ಬೆಂಗಳೂರು: ವಿದೇಶಿ ಪ್ರಜೆಯ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲ 7ನೇ ಬ್ಲಾಕ್‌ಲ್ಲಿ ನಡೆದಿದೆ. ಯುಕೆ ಮೂಲದ ಪ್ರಜೆ ಗೇವಿನ್ ಜೇಮ್ಸ್ ಯಂಗ್ (59) ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಜೇಮ್ಸ್ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 1ರಂದು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಯಂಗ್, ಆಪ್ ಮೂಲಕ ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಪಡೆದಿದ್ದನು. ಜನಾರ್ದನ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದನು. ಶೆಫ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದನು.
ಜೇಮ್ಸ್ ಹೆಂಡತಿಯಿಂದ ಡೈವೋರ್ಸ್ ಕೂಡ ಪಡೆದಿದ್ದು, ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಅನಾರೋಗ್ಯದಿಂದ ಕೂಡ ಬಳಲುತ್ತಿದ್ದ ಜೇಮ್ಸ್‌ಗೆ ಬಿಪಿ, ಶುಗರ್ ಕೂಡ ಇತ್ತು. ಶುಗರ್ ಹಿನ್ನೆಲೆಯಲ್ಲಿ ಮಾತ್ರೆ ಹಾಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಓವರ್ ಡೋಸ್ ಟ್ಯಾಬ್ಲೆಟ್ ಹಾಗೂ ಇನ್ಸುಲಿನ್ ತಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ.
ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಜೇಮ್ಸ್ ಕರೆ ಮಾಡಿದ್ದು, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕೋರಮಂಗಲ ಪೊಲೀಸರಿಗೆ ಮನೆ ಮಾಲೀಕ ಜನಾರ್ದನ್ ಮಾಹಿತಿ ನೀಡಿದ್ದಾರೆ. ಕೋರಮಂಗಲ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾವಿನ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಈ ಬಗ್ಗೆ ಎಫ್ಆರ್‌ಆರ್‌ಓಗೆ ಮಾಹಿತಿ ನೀಡಿದ್ದಾರೆ. ಕೋರಮಂಗಲ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.