ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಭಾನುವಾರ ರಾತ್ರಿ ಪುಣೆ ಮೂಲದ ಆರೋಪಿ ಒಬ್ಬನನ್ನು ಬಂಧಿಸಿದ್ದಾರೆ. ಮೂವರು ಶೂಟರ್‌ಗಳ ಪೈಕಿ ಈತ ತನ್ನ ಸಹೋದರನೊಂದಿಗೆ ಸೇರಿಕೊಂಡು ಹತ್ಯಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಯನ್ನು ಪ್ರವೀಣ್ ಲೋಂಕರ್ (28) ಎಂದು ಗುರುತಿಸಲಾಗಿದೆ. ಈತ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಸಂಚುಕೋರ ಎನ್ನಲಾಗಿದೆ. ಪೊಲೀಸರು ತಲೆಮರೆಸಿಕೊಂಡಿರುವ ಈತನ ಸಹೋದರ ಶುಭಂ ಲೋಂಕರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರು. ಬಂಧಿತರನ್ನು ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಎಂದು ಗುರುತಿಸಲಾಗಿತ್ತು. ಬಂಧಿತ ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು ಮತ್ತು 28 ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾನುವಾರ (ಇಂದು) ಹೊತ್ತುಕೊಂಡಿದೆ. 66 ವರ್ಷದ ಹಿರಿಯ ರಾಜಕಾರಣಿಯನ್ನು ಶನಿವಾರ ರಾತ್ರಿ ದಸರಾ ಆಚರಣೆಯ ಸಂದರ್ಭದಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆಮಾಡಲಾಗಿತ್ತು.