ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಶಾಸಕರ ಸಂಕಷ್ಟ ಹೆಚ್ಚುತ್ತಿದೆ. ಭಾದೋಹಿಯ ಎಸ್‌ಪಿ ಶಾಸಕ ಜಾಹಿದ್ ಬೇಗ್ ಅವರ ನಿವಾಸದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಾರ್ಮಿಕ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬ ಅಪ್ರಾಪ್ತ ಸೇವಕಿಯನ್ನು ರಕ್ಷಿಸಲಾಗಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ ಕಾರ್ಮಿಕರನ್ನು ಬಳಸಿದ ಆರೋಪದ ಮೇಲೆ ಶಾಸಕನ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ ಈಗ ಆತ್ಮಹತ್ಯೆಗೆ ಪ್ರಚೋದನೆಗಾಗಿ ಬಿಎನ್‌ಎಸ್ 108 ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಿದೆ.
ಸದ್ಯದಲ್ಲೇ ಶಾಸಕ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಆದರೆ, ಪ್ರಕರಣದ ಗಂಭೀರತೆಯನ್ನು ಅರಿತ ಶಾಸಕ ಕೇಸ್ ದಾಖಲಾದ ಬೆನ್ನಲ್ಲೇ ತನ್ನ ಪತ್ನಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕ ನಾಪತ್ತೆಯಾದ ಸುದ್ದಿ ತಿಳಿದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಮಾಜವಾದಿ ಪಕ್ಷದ ಶಾಸಕ ಜಾಹಿದ್ ಬೇಗ್ ಅವರ ಭದೋಹಿ ನಗರದ ನಿವಾಸದಲ್ಲಿ ಕಳೆದ ಸೋಮವಾರ ಬೆಳಿಗ್ಗೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಮಂಗಳವಾರ ಸಂಜೆ ಇನ್ನೊಬ್ಬ ಅಪ್ರಾಪ್ತ ಬಾಲಕಿಯನ್ನು ಅಲ್ಲಿಂದ ರಕ್ಷಿಸಲಾಗಿತ್ತು. ಈ ಸಂಬಂಧ ಈಗಾಗಲೇ ಸಮಾಜವಾದಿ ಪಕ್ಷದ ಶಾಸಕ ಹಾಗೂ ಆತನ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದೀಗ ಎರಡನೇ ಪ್ರಕರಣ ದಾಖಲಾಗಿದೆ.