ಮೈಸೂರು: ನ್ಯಾಯಾಲಯದಲ್ಲಿರುವ ದಾವೆಯನ್ನ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಪತ್ನಿ ಮೇಲೆ ಪತಿರಾಯ ಹಾಡುಹಗಲೇ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಮೈಸೂರಿನ ಕುಕ್ಕರಹಳ್ಳಿ ಬಳಿ ನಡೆದಿದೆ. ದೌರ್ಜನ್ಯಕ್ಕೆ ಬೆದರಿದ ಪತ್ನಿ ಪತಿ ಹಾಗೂ ಇಬ್ಬರು ಸ್ನೇಹಿತರು ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಾರದಾದೇವಿ ನಗರದ ನಿವಾಸಿ ಐಶ್ವರ್ಯ ಎಂಬುವರೇ ಪತಿ ಮೇಲೆ ಪ್ರಕರಣ ದಾಖಲಿಸಿದ ಮಹಿಳೆ.ಪತಿ ಸಂದೇಶ್ ಹಾಗೂ ಇವರ ಸ್ನೇಹಿತರಾದ ವಿಜಯ್ ಕುಮಾರ್ ಮತ್ತು ಪುಟ್ಟಸ್ವಾಮಿ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ. ಎರಡು ಮಕ್ಕಳ ತಾಯಿ ಆಗಿರುವ ಐಶ್ವರ್ಯ ರವರು ಕಾರಣಾಂತರದಿಂದ ಪತಿ ಸಂದೇಶ್ ರಿಂದ ದೂರವಾಗಿದ್ದಾರೆ. ಜೀವನಾಂಶಕ್ಕಾಗಿ ಐಶ್ವರ್ಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಙಶ ನೀಡುವಂತೆ ನ್ಯಾಯಾಲಯವೂ ಆದೇಶ ನೀಡಿದೆ ಎಂದು ಹೇಳಲಾಗಿದೆ.
ಇದನ್ನ ಸಹಿಸದ ಪತಿ ಸಂದೇಶ್ ತನ್ನ ಸ್ನೇಹಿತರಾದ ವಿಜಯ್ ಕುಮಾರ್ ಹಾಗೂ ಪುಟ್ಟಸ್ವಾಮಿ ನೆರವಿನಿಂದ ಕುಕ್ಕರಹಳ್ಳಿ ಕೆರೆ ಬಳಿ ವಾಕಿಂಗ್ ಮಾಡುತ್ತಿದ್ದ ಐಶ್ವರ್ಯಾರನ್ನ ಅಡ್ಡಹಾಕಿ ಅವಾಚ್ಯ ಶಬ್ಧಗಳಿಂದ ಸಾರ್ವಜನಿಕರೆದುರು ನಿಂದಿಸಿ ಹಲ್ಲೆ ಮಾಡಿದ್ದಾರೆ. ಚಾಕು ಪ್ರದರ್ಶಿಸಿ ಇರಿದು ಸಾಯಿಸುವುದಾಗಿ ಬೆದರಿಸಿದ್ದಾರೆ. ಸಾರ್ವಜನಿಕರ ನೆರವಿನಿಂದ ಐಶ್ವರ್ಯ ಬಚಾವ್ ಆಗಿದ್ದಾರೆ.ನಂತರ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ನ್ಯಾಯಾಲಯದಲ್ಲಿ ಹಾಕಿರುವ ಪ್ರಕರಣ ಹಿಂದಕ್ಕೆ ಪಡೆಯುವಂತೆ ಧಂಕಿ ಹಾಕಿದ್ದಾನೆ.
ಬೇಕಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿಕೋ ಎಂದು ಐಶ್ವರ್ಯ ಸಹ ತಿರುಗೇಟು ನೀಡಿದ್ದಾರೆ. ಈ ವೇಳೆ ಆಸಿಡ್ ಹಾಕಿ ಇದೇ ಚಾಕುವಿನಿಂದ ಇರಿದು ಸಾಯಿಸುವುದಾಗಿ ಬೆದರಿಕೆ ಹಾಕಿ ತೆರಳಿದ್ದಾನೆ. ಸಂದೇಶ್ ವರ್ತನೆಯಿಂದ ಬೆದರಿದ ಐಶ್ವರ್ಯ ತನಗೇನಾದ್ರೂ ತೊಂದರೆ ಆದಲ್ಲಿ ಪತಿ ಸಂದೇಶ್ ಕಾರಣವಾಗುತ್ತಾರೆಂದು ಅಲ್ಲದೆ ತನಗೆ ಈತನಿಂದ ರಕ್ಷಣೆ ಬೇಕೆಂದು ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.