅವನೊಂದಿಗೆ ಶಿವಪುರಿಯಲ್ಲಿ ವಾಸವಾಗಿದ್ದಳು.